Advertisement

Kundapura: ಜಾಲತಾಣದಿಂದಾಗಿ ಲೈಂಗಿಕ ದೌರ್ಜನ್ಯ ಹೆಚ್ಚಳ

01:36 PM Sep 18, 2024 | Team Udayavani |

ಕುಂದಾಪುರ: ಸಾಮಾಜಿಕ ಜಾಲತಾಣ ಬಳಕೆಯಿಂದಾಗಿ ಹದಿಹರೆ ಯದವರ ಮೇಲೆ ಲೈಂಗಿಕ ದೌರ್ಜನ್ಯ, ಪೋಕ್ಸೊ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣ ಆಯೋಗ ಸದಸ್ಯ ಡಾ| ತಿಪ್ಪೇಸ್ವಾಮಿ ಕೆ.ಟಿ. ಹೇಳಿದರು.

Advertisement

ಅವರು ಮಂಗಳವಾರ ಇಲ್ಲಿನ ತಾ.ಪಂ. ನಲ್ಲಿ ವಿವಿಧ ಇಲಾಖಾಧಿಕಾರಿಗಳ ಸಭೆ ನಡೆಸಿ ಶಾಲಾ, ಕಾಲೇಜು, ಹಾಸ್ಟೆಲ್‌ಗ‌ಳಲ್ಲಿ ಈ ಬಗ್ಗೆ ತಿಳಿವಳಿಕೆ ಮೂಡಿಸಿ ಮಕ್ಕಳ ಸಹಾಯವಾಣಿ ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು. ಸಹಾಯವಾಣಿ ದೂರವಾಣಿ ಸಂಖ್ಯೆಯನ್ನು ಪ್ರದರ್ಶಿಸುವುದರ ಜತೆಗೆ ಯಾಕೆ, ಹೇಗೆ, ಯಾರು, ಯಾವಾಗ ಸಂಪರ್ಕಿಸಬಹುದು ಎಂಬುದನ್ನು ಸ್ಪಷ್ಟವಾಗಿ ನಮೂದಿಸಿ ಮಕ್ಕಳು ಕರೆ ಮಾಡುವಂತೆ ಜಾಗೃತಿ ಮೂಡಿಸಬೇಕು. ದೂರು ಪೆಟ್ಟಿಗೆಗಳನ್ನು ಇಟ್ಟು ಸಲಹೆ, ದೂರುಗಳಿದ್ದರೆ ಧೈರ್ಯವಾಗಿ ಪೆಟ್ಟಿಗೆಗೆ ಹಾಕುವಂತೆ ಮಾಡಬೇಕು. ಶಾಲೆ, ಮೈದಾನ, ಹಾಸ್ಟೆಲ್‌ ಪಕ್ಕದಲ್ಲಿ ವಿದ್ಯುತ್‌ ತಂತಿಗಳು ಹಾದು ಹೋಗದಂತೆ ಮಾಡಬೇಕು. ಇದ್ದರೆ ತೆರವು ಮಾಡಬೇಕು ಎಂದರು.

ಎಲ್ಲ ಶಾಲೆ, ಕಾಲೇಜುಗಳಲ್ಲಿ ಮಕ್ಕಳ ಕಲ್ಯಾಣ ಸಮಿತಿ ರಚನೆಯಾಗಬೇಕು. ಪಂಚಾಯತ್‌ಗಳಲ್ಲಿ ಮಕ್ಕಳ ಗ್ರಾಮಸಭೆಯ ಪ್ರತ್ಯೇಕ ಕಡತ ಇರಬೇಕು. ಮಕ್ಕಳ ರಕ್ಷಣೆ ಬೇರೆ, ಮಕ್ಕಳ ಹಕ್ಕುಗಳ ರಕ್ಷಣೆ ಬೇರೆ. ಪ್ರತಿ ತಿಂಗಳೂ ತಹಶೀಲ್ದಾರ್‌ ಇದರ ಬಗ್ಗೆ ಸಭೆ ನಡೆಸಬೇಕು, 3 ತಿಂಗಳಿಗೊಮ್ಮೆ ಡಿಸಿ ಸಭೆ ನಡೆಸಬೇಕು. ತಳಹಂತದಲ್ಲಿ ಯಾವ ಮಟ್ಟದಲ್ಲಿ ಕಾರ್ಯ ನಿರ್ವಹಣೆಯಾಗುತ್ತಿದೆ ಎಂದು ಪರಿಶೀಲಿಸಲು ರಾಜ್ಯದ ಆಯ್ದ ತಾಲೂಕುಗಳಲ್ಲಿ ಸಭೆ ನಡೆಸಲಾಗುತ್ತಿದೆ. ವಂಡ್ಸೆ, ಕುಂದಾಪುರ ಜೂನಿಯರ್‌ ಕಾಲೇಜಿಗೆ ಭೇಟಿ ನೀಡಿದಾಗ ಅನೇಕ ಲೋಪದೋಷಗಳು ಕಂಡುಬಂದಿವೆ ಎಂದರು. ನಗರದಲ್ಲಿರುವ ಕಾಲೇಜಿನಲ್ಲೇ ಸಮಿತಿ ಇಲ್ಲ, ಸಹಾಯ ದೂರವಾಣಿ ಸಂಖ್ಯೆ ಇಲ್ಲ ಎಂದಾದರೆ ಗ್ರಾಮಾಂತರದ ಸ್ಥಿತಿ ಹೇಗಿರಬಹುದು ಎಂದ ಅವರು, ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದರು.

ಪಿಯು ಜಿಲ್ಲಾ ಉಪನಿರ್ದೇಶಕ ಮಾರುತಿ, ಎಲ್ಲ ಕಾಲೇಜುಗಳಿಗೆ ಸಹಾಯ ವಾಣಿ ನಂಬರ್‌ ಪ್ರದರ್ಶಿಸುವಂತೆ, ಸಮಿತಿ ರಚಿಸುವಂತೆ ಸೂಚಿಸಲಾಗಿದೆ. ರಚನೆಯಾಗದೇ ಇದ್ದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ವೆರ್ಣೇಕರ್‌, ಹಾಸ್ಟೆಲ್‌ಗ‌ಳಲ್ಲಿ ಸಹಾಯವಾಣಿ ನಂಬರ್‌ ಹಾಕಲಾಗಿದೆ. ಟ್ಯೂಷನ್‌ ವ್ಯವಸ್ಥೆ ಮಾಡಲಾಗಿದೆ. ಸಲಹೆ ಪೆಟ್ಟಿಗೆ ಇಡಲಾಗಿದೆ ಎಂದರು.

Advertisement

ತಹಶೀಲ್ದಾರ್‌ ಹಾಗೂ ಹಿರಿಯ ಅಧಿಕಾರಿಗಳು ಹಾಸ್ಟೆಲ್‌ಗ‌ಳಿಗೆ ತಿಂಗಳಿಗೊಮ್ಮೆ ದಿಢೀರ್‌ ಭೇಟಿ ನೀಡಬೇಕೆಂದು ಇದೆ ಎಂದು ತಿಪ್ಪೇಸ್ವಾಮಿ ಹೇಳಿದರು.

ತಾಲೂಕು ಆರೋಗ್ಯಾಧಿಕಾರಿ ಡಾ| ಪ್ರೇಮಾನಂದ್‌ ಕೆ., 1 ಶಿಶುಮರಣ, 1 ತಾಯಿ ಮರಣ ಪ್ರಕರಣ ದಾಖಲಾಗಿದೆ. ಗಂಡಾಂತರಕಾರಿ ಹೆರಿಗೆ ಎಂದು ಗುರುತಿಸಲ್ಪಟ್ಟದ್ದನ್ನು 108 ಆ್ಯಂಬುಲೆನ್ಸ್‌ಗೆ ಮಾಹಿತಿ ನೀಡಲಾಗಿರುತ್ತದೆ. ಆಶಾ ಕಾರ್ಯಕರ್ತೆಯರು ನಿಗಾ ಇಟ್ಟಿರುತ್ತಾರೆ. ಶೇ. 30 ಪ್ರಕರಣಗಳು ಇಂತಹ ವ್ಯಾಪ್ತಿಯಲ್ಲಿದೆ. ಶೇ. 60 ಸಿಸೇರಿಯನ್‌ ಪ್ರಕರಣಗಳು ಇರುತ್ತವೆ. 35ರ ಅನಂತರ ಗರ್ಭಿಣಿಯಾಗುವುದು, ತಡವಾಗಿ ಮದುವೆಯಾಗಿರುವುದು, ಚಿಕಿತ್ಸೆ ಮೂಲಕ ಗರ್ಭಿಣಿಯಾಗಿರುವ ಕಾರಣದಿಂದ ಗಂಡಾಂತರಕಾರಿ ಹೆರಿಗೆ ಕೇಸ್‌ ಕಂಡುಬರುತ್ತಿದ್ದು ಇಂತಹ ಪ್ರಕರಣಗಳ ಕುರಿತಾಗಿಯೂ ನಿಗಾ ಇಡಲಾಗುತ್ತದೆ ಎಂದರು. ಸ್ನೇಹ ಕ್ಲಿನಿಕ್‌ ಮೂಲಕ ಕೌನ್ಸಲಿಂಗ್‌ ಕೂಡ ಲಭ್ಯವಿದೆ. ಕುಂದಾಪುರ, ಬೈಂದೂರಿನಲ್ಲಿ ಕೌನ್ಸಿಲರ್‌ಗಳು ಲಭ್ಯರಿದ್ದಾರೆ ಎಂದರು.

ಕಾರ್ಮಿಕ ನಿರೀಕ್ಷಕ ಜಯೇಂದ್ರ, ಕುಂದಾಪುರ, ಬೈಂದೂರಿನಲ್ಲಿ 29 ಸಾವಿರ ಕಟ್ಟಡ ಕಾರ್ಮಿಕರು ನೋಂದಾಯಿಸಿದ್ದು ರಾಜ್ಯದಲ್ಲಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಹಾಕಿದ್ದವರ ಪೈಕಿ 43 ಲಕ್ಷ ನಕಲಿ ಕಾರ್ಡ್‌ ಗಳಿದ್ದ ಕಾರಣ ತಡೆ ಹಿಡಿಯಲಾಗಿತ್ತು. ಈಗ ಹೊಸದಾಗಿ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಬಾಲಕಾರ್ಮಿಕರ ದೂರು ಬಂದಲ್ಲಿಗೆ ದಾಳಿ ನಡೆಸಲಾಗಿದೆ ಎಂದರು. ತಾ.ಪಂ. ಅಧೀಕ್ಷಕ ರಾಮಚಂದ್ರ ಮಯ್ಯ, ಪಂಚಾಯತ್‌ಗಳಲ್ಲಿ ಮಕ್ಕಳ ಗ್ರಾಮಸಭೆ ನಡೆಸಲಾಗುತ್ತಿದೆ ಎಂದರು.

ತಹಶೀಲ್ದಾರ್‌ ಶೋಭಾಲಕ್ಷ್ಮೀ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಮೇಶ್‌ ಕೋಟ್ಯಾನ್‌, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನಾ ಉಪಸ್ಥಿತರಿದ್ದರು.

ಪ್ರತೀ ಶಾಲೆಗಳಲ್ಲೂ ರಕ್ಷಣ ಸಮಿತಿ
ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಶಾಲೆ ಯಿಂದ ಹೊರಗುಳಿದ 23 ಮಕ್ಕಳಿದ್ದು 7 ಮಂದಿ ಮರಳಿ ಶಾಲೆಗೆ ಬರುತ್ತಿದ್ದಾರೆ. 4 ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿ ಸಲಾಗಿದೆ. 1 ವಲಸೆ ಮಗುವಾಗಿದ್ದು ಅಲ್ಲಿನ ಶಿಕ್ಷಣಾಧಿಕಾರಿಗೆ ಮಾಹಿತಿ ನೀಡಲಾಗಿದೆ. 3 ಜನರಿಗೆ ಅನಾ ರೋಗ್ಯವಿದೆ. ಪ್ರತೀ ಶಾಲೆಗಳಲ್ಲೂ ಮಕ್ಕಳ ಹಕ್ಕುಗಳ ರಕ್ಷಣ ಸಮಿತಿ ರಚಿಸಿ ಸಭೆ ನಡೆಸಲು ಸೂಚಿಸಲಾಗಿದೆ ಎಂದರು.

ರಾಜ್ಯದಲ್ಲಿ 1.3 ಲಕ್ಷ ಹದಿಹರೆಯದ ಗರ್ಭಿಣಿ ಪ್ರಕರಣ
ರಾಜ್ಯದಲ್ಲಿ ಕಳೆದ ವರ್ಷ ಸಣ್ಣ ವಯಸ್ಸಿನ 1.3 ಲಕ್ಷ ಮಂದಿ ಗರ್ಭಿಣಿಯರಾಗಿದ್ದು ಉಡುಪಿ ಜಿಲ್ಲೆ 11 ಪ್ರಕರಣ ದಾಖಲಿಸಿದೆ. ಅದಕ್ಕೂ ಹಿಂದಿನ ವರ್ಷ ಉಡುಪಿಯಲ್ಲಿ 86 ಪ್ರಕರಣಗಳಾಗಿದ್ದವು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣ ಆಯೋಗ ಸದಸ್ಯ ಡಾ| ತಿಪ್ಪೇಸ್ವಾಮಿ ಕೆ.ಟಿ. ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next