Advertisement

ಜಯಾ ಸಾವು; ಯಾವುದೇ ತನಿಖೆಗೂ ಸಿದ್ಧ: ಶಶಿಕಲಾ

03:45 AM Feb 09, 2017 | Team Udayavani |

– ಸಿಎಂ ಆಗುತ್ತೇನೆಂಬ ನಂಬಿಕೆ ಶೇ.100ರಷ್ಟಿದೆ
– ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೆ
ಚೆನ್ನೈ
: ತಮಿಳುನಾಡಿನ ಮಾಜಿ ಸಿಎಂ ಜೆ. ಜಯಲಲಿತಾ ಅವರ ಸಾವಿನ ಸಂಬಂಧ ಯಾವುದೇ ರೀತಿಯ ತನಿಖೆಗೂ ನಾನು ಸಿದ್ಧ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್‌ ಹೇಳಿದ್ದಾರೆ.

Advertisement

ಬುಧವಾರ ಖಾಸಗಿ ವಾಹಿನಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಜಯಾ ಸಾವಿನ ಬಗ್ಗೆ ಹಾಗೂ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತನಾಡಿದ್ದಾರೆ.

“ನಾನು ಯಾರೆಂಬುದು ಅಮ್ಮಾಗೆ ಗೊತ್ತು. ನಾನು ಯಾರಿಗೂ ಉತ್ತರಿಸಬೇಕಾದ ಅಗತ್ಯವಿಲ್ಲ. ತಮಿಳುನಾಡಿನ ಮುಖ್ಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತೇನೆ ಎಂಬ ನಂಬಿಕೆ ನನಗೆ ಶೇ. 100ರಷ್ಟಿದೆ’ ಎಂದು ಶಶಿಕಲಾ ನುಡಿದಿದ್ದಾರೆ.
ಇದೇ ಸಂದರ್ಭ ವಿಪಕ್ಷ ಡಿಎಂಕೆ ವಿರುದ್ಧವೂ ಹರಿಹಾಯ್ದ ಶಶಿಕಲಾ, “ಪನ್ನೀರ್‌ಸೆಲ್ವಂ ಅವರ ಇತ್ತೀಚೆಗಿನ ವರ್ತನೆಯ ಹಿಂದೆ ಡಿಎಂಕೆ ಕೈವಾಡವಿದೆ. ಡಿಎಂಕೆ ಯಾವತ್ತೂ ನಮ್ಮ ಪಕ್ಷವನ್ನು ನಾಶ ಮಾಡಲು ಯತ್ನಿಸಿದೆ’ ಎಂಬ ಆರೋಪವನ್ನೂ ಮಾಡಿದ್ದಾರೆ.

“ಜಯಾರನ್ನು ಆಸ್ಪತ್ರೆಗೆ ಸೇರಿಸಲು ವಿಳಂಬ ಮಾಡಿದೆ ಎಂಬ ಆರೋಪ ಸುಳ್ಳು. ನಾನು ಅಮ್ಮಾನನ್ನು ಹೇಗೆ ನೋಡಿಕೊಂಡೆ ಎಂಬುದು ನನ್ನ ಹಿರಿಯ ಸಹೋದರಿ, ಆಸ್ಪತ್ರೆಯಲ್ಲಿದ್ದ ಎಲ್ಲರಿಗೂ ಗೊತ್ತು.

ಈಗ ಅಮ್ಮಾ ಸಾವಿನ ಕುರಿತು ಯಾವುದೇ ತನಿಖೆ ನಡೆದರೂ ನನಗೆ ಭಯವಿಲ್ಲ. ಕೊನೆಯ ದಿನದವರೆಗೂ ಆಸ್ಪತ್ರೆಯಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಅಮ್ಮಾ ಅವರು ಜಯಾ ಟಿವಿಯಲ್ಲಿ ಧಾರಾವಾಹಿಯನ್ನೂ ವೀಕ್ಷಿಸಿದ್ದರು. ಪನ್ನೀರ್‌ಸೆಲ್ವಂ ಮತ್ತು ಪಾಂಡಿಯನ್‌ ಅಮ್ಮನಿಗೆ ಮೋಸ ಮಾಡಿದರು,” ಎಂದೂ ಶಶಿಕಲಾ ಹೇಳಿದ್ದಾರೆ. ಇದೇ ವೇಳೆ, ರಾಜಕೀಯ ಬಿಕ್ಕಟ್ಟಿನಲ್ಲಿ ಬಿಜೆಪಿಯ ಪಾತ್ರವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next