“ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ’ ಎಂಬ ಗಾದೆಯಿದೆ. “ಸಾಸ್ ಭೀ ಕಭಿ ಬಹೂ ಥೀ’ ಅಂತ ಹಿಂದಿಯಲ್ಲೂ ಹೇಳುತ್ತಾರೆ. ಎರಡರ ಅರ್ಥವೂ ಒಂದೇ! ಆದರೆ, ಸಂಬಂಧ ಸುಧಾರಿಸಲು ಸರಳ ಸೂತ್ರವೊಂದಿದೆ. ಆ ಸೂತ್ರವೇನೆಂಬುದನ್ನು ಈ ಅತ್ತೆ-ಸೊಸೆ ಕಂಡುಕೊಂಡಿದ್ದಾರೆ…
“ನಾನು ಅತ್ತಿ ಅಲ್ರಿ, ನನ್ನ ಸೊಸೀನಾ ನನಗ ಅತ್ತಿ ಅಗ್ಯಾಳ ನೋಡ್ರೀ..’ ಎಂಬ ಆ ಹಿರಿಯರ ಮಾತು ಕೇಳಿ, ಸೊಸೆಯ ಬಗ್ಗೆ ಅತ್ತೆಯ ಬೈಯ್ಯುವ ಮಾಮೂಲಿ ಚಾಳಿ ಶುರುವಾಗಬಹುದು ಎಂದುಕೊಂಡಿದ್ದೆ. ಆದರೆ, ನನ್ನ ಲೆಕ್ಕಾಚಾರ ತಲೆಕೆಳಗಾಯಿತು.
“ನನಗ ಸೊಸೀ ಅನ್ನೂಕಿಂತ ಮಗಳು ಅಂದ್ರನಾ ಸರಿ ಅನ್ನಿಸ್ತೇತಿ ನೋಡ್ರೀ. ನಮ್ಮ ಮಗಳೇನೋ ಕೊಟ್ಟ ಮನ್ಯಾಗ್ ಛಲೋ ಅದಾಳ್ರಿ, ಅಷ್ಟು ಸಾಕು ನಮಗ. ಹಬ್ಬಕ್ಕ, ಹುಣ್ಣಮಿಗ, ಫಂಕ್ಷನ್‌ಗ ಬರ್ತಾ, ಹೋಗ್ತಾ ಇರ್ತಾಳ್ರಿ. ನಮ್ಮ ಸೊಸೀ ಅಂತೂ, ಮಗಳು ತಾಯಿ- ತಂದೀನಾ ನೋಡಿಕೊಂಡ ಹಾಗ ನಮ್ಮನ್ನು ನೋಡ್ಕೊ ತಾಳ್ರಿ. ಮನೀ ಬಗ್ಗೀ ನಂಗ ಚಿಂತೀನಾ ಇಲ್ಲ. ಎಲ್ಲಾ ನಿಭಾಯಿಸಿಕೊಂಡು ಹೋಗ್ತಾಳ. ಬಂದೋರೂ, ಹೋದೋರ್ನ ಚಂದಾಗ್ ನೋಡ್ಕೊàತಾಳ, ನಮ್ಮ ಕಡೀಯೋರಾದ್ರೂ ಅಷ್ಟಾ, ಆಕೀನ್ ಕಡಿಯೋರು ಬಂದ್ರೂ ಅಷ್ಟಾ. ನಂಗ್ ಕೆಲಸ್ ಮಾಡಾಕಾ ಬಿಡಾಂಗಿಲ್ರಿ! ಎಲ್ಲಾ ಆಕೀನಾ ಮಾಡ್ಕೊತಾಳ. ಆದ್ರೂ ನನ್ನ ಕೈಲಾದಷ್ಟು ನಾ ಮಾಡಿಕೊಡ್ತೇನಿ. ಫ್ಯಾಷನ್ನೂ ಹಂಗಾ ಮಾಡ್ತಾಳಾ, ಸಂಸಾರನೂ ಹಂಗಾ ಚಾಣಾಕ್ಷವಾಗಿ ತೂಗಿಸ್ತಾಳಾ. ಮಕ್ಳ ಓದು ಬರಹಕ್ಕೂ ಅಷ್ಟಾ ಗಮನ ಕೊಡ್ತಾಳಾ. ತಾನೂ ಮದುವಿ ಆದ್ ಮ್ಯಾಗ್ ಪದವಿ ಪರೀಕ್ಷ ಕಟ್ಕೊಂಡು ಪಾಸ್ ಮಾಡ್ಕೊಂಡಾಳ. ಇನ್ನೇನು ಬೇಕ್ರೀ? ಮನೀ ಕಡೀ ಚಿಂತೀನಾ ಮಾಡಂಗಿಲ್ಲ. ನೀವಾ ಹೋಗಿ ಬರ್ರೀ, ನಾ ಮನೀ ಕಡೀ ನೋಡ್ಕೊತೇನಿ ಅಂತಾ ನಮ್ಮನ್ನ ಕಳಿಸಿಬಿಡ್ತಾಳ. ನಾ ಆರಾಮಾಗ್ ಫಂಕ್ಷನ್‌ಗಳನ್ನ ಅಟೆಂಡ್ ಮಾಡ್ಕೊತ ಅದೇನಿ ನೋಡ್ರೀ…’
ಹೀಗೂ ಉಂಟೇ..?
ಅವರು ಹೇಳುವುದನ್ನು ಕೇಳುತ್ತಿದ್ದರೆ, ಅತ್ತೆಯಾದವಳು ಸೊಸೆಯನ್ನು ಇಷ್ಟು ಹೆಮ್ಮೆಯಿಂದ ಹೊಗಳುವುದೂ ಉಂಟೇ ಎಂದು ಆಶ್ಚರ್ಯವಾಯಿತು. ಮಾತಿನಲ್ಲಿ ಸೊಸೆಯ ಬಗ್ಗೆ ಇದ್ದ ಹೆಮ್ಮೆ, ಪ್ರೀತಿ, ಅಂತಃಕರಣ ನೋಡಿ, “ಅಂತಾ ಸೊಸೆಯನ್ನು ಪಡೆದ ಅತ್ತೆ ಧನ್ಯ’ ಎನ್ನುವುದಕ್ಕಿಂತ ಹೆಚ್ಚು, ಇಷ್ಟು ತಿಳಿವಳಿಕೆ ಇರುವ ಅತ್ತೆಯನ್ನು ಪಡೆದ ಸೊಸೆಯೇ ಹೆಚ್ಚು ಧನ್ಯತೆ ಅನುಭವಿಸುತ್ತಾಳೆ ಎನಿಸಿದ್ದು ಸುಳ್ಳಲ್ಲ. ಅವರ ಜೀವನೋತ್ಸಾಹ, ಲವಲವಿಕೆ, ಮುಖದ ಕಳೆ, ಹೇಳುತ್ತಿರುವುದು ಮಾತು ಮನದಾಳದಿಂದ ಹೊಮ್ಮುತ್ತಿರುವುದು ಎಂಬುದನ್ನು ಧೃಡಪಡಿಸುತ್ತಿತ್ತು.
ಎಷ್ಟೋ ಮನೆಗಳಲ್ಲಿ ಸೊಸೆಯರು ಹೀಗೇ ಸಂಸಾರ ತೂಗಿಸಿಕೊಂಡು ಹೋಗುತ್ತಿರಬಹುದು, ವಿಷಯ ಅದಲ್ಲ. ಮನೆಗಾಗಿ, ಮನೆ ಮಂದಿಗಾಗಿ ಎಷ್ಟೇ ರೀತಿಯಲ್ಲಿ ಸೊಸೆ ಗೇಯುತ್ತಿದ್ದರೂ, ಅತ್ತೆಯಾದವಳು ಅದರ ಬಗ್ಗೆ ಒಳ್ಳೆಯ ಮಾತಾಡುವುದಿರಲಿ, ಕಂಡವರ ಮುಂದೆ, ಬಂದವರ ಮುಂದೆ ಆಕೆಯ ಮರ್ಯಾದೆ ತೆಗೆಯುವುದೇ ಹೆಚ್ಚು. ಸೊಸೆಯ ಗೃಹಕೃತ್ಯಕ್ಕೆ ಒಂದು ಸ್ವಾಂತನದ ಮಾತು, ಒಂದು ಮೆಚ್ಚುಗೆಯ ನುಡಿ ಆಡಿದರೆ ಸಾಕು, ಆಕೆ ಖುಷಿಯಿಂದ ಮತ್ತೂಂದಿಷ್ಟು ಹೆಚ್ಚೇ ಆ ಮನೆಗೆ ಮುಡಿಪಾಗುತ್ತಾಳೆ ಎಂದು ಅತ್ತೆಯ ಅರಿವಿಗೆ ಬರುವುದೇ ಇಲ್ಲ.
ಅತ್ತೆಯರೂ ಬದಲಾಗಬೇಕು…
ಬರೀ ಕೊಂಕು, ಬಿರುನುಡಿಯ ಈಟಿಯಿಂದ ಸೊಸೆಯನ್ನು ತಿವಿಯುತ್ತಿದ್ದರೆ, ಎಷ್ಟು ಮಾಡಿದರೂ ಇವರು ಇಷ್ಟೇ ಎಂಬ ಉದಾಸೀನ ಮನೋಭಾವವನ್ನು ಆಕೆ ತಾಳುತ್ತಾಳೆ. ತಾನೂ ಒಂದು ಕಾಲದಲ್ಲಿ ಸೊಸೆಯಿಂದ ಅತ್ತೆ ಸ್ಥಾನಕ್ಕೆ ಬಂದಿರುವುದು ಎಂದು ಅತ್ತೆ ನೆನಪಿಸಿಕೊಂಡು, ನಡೆದರೆ ಈ ತಾಪತ್ರಯವೇ ಇರುವುದಿಲ್ಲ. ಇಬ್ಬರೂ ಹೊಂದಾಣಿಕೆಯಿಂದ ಬಾಳಿದರೆ ಮನೆಯಲ್ಲಿ ಶಾಂತಿ, ನೆಮ್ಮದಿ, ಸಂತೋಷ ನೆಲೆಸಿ ನಂದನವನವಾಗುವುದು ಅಲ್ಲವೇ? ಮೇಲಿನ ಅತ್ತೆ, ಸೊಸೆಯ ಉದಾಹರಣೆ ಎಲ್ಲರಿಗೂ ಮಾದರಿ ಅಂತನ್ನಿಸಿತು.
– ನಳಿನಿ ಟಿ. ಭೀಮಪ್ಪ