Advertisement

ಅವಳನ್ನು ಮೆಚ್ಚಿಸಲೆಂದೇ ವೇದಿಕೆ ಹತ್ತಿ ಮಾತಾಡಿದೆ…

03:50 AM Mar 28, 2017 | |

ಕೊನೆಯ ಬಾರಿಯೊಮ್ಮೆ ಮಾತನಾಡಿಸೋಣ ಅಂತ ಕ್ಯಾಂಪಸ್‌ ತುಂಬೆಲ್ಲಾ ಹುಡುಕಿದೆ. ಅವಳು ಸಿಗಲಿಲ್ಲ. ಮಿಂಚಿನಂತೆ ಅವಳು ಹೀಗೆ ಬಂದು ಹಾಗೆ ಮಾಯವಾಗಿದ್ದಳು. ನನಗೆ ಚೆನ್ನಾಗಿ ಗೊತ್ತಿತ್ತು. ಅವಳನ್ನು ಇನ್ನೆಂದಿಗೂ ನಾನು ನೋಡಲಾರೆ ಅಂತ. ಮನಸ್ಸು ಭಾರವಾಯಿತು. ಉಕ್ಕಿ ಬಂದ ಕಣ್ಣೀರನ್ನು ಹಿಡಿಯಲು ಸಾಧ್ಯವಾಗದೆ ಕೈಚೆಲ್ಲಿದೆ. 

Advertisement

ನಾನು ಪಿಯುಸಿ ಓದುತ್ತಿದ್ದ ಸಂದರ್ಭ. ಆಗಷ್ಟೇ ಯೌವನಕ್ಕೆ ಕಾಲಿರಿಸಿದ್ದೆ. ಎಲ್ಲ ಹುಡುಗರಂತೆಯೇ ವಿಪರೀತ ಹಗಲುಗನಸುಗಳು. ಹುಡುಗಿಯರ ಬಗ್ಗೆ ಕುತೂಹಲ, ಇಂಗ್ಲೀಷ್‌ ಬಗೆಗಿನ ಭಯ, ಸಂಕೋಚ ಇವೆಲ್ಲವೂ ಸಹಜವಾಗಿದ್ದವು. ಕಾಲೇಜಿನಲ್ಲಿ ಓದುತ್ತಿದ್ದಾಗ ಒಂದು ಹುಡುಗಿ ನನ್ನನ್ನು ಕಂಡಾಗಲೆಲ್ಲಾ ನಗುತ್ತಿದ್ದಳು. ಸದಾ ಅಂಟಿಕೊಂಡಂತಿರುವ ತನ್ನ ಸ್ನೇಹಿತೆಯೊಂದಿಗೆ ಇರುತ್ತಿದ್ದ ಆ ಹುಡುಗಿ ನನ್ನನ್ನು ಕಂಡೊಡನೆ ನಿಧಾನವಾಗಿ ತನ್ನ ಗೆಳತಿಯ ಹತ್ತಿರ ಏನನ್ನೋ ಹೇಳಿಕೊಂಡು ನಗುತ್ತಿದ್ದಳು. ಬಹುಶಃ ಅವಳಿಗೆ ನಾನು ಜೋಕರ್‌ ತರಹ ಕಾಣಿಸಿದೇನೋ ಗೊತ್ತಿಲ್ಲ. ಮೊದಮೊದಲು ಅವಳ ನಗು ನನ್ನಲ್ಲಿ ತುಂಬಾ ಕೋಪವನ್ನು ತರಿಸುತ್ತಿತ್ತು. ಆದರೆ ಅವಳ ಮುದ್ದಾದ ನಗುವಿನಲಿ Éಅಪಹಾಸ್ಯ ಕಾಣಲಿಲ್ಲ. ಯಾಕೋ ಏನೋ, ಈ ವಿಚಾರದ ಬಗ್ಗೆ ಅವಳಲ್ಲಿ ನೇರವಾಗಿ ಕೇಳಿಬಿಡೋಣ ಎಂದೆನಿಸಿತು. ಆದರೆ ಅವಳ ಎದುರು ನಿಂತು ಮಾತನಾಡಲು ಧೈರ್ಯ ಸಾಕಾಗುತ್ತಿರಲಿಲ್ಲ. ಅವಳೂ ಅಷ್ಟೇ, ನನ್ನೊಂದಿಗೆ ಮಾತನಾಡುವ ಪ್ರಯತ್ನ ಮಾಡಲಿಲ್ಲ. ನನಗೆ ಅವಳ ಮೇಲೆ ಕ್ರಶ್‌ ಶುರುವಾಗಿತ್ತು.

ಅವಳೇನು ಶಾಂತ ಸ್ವಭಾವದ ಹುಡುಗಿಯಾಗಿರಲಿಲ್ಲ. ಮಾತಿನ ಮಲ್ಲಿಯಾಗಿದ್ದ ಅವಳು ನನ್ನ ಗೆಳೆಯರೊಂದಿಗೆ, ತನ್ನ ಸ್ನೇಹಿತೆಯರೊಂದಿಗೆ ಮುಕ್ತವಾಗಿ ಮಾತನಾಡುತ್ತಿದ್ದ ತರೆಲ ಹುಡುಗಿಯಾಗಿದ್ದಳು. ಅದ್ಯಾಕೋ ಗೊತ್ತಿಲ್ಲ, ನನ್ನೊಂದಿಗೆ ಮಾತ್ರ ಮಾತನಾಡುತ್ತಿರಲಿಲ್ಲ. ಅದ್ಯಾವ ಕಾರಣಕ್ಕಾಗಿ “ಮೌನ ಒಪ್ಪಂದ’ ಮಾಡಿಕೊಂಡಿದ್ದಳ್ಳೋ ನಾ ಕಾಣೆ. ನಂಬಿದರೆ ನಂಬಿ, ಬಿಟ್ಟರೆ ಬಿಡಿ, ನಾವಿಬ್ಬರೂ ಎರಡು ವರ್ಷ ಒಂದೇ ಕ್ಲಾಸಿನಲ್ಲಿ ಓದಿದರೂ, ಒಂದು ದಿನವೂ ಮಾತಾಡಲಿಲ್ಲ. ನಮ್ಮಿಬ್ಬರ ನಡುವಿನ ಈ ಮೌನ ಒಪ್ಪಂದದ ರಹಸ್ಯ ಅವಳ ಗೆಳತಿಯನ್ನು ಬಿಟ್ಟರೆ ಯಾರಿಗೂ ಗೊತ್ತಿರಲಿಲ್ಲ. ಎಲ್ಲರೊಂದಿಗೆ ಮುಕ್ತವಾಗಿ ಹರಟೆ ಹೊಡೆಯುತ್ತಿದ್ದ ಅವಳು, ನಾನು ಬಂದ ತಕ್ಷಣ ಸುಮ್ಮನಾಗುತ್ತಿದ್ದಳು. ಇನ್ನೂ ಪ್ರಾಕ್ಟಿಕಲ್‌ ಲ್ಯಾಬ್‌ನಲ್ಲಂತೂ, ನನ್ನ ಮುಂದೆ ಟೆಸ್ಟ್‌ ಟ್ಯೂಬ್‌ ಹಿಡಿದುಕೊಂಡು ಎಷ್ಟು ಗಂಭೀರತೆಯಿಂದ ಕೆಮಿಕಲ್‌ ಟೆಸ್ಟ್‌ ಮಾಡುತ್ತಿದ್ದಳೆಂದರೆ, ಇವಳೇನು ಸೈಂಟಿಸಾ r,ಇಲ್ಲಾ ಸ್ಟುಡೆಂಟಾ? ಎಂಬ ಅನುಮಾನ ಕಾಡುತ್ತಿತ್ತು ನನಗೆ. ಕ್ಲಾಸಿನಲ್ಲಿ ನಮ್ಮ ಲೆಕ್ಚರರ್ ನನ್ನ ಬಗ್ಗೆ ಮಾತನಾಡಿದರೆ ಅವಳ ಕಣ್ಣುಗಳಲ್ಲಿ ಅಭಿಮಾನದ ಮೆಚ್ಚುಗೆಯನ್ನು ಕಾಣುತ್ತಿದ್ದೆ. 

ನಿಜ ಹೇಳಬೇಕೆಂದರೆ, ಅವಳನ್ನು ಕಂಡಾಗಲೆಲ್ಲಾ ನನ್ನ ಮನಸ್ಸು ಚಿಟ್ಟೆಯಂತೆ ಹಾರಾಡುತ್ತಿತ್ತು. ಅಂತೂ ಪಿಯುಸಿ ಮುಗಿಯುವ ಸಮಯ ಬಂತು. ನನಗೆ ವಿಚಿತ್ರ ಆಸೆಯೊಂದು ಮೊಳಕೆಯೊಡೆಯಿತು. ಹೇಗಾದರೂ ಮಾಡಿ ಅವಳನ್ನು ನಗಿಸಬೇಕು, ಒಂದು ದಿನದ ಮಟ್ಟಿಗಾದರೂ ಅವಳ ಕಣ್ಣಲ್ಲಿ ನಾನು ಹೀರೋ ಆಗಬೇಕು ಎಂಬ ಆಸೆ. ಅದಕ್ಕಾಗಿ ನಾನು ಆಯ್ದುಕೊಂಡದ್ದು ಬೀಳ್ಕೊಡುಗೆ ಸಮಾರಂಭವನ್ನು. ನಾನು ಹನಿಗವನಗಳನ್ನು ವಾಚಿಸುವುದೆಂದು ನಿರ್ಧರಿಸಿದೆ. ಅದುವರೆಗೂ ನಾನು ವೇದಿಕೆ ಹತ್ತಿ ಮಾತನಾಡಿದವನಲ್ಲ. ಎಲ್ಲಿ ಸಭಾಕಂಪನದಿಂದ ಎಲ್ಲರ ಮುಂದೆ ನಗೆಪಾಟಲಿಗೆ ಗುರಿಯಾಗಿಬಿಡುತ್ತೇನೋ ಎಂ¸ ಭಯವೂ ಕಾಡುತ್ತಿತ್ತು. ಆದರೂ ನನಗೆ ನನ್ನ ಆಸೆ ಪೂರೈಸಿಕೊಳ್ಳುವುದೇ ಮುಖ್ಯವಾಗಿತ್ತು. ಅದಕ್ಕಾಗಿ ಯಾವ ಅವಮಾನವನ್ನಾದರೂ ಎದುರಿಸಲು ಸಿದ್ಧನಿದ್ದೆ.

ಭಾಷಣ, ಡ್ಯಾನ್ಸು, ಹಾಡು ನಾಟಕ ಎಲ್ಲಾ ಮುಗಿದ ನಂತರ ನನ್ನ ಸರದಿ ಬಂತು. ಐದು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದ ಆ ಸಮಾರಂಭದಲ್ಲಿ ವೇದಿಕೆ ಮೇಲೆ ನಿಂತಿದ್ದ ನನಗೆ ಅವರನ್ನೆಲ್ಲಾ ನೋಡಿ ಒಂದು ಕ್ಷಣ ಎದೆ ಝಲ್ಲೆಂದಿತು. ಆದರೂ ಧೈರ್ಯ ಮಾಡಿ ನಿಧಾನವಾಗಿ ಒಂದೊಂದು ಹಾಸ್ಯ ಹನಿಗವನಗಳನ್ನು ಹೇಳಲು ಶುರುಮಾಡಿದೆ. ಪ್ರತಿಯೊಂದು ಹನಿಗವನಕ್ಕೂ ನನ್ನ ಸ್ನೇಹಿತರಿಂದ “ಹೋ’ ಎನ್ನುವ ಉದ್ಗಾರದ ಪ್ರೋತ್ಸಾಹ ದೊರೆಯಿತು. ಅಂದು ನಾನು ಹದಿನೈದು ನಿಮಿಷಕ್ಕೂ ಹೆಚ್ಚು ಕಾಲ ಮಾತನಾಡಿದೆ. ನನ್ನ ಜೀವನದಲ್ಲಿ ಮೈಕ್‌ ಹಿಡಿದು ಅಷ್ಟು ಹೊತ್ತು ಮಾತನಾಡಿದ್ದು ಅದೇ ಮೊದಲು. ಕಾರ್ಯಕ್ರಮ ಮುಗಿದ ನಂತರ ಕೊನೆಯ ಬಾರಿಯೊಮ್ಮೆ ಮಾತನಾಡಿಸೋಣ ಅಂತ ಕ್ಯಾಂಪಸ್‌ ತುಂಬೆಲ್ಲಾ ಹುಡುಕಿದೆ. ಅವಳು ಸಿಗಲಿಲ್ಲ. ಮಿಂಚಿನಂತೆ ಅವಳು ಹೀಗೆ ಬಂದು ಹಾಗೆ ಮಾಯವಾಗಿದ್ದಳು. ನನಗೆ ಚೆನ್ನಾಗಿ ಗೊತ್ತಿತ್ತು. ಅವಳನ್ನು ಇನ್ನೆಂದಿಗೂ ನಾನು ನೋಡಲಾರೆ ಅಂತ. ಮನಸ್ಸು ಭಾರವಾಯಿತು. ಉಕ್ಕಿ ಬಂದ ಕಣ್ಣೀರನ್ನು ಹಿಡಿಯಲು ಸಾಧ್ಯವಾಗದೆ ಕೈಚೆಲ್ಲಿದೆ. ಭಾರವಾದ ಹೆಜ್ಜೆಗಳನ್ನಿಡುತ್ತಾ ರೂಮಿನತ್ತ ನಡೆದೆ. ಈ ಘಟನೆಗಳೆಲ್ಲಾ ನಡೆದು ಐದಾರು ವರ್ಷಗಳಾದರೂ ಅವಳ ಚಹರೆಯ ಗುರುತು ನನ್ನ ಮನಸ್ಸಿನಿಂದ ದೂರವಾಗಿಲ್ಲ. ಎಲ್ಲೇ ಇದ್ದರೂ ಅವಳು ಸದಾ ನಗುನಗುತ್ತಾ ಇರಲಿ ಎಂಬುದೇ ನನ್ನ ಬಯಕೆ.

Advertisement

ಹನಮಂತ ಕೊಪ್ಪದ, ಮೈಸೂರು

Advertisement

Udayavani is now on Telegram. Click here to join our channel and stay updated with the latest news.

Next