ಬಾಲಿವುಡ್‌ನ ಎವರ್‌ಗ್ರೀನ್ ಚೆಲುವೆ ಶ್ರೀದೇವಿ ಕಳೆದ 2018ರ ಫೆ. 24ರಂದು ತಮ್ಮ ಸಂಬಂಧಿಕರ ಮದುವೆಗೆ ಹೋದಾಗ ದುಬೈನ ಪ್ರತಿಷ್ಠಿತ ಹೊಟೇಲ್‌ನಲ್ಲಿ ಅಕಾಲಿಕ ನಿಧನರಾಗಿದ್ದರು. ಈ ಸಾವಿನ ಬಗ್ಗೆ ತನಿಖೆ ನಡೆಸಿದ್ದ ದುಬೈ ಪೊಲೀಸರು ಇದು ಆಕಸ್ಮಿಕ ಸಾವು, ಪಾನಮತ್ತರಾಗಿದ್ದರಿಂದ ಕಾಲು ಜಾರಿ ಬಾತ್‌ಟಬ್‌ನಲ್ಲಿ ಬಿದ್ದು ಮುಳುಗಿ ಸಾವನ್ನಪ್ಪಿದ್ದಾರೆ ಎಂದು ವರದಿ ನೀಡಿದ್ದರು.
ಶ್ರೀದೇವಿಯವರ ನಿಧನದ ಸುದ್ದಿ ಸಹಜವಾಗಿಯೇ ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ಆಘಾತವನ್ನು ಉಂಟು ಮಾಡಿತ್ತು. ಮತ್ತೂಂದೆಡೆ ಶ್ರೀದೇವಿ ಅವರ ಅಕಾಲಿಕ ನಿಧನದ ಸುತ್ತ ಅನೇಕ ಅನುಮಾನ ಎದ್ದಿದ್ದವು. ಶ್ರೀದೇವಿಯವರದ್ದು ಸಹಜ ಸಾವಲ್ಲ, ಅದೊಂದು ಕೊಲೆ ಎಂದು ಅನೇಕರು ಅನುಮಾನ ವ್ಯಕ್ತಪಡಿಸಿದ್ದರು. ಕೆಲಕಾಲ ಈ ಬಗ್ಗೆ ಒಂದಷ್ಟು ಚರ್ಚೆ ನಡೆದು ಬಳಿಕ ವಿಷಯ ತಣ್ಣಗಾಗಿತ್ತು. ಇದೀಗ ಮತ್ತೆ ಶ್ರೀದೇವಿ ಸಾವಿನ ಸುದ್ದಿ ಚರ್ಚೆಗೆ ಬಂದಿದೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಕೇರಳ ಡಿಜಿಪಿ ರಿಷಿರಾಜ್ ಸಿಂಗ್,”ಶ್ರೀದೇವಿ ಅವರದ್ದು ಆಕಸ್ಮಿಕ ಸಾವಲ್ಲ, ಇದು ಪೂರ್ವನಿಯೋಜಿತ ಕೊಲೆ. ಅವರ ಸಾವಲ್ಲಿ ಅನೇಕ ರೀತಿಯ ಅನುಮಾನಗಳಿವೆ, ಅದನ್ನು ಮುಚ್ಚಿಡಲಾಗಿದೆ. ಈ ಬಗ್ಗೆ ಹಲವು ಸಾಕ್ಷಿ ಆಧಾರಗಳು ಕೂಡ ಇವೆ. ಶ್ರೀದೇವಿ ಅವರ ಶವಪರೀಕ್ಷೆ ನಡೆಸಿದ್ದ ನನ್ನ ಸ್ನೇಹಿತ ವಿಧಿವಿಜ್ಞಾನ ತಜ್ಞ ಡಾ. ಉಮದತನ್ ಅವರು, ಶ್ರೀದೇವಿ ಸಾವಿನ ಕುರಿತು ಹಲವು ವಿಷಯಗಳನ್ನ ನನ್ನ ಬಳಿ ಪ್ರಸ್ತಾಪಿಸಿದ್ದಾರೆ. ಹಲವು ಸಾಂದರ್ಭಿಕ ಪುರಾವೆ ತೋರಿಸಿ, ಇದು ಆಕಸ್ಮಿಕ ಸಾವಲ್ಲ, ಇದು ಕೊಲೆ ಎಂದು ಹೇಳುತ್ತಿದ್ದರು. ಶ್ರೀದೇವಿ ಕೊಲೆಯಾದ ಜಾಗದ ಸುತ್ತಮುತ್ತಲಿನ ಸಾಕ್ಷಿಗಳ ಬಗ್ಗೆಯೂ ಮಾತನಾಡಿದ್ದರು’ ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.
ಈಗಾಗಲೇ ಶ್ರೀದೇವಿ ಅವರ ನಿಗೂಢ ಸಾವಿನ ಬಗ್ಗೆ ಅನೇಕ ಹಿರಿಯ ಐಪಿಎಸ್ ಮಟ್ಟದ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದು, ಡಿಜಿಪಿ ದರ್ಜೆಯ ಹಿರಿಯ ಅಧಿಕಾರಿಯೊಬ್ಬರು ಇಂಥದ್ದೊಂದು ಹೇಳಿಕೆ ನೀಡಿರುವುದು ಮತ್ತೆ ಶ್ರೀದೇವಿಯವರ ಸಾವಿನ ವಿಷಯ ಚರ್ಚೆಗೆ ಬರುವಂತೆ ಮಾಡಿದೆ. ಆದರೆ ಈ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ಶ್ರೀದೇವಿ ಪತಿ ಬೋನಿ ಕಪೂರ್, “ಇದೊಂದು ಅಸಂಬದ್ಧ ಹೇಳಿಕೆ, ಇಂತಹ ಹೇಳಿಕೆಗಳಿಗೆ ನಾನು ಉತ್ತರಿಸಲಾರೆ. ಶ್ರೀದೇವಿಯ ಸಾವು ಸದ್ಯಕ್ಕೆ ಮುಗಿದ ಅಧ್ಯಾಯ ಅದರ ಬಗ್ಗೆ ಅನಗತ್ಯ ಚರ್ಚೆಗಳು ಬೇಡ’ ಎಂದು ಹೇಳುವ ಮೂಲಕ ಈ ಆರೋಪವನ್ನ ಮತ್ತೆ ಅನುಮಾನದಿಂದ ನೋಡುವಂತೆ ಮಾಡಿದ್ದಾರೆ.
ಒಟ್ಟಾರೆ ನಾಲ್ಕೈದು ದಶಕಗಳ ಕಾಲ ಭಾರತೀಯ ಚಿತ್ರರಂಗದಲ್ಲಿ ಮೆರೆದಿದ್ದ ಮಹಾನ್ ನಟಿಯೊಬ್ಬಳ ಹೆಸರು ಆಕೆಯ ಅಭಿನಯ, ಸೌಂದರ್ಯಕ್ಕಿಂತ ಹೆಚ್ಚಾಗಿ ಸಾವಿನ ವಿಷಯಕ್ಕೇ ಆಗಾಗ್ಗೆ ಸುದ್ದಿಯಾಗುತ್ತಿರುವುದು ನಿಜಕ್ಕೂ ಆಕೆಯ ಅಭಿಮಾನಿಗಳಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ ಅನ್ನೋದಂತೂ ಸತ್ಯ.