Advertisement

ನಟಿಯ ಲೈಂಗಿಕ ದೌರ್ಜನ್ಯದಲ್ಲಿ ಪ್ರಭಾವಿಗಳ ಕೈವಾಡ!

03:45 AM Feb 21, 2017 | |

ಕೊಚ್ಚಿ: ಬಹುಭಾಷಾ ನಟಿಯ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದ ಹಿಂದೆ ಪ್ರಭಾವಿ ರಾಜಕಾರಣಿ, ನಟರ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಸುಪಾರಿ ಗ್ಯಾಂಗ್‌ ಮೂಲಕ ಈ ದೌರ್ಜನ್ಯ ಎಸಗಿರುವ ಬಗ್ಗೆ ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಸಾಬೀತಾಗಿದೆ.

Advertisement

6 ಮಂದಿ ಪ್ರಭಾವಿಗಳು, ಒಬ್ಬ ಹೆಸರಾಂತ ನಿರ್ಮಾಪಕರು ಸೇರಿ ಸುಪಾರಿ ಗ್ಯಾಂಗ್‌ನ ಮೂಲಕ ದುಷ್ಕೃತ್ಯ ನಡೆಸಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಅಲ್ಲದೆ, ಅತ್ಯಾಚಾರ ನಡೆದ ರಾತ್ರಿ ಪಲ್ಸರ್‌ ಸುನೀಲ್‌ಗೆ ಖ್ಯಾತ ನಿರ್ಮಾಪಕರೊಬ್ಬರು ಕರೆಮಾಡಿದ್ದಾರೆ. ಪೊಲೀಸರು ಈಗಲೂ ಆ ಸಂಖ್ಯೆಗೆ ಕರೆಗೆ ಯತ್ನಿಸಿದರೂ ಮೊಬೈಲ್‌ ಸ್ವಿಚ್‌ ಆಫ್ ಬರುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇರಳ ಅಪರಾಧ ದಳದ ಐಜಿ ದಿನೇಂದ್ರ ಕಶ್ಯಪ್‌, “ಪ್ರಕರಣವನ್ನು ಎಲ್ಲ ದಿಕ್ಕಿನಿಂದಲೂ ತನಿಖೆಗೊಳಪಡಿಸಿದ್ದೇವೆ. ಸಿನಿಮಾ ಪೈಪೋಟಿ ಹಿನ್ನೆಲೆಯಲ್ಲೂ ಈ ಕೃತ್ಯ ಎಸಗಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ’ ಎಂದಿದ್ದಾರೆ. ಪ್ರಕರಣ ಸಂಬಂಧ ಇನ್ನಿಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ನಿರೀಕ್ಷಣಾ ಜಾಮೀನಿಗೆ ಅರ್ಜಿ:
ಪ್ರಕರಣದಲ್ಲಿ ಭಾಗಿಯಾದ ಮೂವರು ಆರೋಪಿಗಳು ಕೇರಳ ಹೈಕೋರ್ಟಿನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಇನ್ನೊಂದು ಬೆಳವಣಿಗೆಯಲ್ಲಿ ಮಾಧ್ಯಮಗಳಲ್ಲಿ ಕುರಿತ ವರದಿಗಳನ್ನು ನೋಡಿ ನಟಿ, ಪ್ರಕರಣವನ್ನು ವಾಪಸು ತೆಗೆದುಕೊಳ್ಳಲು ಮುಂದಾಗಿದ್ದು, ನಂತರ ಕುಟುಂಬಸ್ಥರ ಒತ್ತಾಯದಿಂದ ಕೇಸು ಮುಂದುವರಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

80 ಲಕ್ಷ ರೂ. ಸುಪಾರಿ!:
ವಿಚಾರಣೆಯಲ್ಲಿ ನಟಿಯ ಕಾರಿನ ಚಾಲಕ ಮಾರ್ಟಿನ್‌ ಮತ್ತಷ್ಟು ಮಾಹಿತಿ ಬಿಚ್ಚಿಟ್ಟಿದ್ದಾನೆ. ಲೈಂಗಿಕ ದೌರ್ಜನ್ಯದ ಫೋಟೋಗಳನ್ನು ಬಹಿರಂಗಪಡಿಸುವ ಬೆದರಿಕೆಯೊಡ್ಡಿ ನಟಿಯಿಂದ 30 ಲಕ್ಷ ಪಡೆಯುವ ಹುನ್ನಾರ ನಡೆಸಲಾಗಿತ್ತು. ಅಲ್ಲದೆ, ಸುಪಾರಿ ಕೊಟ್ಟವರಿಂದ ಸುನೀಲ್‌ 50 ಲಕ್ಷ ರೂ. ಪಡೆದಿದ್ದರು. ಒಟ್ಟಾರೆ 80 ಲಕ್ಷ ರೂ. ಕಲೆಹಾಕಲು ಸುನೀಲ್‌ ಮುಂದಾಗಿದ್ದ. ದುಷ್ಕೃತ್ಯಕ್ಕೆ ಸಹಕರಿಸಿದ ಸದಸ್ಯರಿಗೆ ಒಟ್ಟು 30 ಲಕ್ಷ ನೀಡುವ ಬಗ್ಗೆ ಹೇಳಿದ್ದ ಎನ್ನುವ ಸತ್ಯ ಜಾಹೀರಾಗಿದೆ. ಅಲ್ಲದೆ ಸುನೀಲ್‌, ನಟಿಯ ಹಾಲಿ ಚಾಲಕ ಮಾರ್ಟಿನ್‌ ಜೊತೆ ಲೈಂಗಿಕ ದೌರ್ಜನ್ಯ ನಡೆದ ದಿನ 40ಕ್ಕೂ ಅಧಿಕ ಕರೆಗಳನ್ನು ಮಾಡಿದ್ದಾನೆ. ಮೆಸೇಜುಗಳ ಮೂಲಕ ಇಬ್ಬರೂ ನಿರಂತರ ಸಂಪರ್ಕದಲ್ಲಿದ್ದ ಬಗ್ಗೆ ಪೊಲೀಸರು ದೃಢಪಡಿಸಿದ್ದಾರೆ.

ಕ್ರಿಮಿನಲ್‌ ಸುನೀಲ್‌:
ಪ್ರಕರಣದ ಮಾಸ್ಟರ್‌ ಮೈಂಡ್‌ ಪಲ್ಸರ್‌ ಸುನೀಲ್‌ ಈ ಹಿಂದೆಯೂ 3 ಸಲ ಇಂಥದ್ದೇ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಅದರಲ್ಲೂ ಖ್ಯಾತ ನಿರ್ಮಾಪಕ ಸುರೇಶ್‌ ಕುಮಾರ್‌ ಅವರ ಪತ್ನಿ ಮೇನಕಾರನ್ನೂ ಅಪಹರಿಸಲು ಯತ್ನಿಸಿ ವಿಫ‌ಲನಾಗಿದ್ದ. “ಕೊಚ್ಚಿ ಸ್ಟೇಷನ್‌ನಿಂದ ನನ್ನ ಹೆಂಡ್ತಿಯನ್ನು ಹೋಟೆಲಿಗೆ ಡ್ರಾಪ್‌ ಮಾಡಬೇಕಿತ್ತು. ಆದರೆ, ಸುನೀಲ್‌ ನಗರದ ಬೇರೆ ಬೇರೆ ರಸ್ತೆಯಲ್ಲಿ ಕಾರನ್ನು ಸುತ್ತಾಡಿಸಿ, ಅಪಹರಿಸಲು ಯತ್ನಿಸಿದ್ದ. ಮೇನಕಾ ನನಗೆ ಕರೆ ಮಾಡಿದ್ದರಿಂದ ಅವಘಡ ತಪ್ಪಿತ್ತು’ ಎಂದು ಸುರೇಶ್‌ ಹೇಳಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿದ್ದರೂ, ಪೊಲೀಸರು ತನಿಖೆ ಕೈಗೆತ್ತಿಕೊಂಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Advertisement

ರಾಜಕಾರಣಿ ಪುತ್ರನ ಕೈವಾಡ?:
ಡಿಎನ್‌ಎ ವರದಿಯಂತೆ, ಆಡಳಿತಾರೂಢ ಲೆಫ್ಟ್ ಡೆಮಾಕ್ರಟಿಕ್‌ ಫ್ರಂಟ್‌ (ಎಲ್‌ಡಿಎಫ್) ಹಿರಿಯ ರಾಜಕಾರಣಿಯ ಮಗ ಈ ಪ್ರಕರಣದಲ್ಲಿ ಭಾಗಿ ಆಗಿದ್ದಾರೆ ಎನ್ನಲಾಗಿದೆ. ಅಲ್ಲದೆ, ಒಬ್ಬ ಸ್ಟಾರ್‌ ನಟ ಹಾಗೂ ಆತನ ಪತ್ನಿಯೊಂದಿಗೆ ಈ ನಟಿ ತುಂಬಾ ಸ್ನೇಹದಿಂದಿದ್ದರು. ನಟನ ಸಂಸಾರದಲ್ಲಿ ವಿರಸ ಏರ್ಪಟ್ಟಿದ್ದರಿಂದ, ಆತ ನಟಿಯನ್ನು ದ್ವೇಷಿಸುತ್ತಾ, ಮಲಯಾಳಂನ ಸಿನಿಮಾ ಪ್ರಾಜೆಕುrಗಳನ್ನು ತಪ್ಪಿಸಲು ನಿರಂತರ ಸಂಚು ರೂಪಿಸಿದ್ದ. ಇತ್ತೀಚೆಗೆ ಮಲಯಾಳಂ ಚಿತ್ರರಂಗಕ್ಕೆ ಪ್ರಭಾವಿ ರಾಜಕಾರಣಿಗಳ ಮಕ್ಕಳೂ ಬಂದಿದ್ದರಿಂದ ಅವರ ನೆರವಿನಲ್ಲಿ ಈ ಕೃತ್ಯ ಎಸಗಿರುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಇನ್ನೊಂದೆಡೆ, ದೌರ್ಜನ್ಯ ಖಂಡಿಸಿ ಮಲಯಾಳಂ ಚಿತ್ರರಂಗದ ಸದಸ್ಯರು ಕೊಚ್ಚಿಯಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next