ಕಲಬುರಗಿ: ರಾಜ್ಯದಲ್ಲಿ ಕಾಂಗ್ರೆಸ್ ಮಾಡಿರುವ ಕೆಲಸಗಳು ಹಾಗೂ ಜನರ ಸ್ಪಂದನೆ ನೋಡಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೆದರಿದ್ದಾರೆ. ಅದಕ್ಕಾಗಿ ಪದೇ ಪದೇ ರಾಜ್ಯಕ್ಕೆ ಬಂದು ಬಿಜೆಪಿ ನಾಯಕರಿಗೆ ಪಾಠ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ(ಐ) ಡಾ| ಜಿ.ಪರಮೇಶ್ವರ ಹೇಳಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಬೇರುಗಳು ತುಂಬಾ ಭದ್ರವಾಗಿವೆ. ಅವುಗಳನ್ನು ಅಮಿತ್ ಶಾ ಎಷ್ಟು ಬಂದು ಹೋದರೂ ಕಿತ್ತು ಹಾಕುವುದು ಸುಲಭ ಸಾಧ್ಯವಲ್ಲ ಎನ್ನುವುದು ಮನವರಿಕೆ ಆಗಿದೆ. ಆದ್ದರಿಂದಲೇ ಬಂದಾಗಲೊಮ್ಮೆ ಬಿಜೆಪಿ ನಾಯಕರಿಗೆ ಬೈಯ್ಯುತ್ತಿದ್ದಾರೆ ಎಂದರು.
ರಾಜ್ಯದ ಚುನಾವಣೆಯಲ್ಲೂ ಇವಿಎಂ ಬಳಕೆ ಮಾಡುತ್ತಿರುವುದು ಅನುಮಾನ ಹುಟ್ಟಿಸಿದೆ. ಯಂತ್ರಗಳನ್ನು ಹ್ಯಾಕ್ ಮಾಡಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಯೋಜಿಸಲಾಗುತ್ತಿದೆ ಎನ್ನುವುದು ಜನತೆಯ ಅನುಮಾನವೂ ಆಗಿದೆ. ಈ ನಿಟ್ಟಿನಲ್ಲಿ ನಮ್ಮ ಪಕ್ಷದಿಂದ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ. ಆದರೂ ಕರ್ನಾಟಕದಲ್ಲಿ ಶಾ ಮತ್ತು ಮೋದಿ ಅವರ ಅಚ್ಛೆ ದಿನ್ ಮತ್ತು ಕಪ್ಪು ಹಣ ವಾಪಸ್ಸು ತಂದು ಬ್ಯಾಂಕಿಗೆ ಹಾಕುತ್ತೇನೆ, ಹಿಂದೂತ್ವದ ನಾಟಕಗಳು ನಡೆಯುವುದಿಲ್ಲ.ಯಾಕೋ ಬಿಜೆಪಿಗೆ ಅಚ್ಛೆ ದಿನ್ ಕಳೆದು ಹೋಗುವ ಲಕ್ಷಣಗಳು ಕಂಡು ಬರುತ್ತಿವೆ ಎಂದರು.
ದ್ವಿಮುಖ ನೀತಿ: ಮಹಾದಾಯಿ ವಿಚಾರದಲ್ಲಿ ಬಿಜೆಪಿ ದ್ವಿಮುಖ ನೀತಿ ಅನುಸರಿಸುತ್ತಿದೆ. ಇಂತಹ ನಿಲವು ಭವಿಷ್ಯದಲ್ಲಿ ಬಿಜೆಪಿಗೆ ಮುಳುವಾಗಲಿದೆ. ಗೋವಾ ಮುಖ್ಯಮಂತ್ರಿ ಇವತ್ತೂಂದು ರೀತಿ ಹಾಗೂ ನಾಳೆ ಒಂದು ರೀತಿ ಮಾತನಾಡುತ್ತಿದ್ದಾರೆ. ಒಮ್ಮೆ ಕುಡಿಯಲು ನೀರು ಬಿಡುತ್ತೇವೆ, ಇನ್ನೊಮ್ಮೆ ಬಿಡಲ್ಲ ಎನ್ನುತ್ತಿದ್ದಾರೆ. ಇಷ್ಟು ನಾಟಕ ಆಡುವ ಬದಲು ನೇರವಾಗಿ ಮುಖ್ಯಮಂತ್ರಿಗೆ ಪತ್ರ ಬರೆಯಬಹುದಿತ್ತಲ್ಲ ಎಂದರು.
ಅವರು ಹಿರಿಯರು: ಮಾಜಿ ಸಚಿವ ವೈಜನಾಥ ಪಾಟೀಲ ಅವರ ಸಿಟ್ಟಿನ ಕುರಿತು ಕೇಳಿದಾಗ, ನೋಡಿ ಅವರು ಹಿರಿಯರು. ಬೈತಾರೆ, ಅದೆಲ್ಲವನ್ನು ಸಂಭಾಳಿಸಿಕೊಂಡು ಹೋಗೋಣ. ಅವರು ಅಂದಿದ್ದಕ್ಕೆ ನಾನೇನು ಸಿಟ್ಟಾಗಿಲ್ಲ ಎಂದರು.