Advertisement

ನೀ ಎದ್ದು ಹೋಗಿ ದಶಕವಾಗಿದೆ…

03:45 AM Jul 04, 2017 | Harsha Rao |

ತಂತ್ರಜಾnನದ ಈ ಯುಗದಲ್ಲಿ ಹೇಗೋ ನಿನ್ನನ್ನು ಕಂಡುಹಿಡಿದು ಮಾತನಾಡಿಸುವುದು ಕಷ್ಟದ ವಿಷಯವೇನಲ್ಲ. ಆದರೆ ಭಾವನೆಗಳೆಲ್ಲಾ ಭೋರ್ಗರೆದು ಇದ್ದ ನೆನಪುಗಳೂ ಕೊಚ್ಚಿಹೋದರೆ ಎಂಬ ಭಯ ನನಗೆ. ನಿನ್ನೊಂದಿಗಿನ ನೆನಪುಗಳನ್ನೂ ಕಳೆದುಕೊಳ್ಳುವಷ್ಟು ಸಿರಿವಂತನೇನಲ್ಲ ನಾನು. 

Advertisement

ನನ್ನಾತ್ಮವೇ,
ಬರೆದರೆ ಒಂದು ಪುಸ್ತಕವಾಗುವಷ್ಟನ್ನು ಇಟ್ಟುಕೊಂಡು ಪುಟ್ಟ ಪತ್ರವೊಂದರಲ್ಲಿ, ನನ್ನ ಮಾತುಗಳನ್ನು ಹೇಗೆ ಹಿಡಿದಿಡಲಿ ಎಂಬುದು ತಿಳಿಯುತ್ತಿಲ್ಲ. ಆದರೂ ಬರೆಯುತ್ತಿರುವೆ. ನೀನು ಓದುತ್ತೀಯಾ ಅಂತಲ್ಲ. ಬರೆಯಬೇಕೆನ್ನುವ ತೀವ್ರ ತುಡಿತಕ್ಕೆ ಬಿದ್ದು ಬರೆಯುತ್ತಿದ್ದೇನೆ. 

ಅದೆಂಥಾ ಸಂಬಂಧ ನಮ್ಮದು ಎಂದು ನಾನು ಆಗಾಗ ಯೋಚಿಸುವುದುಂಟು. ನೀನಂತೂ ಇದೊಂದು ಸಂಬಂಧವೂ ಅಲ್ಲವೆಂಬಂತೆ ಏಕಾಏಕಿ ಎದ್ದು ಹೋದೆ. ಬರೋಬ್ಬರಿ ಒಂದು ದಶಕವಾಗಲಿಕ್ಕಾಯಿತು. ನಾನು ಅಂದಿನಿಂದ ಇಂದಿನವರೆಗೂ ಕಾಯುತ್ತಲೇ ಇದ್ದೇನೆ. ನೀನು ಬರಲಾರೆ, ಬರಲು ಕಿಂಚಿತ್ತು ಕಾರಣಗಳೂ ನಿನಗಿಲ್ಲ ಎಂಬುದು ತಿಳಿದಿದ್ದರೂ! ನನ್ನ ಬಗ್ಗೆ ನಿನಗೆ ಎಲ್ಲಾ ಮಾಹಿತಿಗಳಿವೆ ಎಂಬುದು ನನಗ್ಗೊತ್ತು. ಹೀಗಾಗಿಯೇ ಹೊಸ ಇ-ಮೇಲೋ, ಎಸ್ಸೆಮ್ಮೆಸೊÕà ಒಂದು “ಠಣ್‌’ ಅಂತ ಬಂದು ಬಿದ್ದಾಗ ನೀನಿರಬಹುದೋ ಎಂದು ತಕ್ಷಣ ನೋಡುತ್ತೇನೆ. ಅದು ನಿನ್ನದಲ್ಲವೆಂದು ತಿಳಿದ ಕೂಡಲೇ ನನ್ನ ಬಗ್ಗೆಯೇ ನನಗೆ ನಗು ಬರುತ್ತದೆ. ನನ್ನ ಜೀವನದಲ್ಲಿ ನಿನ್ನ ನಂತರ ಬಂದ ಯಾವ ಸಂಬಂಧಗಳೇ ಆಗಲಿ, ಬಂದವರೆಲ್ಲರಿಗೂ ಒಂದು ನಿರ್ಗಮನದ ದಾರಿಯನ್ನು ನಿರ್ಮಿಸಿಟ್ಟಿದ್ದೇನೆ. ಆ ನಿರ್ಗಮನದ ಬಾಗಿಲು ಆಗಾಗ ನನ್ನನ್ನು ಎಚ್ಚರಿಸುತ್ತಿರುತ್ತದೆ. ಇವೆಲ್ಲಾ ಕ್ಷಣಿಕ, ನಶ್ವರ ಎನ್ನುತ್ತಿರುತ್ತದೆ. ಇಷ್ಟಿದ್ದರೂ ನಿನ್ನ ಬಗ್ಗೆ ಕ್ಷೀಣವಾದ ನಿರೀಕ್ಷೆಯೇಕೆ ಉಳಿದಿದೆ ಎಂಬುದು ನನಗಿನ್ನೂ ತಿಳಿದಿಲ್ಲ. ಹೋಗೇಬಿಟ್ಟರೂ ನನ್ನೊಳಗೆ ಅಂಥದ್ದೇನನ್ನು ಉಳಿಸಿಹೋದೆ ನೀನು?

ಇಂಥಾ ವ್ಯಾಮೋಹಗಳು ಕಥೆಗಳಲ್ಲಿ ಓದುವುದಕ್ಕೆ, ಸಿನಿಮಾಗಳಲ್ಲಿ ವೀಕ್ಷಿಸುವುದಕ್ಕಷ್ಟೇ ಚೆನ್ನ. ನಿಜಕ್ಕೂ ಆಗಿ ಹೋದರೆ ಅದು ಸಾವಿಗಿಂತಲೂ ಭೀಕರ. ಕ್ಷಣಕ್ಷಣಗಳ ಲೆಕ್ಕವಿಟ್ಟು ಬದುಕುವುದು ಸಾಹಸವೇ ಸರಿ. ಭಾರದ ನೆನಪಿನ ಮೂಟೆಯನ್ನು ಹೊತ್ತು ಗುಡ್ಡ ಹತ್ತಿದಂತೆ. ನಾನು ಹೀಗೂ ಇದ್ದೇನೆ ಎಂಬ ಲವಲೇಶದ ಅರಿವೂ ನಿನಗಿಲ್ಲ. ನೀನು ಸುಮ್ಮನೆ ಎದ್ದು ಹೋಗುವವರೆಗೆ ನನ್ನ ಭಾವತೀವ್ರತೆಗಳ ಬಗ್ಗೆ ನನಗೂ ತಿಳಿದಿರಲಿಲ್ಲ. ಜೀವನವು ಈಗೊಂದು ತಲಾಶೆಯಾಗಿಬಿಟ್ಟಿದೆ. ನನ್ನ ಮಟ್ಟಿಗೆ ಇದೊಂದು ಎಲ್ಲೂ, ಎಂದಿಗೂ ನಿಲ್ಲದ ಪಯಣ. ನನ್ನನ್ನು ನಂಬು. 

ಇದು ನೀ ನನಗೆ ದಕ್ಕಲಿಲ್ಲ ಎಂಬ ಹತಾಶೆಯಲ್ಲ. ಈ ವರ್ಷಗಳಲ್ಲಿ ನಾನು ನಿನಗೆ ಒಮ್ಮೆಯೂ ನೆನಪಾಗಲಿಲ್ಲ ಎಂಬ ದುಃಖವಷ್ಟೇ. ರಚ್ಚೆ ಹಿಡಿಯುವುದು ನನಗೆ ತಿಳಿದಿಲ್ಲ. ಸೋಲು ನನ್ನ ಎಂದಿನ ಸಂಗಾತಿ. ಅಂಥಾ ಸೋಲನ್ನು ಬಿಗಿದಪ್ಪಿದ್ದರಿಂದಲೇ ನಾನು ನನ್ನದೇ ಆದ ಮೈಲುಗಲ್ಲುಗಳನ್ನು ನೆಡುತ್ತಲೇ ಹೋದೆ. ಇರಲಿ. ನಿನ್ನೆಯವರೆಗೂ ಜೀವಕ್ಕೆ ಜೀವ ಎಂಬಂತಿದ್ದ ಎರಡು ವ್ಯಕ್ತಿತ್ವಗಳು ಇಂದು ಅಪರಿಚಿತರಂತೆ ಸಾಗುವುದನ್ನು ಕಂಡಾಗಲೆಲ್ಲಾ ನನ್ನೆದೆಯ ವೀಣೆಯ ತಂತುವೊಂದು ಮಿಡಿಯುತ್ತದೆ. ಸಂತೆಯೊಳಗಿದ್ದರೂ ಸ್ಮಶಾನ ಮೌನವನ್ನು ತಂದಿಡುತ್ತದೆ. ಪ್ರೀತಿಯು ಇಂದು ತುಂಬಾ ಅಗ್ಗವಾಗಿದೆಯಂತೆ. ಅಂಥ ಪ್ರೀತಿ ಹೇಗಿರುತ್ತದೆ ಎಂಬುದು ನನಗೆ ತಿಳಿದಿಲ್ಲ. ತಿಳಿಯುವ ಆಸಕ್ತಿಯೂ ನನಗಿಲ್ಲ. ಖರೀದಿಸಿ ಎಸೆಯುವ ಸಂಬಂಧವು ನನಗೆ ಬೇಡ. ನನ್ನ ಪ್ರೀತಿಯೇನಿದ್ದರೂ ತಂಗಾಳಿಯಷ್ಟು ಆಹ್ಲಾದಕರ, ಚಂಡಮಾರುತದಷ್ಟು ತೀವ್ರ. ಸ್ಪರ್ಶಕ್ಕೆ ಸಿಗದಿದ್ದರೂ ಮಚ್ಚೆಯಂತೆ ಉಳಿದುಹೋಗುವ ಪ್ರೀತಿಯ ಮೇಲೆ ನಂಬಿಕೆಯಿಟ್ಟಿರುವವನು ನಾನು.    

Advertisement

ಸದ್ಯ “ನಿನ್ನ ಹಿಂದಿನ’ ಮತ್ತು “ನಿನ್ನ ನಂತರದ’ ಎಂಬ ಎರಡೇ ಎರಡು ಅಧ್ಯಾಯಗಳಲ್ಲಿ ನಡೆಯುತ್ತಿದೆ ಜೀವನ. ಈ ಎರಡೂ ಭಾಗಗಳಲ್ಲಿ ನನ್ನ ಜೊತೆಗಿದ್ದವರಿಗೆ ಮಾತ್ರ ರೂಪಾಂತರ ಕಾಣುವುದು ಸಹಜ. ಇದು ಕೇವಲ ಬದಲಾವಣೆಯಲ್ಲ. ಇದೊಂದು ಅಕ್ಷರಶಃ “ಮೆಟಮಾಫ‌ìಸಿಸ್‌’. ಇದಕ್ಕೆಲ್ಲಾ ನೀನೇ ಕಾರಣ ಎಂಬ ಸತ್ಯವು ಅದೃಷ್ಟವಶಾತ್‌ ನನಗಷ್ಟೇ ಗೊತ್ತು. ಈ ರಹಸ್ಯವು ನನ್ನೊಂದಿಗೇ ಸಮಾಧಿಯಾಗಲಿದೆ. ತಂತ್ರಜಾnನದ ಈ ಯುಗದಲ್ಲಿ ಹೇಗೋ ನಿನ್ನನ್ನು ಕಂಡುಹಿಡಿದು ಮಾತನಾಡಿಸುವುದು ಕಷ್ಟದ ವಿಷಯವೇನಲ್ಲ. ಆದರೆ ಭಾವನೆಗಳೆಲ್ಲಾ ಭೋರ್ಗರೆದು ಇದ್ದ ನೆನಪುಗಳೂ ಕೊಚ್ಚಿಹೋದರೆ ಎಂಬ ಭಯ ನನಗೆ. ನಿನ್ನೊಂದಿಗಿನ ನೆನಪುಗಳನ್ನೂ ಕಳೆದುಕೊಳ್ಳುವಷ್ಟು ಸಿರಿವಂತನೇನಲ್ಲ ನಾನು. ಆ ಭಂಡ ಧೈರ್ಯವೂ ನನಗಿಲ್ಲ. ನೀನು ಚೆನ್ನಾಗಿದ್ದೀಯಾ ಅನ್ನುವ ವರ್ತಮಾನವು ತಿಳಿಯಿತು. ಹೀಗೆಯೇ ನಗುನಗುತ್ತಿರು. ಇನ್ನೇನು ಬೇಕು ನನಗೆ?

ಇಂತೀ ನಿನ್ನ 
ಏನೇನೂ ಅಲ್ಲದವನು

Advertisement

Udayavani is now on Telegram. Click here to join our channel and stay updated with the latest news.

Next