ಚನ್ನೈ : ಮನುಷ್ಯನಿಗೆ ಕಷ್ಟಗಳು ಎಷ್ಟೇ ಬರಲಿ ದುಡಿದು ತಿನ್ನುವ ದಾರಿಯೊಂದು ಇದ್ದರೆ ಎಂಥ ಕಷ್ಟವನ್ನು ಬೇಕಾದರೂ ಮೆಟ್ಟಿ ನಿಲ್ಲಬಹುದು ಎನ್ನುವ ಮಾತಿಗೆ ಸಾಕ್ಷಿಯಾಗಿದ್ದಾರೆ ಕೊಯಮತ್ತೂರಿನ 82 ವರ್ಷದ ಅಜ್ಜಿ ಕಮಲಥಾಲ್.
ಕೊಯಮತ್ತೂರಿನ ವಂಡಿವೇಲಂಪಲಯಂನ ಕಮಲಥಾಲ್ ಕಳೆದ 30 ವರ್ಷಗಳಿಂದ ತನ್ನ ಪುಟ್ಟ ಗೂಡಂಗಡಿಯಲ್ಲಿ ಇಡ್ಲಿಯನ್ನು ತಯಾರಿಸಿಕೊಂಡು ವ್ಯಾಪಾರ ನಡೆಸುತ್ತಿದ್ದಾರೆ. ಅಚ್ಚರಿಯ ಸಂಗತಿ ಅಂದರೆ ತನ್ನ ಇಳಿ ವಯಸಿನಲ್ಲೂ ಕಮಲಥಾಲ್ ದಿನಕ್ಕೆ 400-500 ಇಡ್ಲಿಗಳನ್ನು ತಯಾರಿಸುತ್ತಾರೆ. ವಿಶೇಷ ಅಂದರೆ ಇವರು ಇಡ್ಲಿಗಳನ್ನು ಮಾರುವುದು ಕೇವಲ ಒಂದು ರೂಪಾಯಿಗೆ.
ಕಮಲಥಾಲ್ ಅಜ್ಜಿಯ ಕುರಿತು ಎ.ಎನ್.ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಕಮಲಥಾಲ್ ಹತ್ತಿರ ಅಡುಗೆ ಅನಿಲ ಯಾಕೆ ಬಳಸಲ್ಲ ಎಂದು ಕೇಳಿದಾಗ “ನನಗೆ ಅಡುಗೆ ಅನಿಲ ಬಳಸುವುದು ಹೇಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ . ಕಮಲಥಾಲ್ ಅಷ್ಟು ಇಡ್ಲಿಗಳನ್ನು ಬೆಳಗಿನ ಜಾವ ಐದು ಗಂಟೆಗೆ ಎದ್ದು, 8 ಕೆ.ಜಿ ಅಕ್ಕಿಯನ್ನು ತಾವೇ ರುಬ್ಬುತ್ತಾರೆ ಜೊತೆಗೆ ಚಟ್ನಿ ತಯಾರಿಸಿ, ಒಲೆಯ ಮೇಲೆ ಹಬೆಯಾಡುವ ಬಿಸಿ ಬಿಸಿ ಇಡ್ಲಿ ತಯಾರಿಸಿಕೊಂಡು ಬೆಳಗ್ಗೆ ಏಳು ಗಂಟೆಯ ಹೊತ್ತಿಗೆ ಅಂಗಡಿಯನ್ನು ತೆರೆಯುತ್ತಾರೆ.
ವಿವಿಧ ಖಾಸಗಿ ವಾಹಿನಿಯಲ್ಲಿ ಕಮಲಥಾಲ್ ಕುರಿತು ವರದಿಯಾದ ಬಳಿಕ ಮಹೀಂದ್ರ ಗ್ರೂಪಿನ ಮುಖ್ಯಸ್ಥರಾದ ಆನಂದ್ ಮಹೀಂದ್ರ ಕಮಲಥಾಲ್ ಅವರ ಕಾರ್ಯ ನಿಜಕ್ಕೂ ಮೆಚ್ಚುವಂಥದ್ದು ಎಂದು ಹೇಳಿ, ಅವರ ವ್ಯವಹಾರದಲ್ಲಿ ನಾನು ಹೊಡಿಕೆ ಮಾಡಲು ಇಷ್ಟ ಪಡುತ್ತೇನೆ ಹಾಗೂ ಅವರಿಗೆ ಅಡುಗೆ ಅನಿಲ ಖರೀದಿಗೆ ನಾನು ಸಹಾಯ ಮಾಡಲು ಇಚ್ಛೀಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಆನಂದ್ ಮಹೀಂದ್ರ ಅವರ ಟ್ವೀಟ್ ವೈರಲ್ ಆಗುತ್ತಿದ್ದಂತೆ ಕೊಯಮತ್ತೂರಿನ ಭಾರತ್ ಪೆಟ್ರೋಲಿಯಂ ವಿಭಾಗ ಕಮಲಥಾಲ್ ಅವರಿಗೆ ಉಚಿತ ಅಡುಗೆ ಅನಿಲ ಸಂಪರ್ಕವನ್ನು ಮಾಡಿಕೊಟ್ಟಿದೆ.ಇಷ್ಟೆ ಅಲ್ಲದೆ ಕೇಂದ್ರದ ಇಂಧನ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಕಮಲಥಾಲ್ ಅವರ ಕಾರ್ಯದ ಬಗ್ಗೆ ಶ್ಲಾಘನೀಯ ನುಡಿಗಳನ್ನು ಟ್ವೀಟ್ ಮಾಡಿದ್ದಾರೆ.
ಕಮಲಥಾಲ್ ಕಳೆದ 15 ವರ್ಷಗಳಿಂದ ತಾವು ತಯಾರಿಸುವ ಇಡ್ಲಿಯ ಬೆಲೆಯನ್ನು ಕೇವಲ ಒಂದು ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ನನಗೆ ಇದು ಎಲ್ಲಿಯವರೆಗೆ ಮುಂದುವರೆಯುತ್ತದೆ ಎನ್ನುವುದು ಗೊತ್ತಿಲ್ಲ ನನ್ನ ಜೊತೆ ಕುಟುಂಬದ ಯಾವ ಸದಸ್ಯರು ಇಲ್ಲ ನಾನು ಒಬ್ಬಳೇ ಈ ವ್ಯಾಪಾರವನ್ನು ಬೆಳಗ್ಗಿನಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಾಡುತ್ತಿದ್ದೇನೆ. ದಿನಕ್ಕೆ 200 ರೂಪಾಯಿ ಮಾತ್ರ ನನ್ನ ಜೀವನ ನಿರ್ವಹಿಸಲು ಉಳಿಯುತ್ತದೆ ಎಂದು ಕಮಲಥಾಲ್ ಸುದ್ದಿ ಸಂಸ್ಥೆ ಜೊತೆ ಮಾತಾಡುವ ಸಂದರ್ಭದಲ್ಲಿ ಹೇಳಿದರು.