ಬೆಂಗಳೂರು: ಕಲಬುರಗಿ ಕೊಳೆಗೇರಿಯಲ್ಲಿ ನನ್ನವ್ವ ತರಕಾರಿ ಮಾರಿ ನನ್ನ ಸಲುಹಿದಳು. ತನ್ನ ಮಾಂಗಲ್ಯ ಮಾರಿ ವೈದ್ಯೆಯನ್ನಾಗಿ ಮಾಡಿದಳು. ಅಂತಹ ತಾಯಿಗೆ ಕ್ಯಾನ್ಸರ್ ಬಂದಾಗ ನನ್ನನ್ನು ಎಲ್ಲಿಲ್ಲದಂತೆ ಕಾಡಿತು. ಹೀಗಾಗಿಯೇ ನನ್ನ ತಾಯಿಯಂತ ಹೆಂಗಳೆಯರಿಗೆ ಆಸರೆಯಾಗಲಿ
ಎಂಬ ಉದ್ದೇಶದಿಂದ ಕ್ಯಾನ್ಸರ್ ತಜ್ಞೆಯಾದೆ.
-ಇದು ಕ್ಯಾನ್ಸರ್ ತಜ್ಞೆ ಡಾ.ವಿಜಯಲಕ್ಷ್ಮೀ ದೇಶಮಾನೆ ಅವರ ಮನದಾಳದ ಮಾತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಯನ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮನೆಯಂಗಳದಲ್ಲಿ ಮಾತುಕತೆಯ 203ನೇ ತಿಂಗಳ ಅತಿಥಿಯಾಗಿ ಪಾಲ್ಗೊಂಡು, ತಾವು ಸಾಗಿ ಬಂದ ಹಾದಿಯನ್ನು ಮೆಲಕು ಹಾಕಿದರು.
ನಾನು ಮಾದಿಗರ ಸಮುದಾಯದಿಂದ ಬಂದವಳು. ಚಪ್ಪಲಿಗೆ ಸೂಜಿ ಹಾಕಿ ಜೀವನ ಸಾಗಿಸುವುದು ನಮ್ಮ ಕಾಯಕ. ಚಪ್ಪಲಿಗೆ ಹೊಲಿಗೆ ಹಾಕೋ ಸೂಜಿಯ ಶಿಸ್ತೇ ಮುಂದೆ ನನ್ನನ್ನು ಸರ್ಜನ್ ಆಗಿ ರೂಪಿಸಿ ದೇಹದ ಅಂಗಗಳನ್ನು ಜೋಡಿಸಿ ಹೊಲಿಯುವ ಶಕ್ತಿ ನೀಡಿತು. ಹೀಗಾಗಿಯೇ ಮುಂದೆ ಅಪ್ಪನ ಆಸೆಯನ್ನು ತೀರಿಸಲು ಸಹಾಯವಾಯಿತು ಎಂದು ಹೇಳಿದರು.
ಅಪ್ಪ ಬಾಬುರಾವ್ ದೇಶಮಾನೆ ಅವರು ಸ್ವಾತಂತ್ರ್ಯ ಹೋರಾಟಗಾರರು. ನೂರು ವರ್ಷ ಸಂದಿರುವ ಅವರು ಈಗಲೂ ಗೆಳೆಯರ ಬಳಗವನ್ನು ಕಟ್ಟಿಕೊಂಡು ಹರಟೆ ಹೊಡೆಯುತ್ತಾ ಜೀವನ ಕಳೆಯುತ್ತಿದ್ದಾರೆ. ಕಡು ಬಡತನ ನಮ್ಮದಾಗಿತ್ತು. ನಾನು ಮತ್ತು ನನ್ನ ಸಹೋದರ ಜತೆಗೂಡಿ ಕಲಬುರಗಿಯ ಲಿಂಗಾಯತರ ವಾಡೆಯಲ್ಲಿ ತರಕಾರಿ ಮಾರುತ್ತಿದ್ದೇವು. ಅವ್ವನ ಅಂಗಡಿಯಲ್ಲಿ ಓದು ನಡೆಯುತ್ತಿತ್ತು. ತಳ ಸಮುದಾಯದ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದು ಮರೀಚಿಕೆಯಾಗಿದ್ದ ಕಾಲದಲ್ಲಿ ಅಪ್ಪ -ಅಮ್ಮ ಶಿಕ್ಷಣ ಭಾಗ್ಯ ನೀಡಿ ದಾರಿ ದೀಪವಾದರು. ಸರ್ಕಾರಿ ಶಾಲೆಯೇ ನನ್ನ ಕೈಹಿಡಿಯಿತು ಎಂದು ತಮ್ಮ ಬಾಲ್ಯ ತೆರೆದಿಟ್ಟರು.
24 ಗಂಟೆ ಕೆಲಸ ಮಾಡುತ್ತಿದ್ದೆ: ಕಲಬುರಗಿ ಹಾಗೂ ಹುಬ್ಬಳ್ಳಿಯಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿಕೊಂಡು ಬೆಂಗಳೂರಿಗೆ ಬಂದಾಗ ಅತ್ಯಂತ ಕಷ್ಟದ ದಿನಗಳನ್ನು ಎದುರಿಸಿದ್ದೆ. ನಮ್ಮಲ್ಲಿ ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡಬೇಕಾದ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ರೆಸಿಡೆಂಟ್ ಸರ್ಜನ್ ಆಗಿ ಕೆಲಸ ನಿರ್ವಹಿಸಿದೆ. ಸರ್ಜಿಕಲ್ ಆಂಕೋಲಜಿ ತುಂಬಾ ಕಷ್ಟದ ಕೆಲಸ. ಆದರೂ, ಜಾಗರೂಕತೆಯಿಂದಲೇ ಸುಮಾರು 35 ವರ್ಷಗಳ ಕಾಲ ಕಿದ್ವಾಯಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದೆ. ದಿನದಲ್ಲಿ 24 ಗಂಟೆಯೂ ಕೆಲಸ ಮಾಡುತ್ತಿದ್ದೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.
ಭಾವುಕರಾದ ದೇಶಮಾನೆ: ಎಂಬಿಬಿಎಸ್ ಗೆ ಬೆಂಗಳೂರಿನಲ್ಲಿ ಸಂದರ್ಶನಕ್ಕಾಗಿ ಬಂದಿದ್ದ ಸಂದರ್ಭದಲ್ಲಿ ಇದ್ದಕ್ಕಿಂದ್ದಂತೆ ಸಂದರ್ಶನ ಮುಂದೂಡಲಾಗಿದೆ ಎಂದಿದ್ದರು. ಹೊರಗಡೆ ಜೋರು ಮಳೆ. ಆಶ್ರಯ ನೀಡಲು ಯಾರೂ ಇರಲಿಲ್ಲ. ಅಪ್ಪ ಕಾರ್ಮಿಕರ ಬಳಿ ಬೇಡಿಕೊಂಡು ಅವರ ಕೋಣೆಯೊಳಗೆ ನನ್ನನ್ನು ಮಲಗಿಸಿ ರಾತ್ರಿ ಪೂರ್ತಿ ಅವರು ನಿದ್ದೆ ಮಾಡಿರಲಿಲ್ಲ. ಈ ದೃಶ್ಯ ಇಂದಿಗೂ ನನ್ನ ಕಣ್ಣ ಮುಂದೆ ಕಾಣುತ್ತಿದೆ ಎಂದು ಭಾವುಕರಾಗಿ ನುಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎನ್.ಆರ್. ವಿಶುಕುಮಾರ್ ಉಪಸ್ಥಿತರಿದ್ದರು.
ಅಪ್ಪನಿಗೆ ನಾನು ಅಂದ್ರೆ ತುಂಬಾ ಇಷ್ಟ. ಈಗಲೂ ಕಲಬುರಗಿಯ ಮನೆಗೆ ಹೋದಾಗ ನನಗೆ ಅಪ್ಪನೇ ಮಲಗಲು ಹಾಸಿಗೆ ಸಿದ್ದಪಡಿಸುತ್ತಾರೆ. ಅಲ್ಲದೆ ತಲೆ ಬಾಚುತ್ತಾರೆ. ಅವರಿಗೆ ಈ ಕೆಲಸ ಮಾಡದಿದ್ದರೆ ತೃಪ್ತಿಯಾಗುವುದಿಲ್ಲ. ಅಂತಹ ತಂದೆ -ತಾಯಿ ಪಡೆದಿದ್ದೇ ನನ್ನ ಪುಣ್ಯ ಎಂದು ಕ್ಯಾನ್ಸರ್ ತಜ್ಞೆ ಡಾ.ವಿಜಯಲಕ್ಷ್ಮೀ ದೇಶಮಾನೆ ಹೇಳಿದರು.
45ರಿಂದ 50 ವರ್ಷದಲ್ಲಿದ್ದಾಗ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ. ಕ್ಯಾನ್ಸರ್ ಅಂದ ತಕ್ಷಣ ಭಯಪಡುವ ಅಗತ್ಯ ಇಲ್ಲ. ತಾಂತ್ರಿಕ ಕ್ಷೇತ್ರ ಸಾಕಷ್ಟು ಮುಂದುವರಿದಿದ್ದು ಸ್ತನ ಕ್ಯಾನ್ಸರ್ ಗುಣಪಡಿಸಲಾಗುತ್ತದೆ. ಸರ್ಕಾರಿ ಆಸ್ಪತ್ರೆಯಲ್ಲಿ ಒಳ್ಳೆಯ ಸರ್ಜನ್‌ಗಳು ಇದ್ದು ಸರ್ಕಾರಿ ವೈದ್ಯರ ಸೇವೆಯನ್ನು ಪಡೆಯಬೇಕು.