ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತೆ ರಾಜ್ಯಕ್ಕೆ ಬರಲು ದಿನಗಣನೆ ಆರಂಭವಾಗುತ್ತಿದ್ದಂತೆ ಪಕ್ಷದ ರಾಜ್ಯ ಘಟಕ ತನ್ನ ಚಟುವಟಿಕೆಗಳನ್ನು ಚುರುಕುಗೊಳಿಸಿದೆ. ಮುಂಬರುವ ವಿಧಾನಸಭೆ ಚುನಾವಣೆ ಮತ್ತು ನವೆಂಬರ್‌ನಲ್ಲಿ ನಡೆಯಲಿರುವ ನವಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಗಳ ಸಿದಟಛಿತೆ ಕುರಿತಂತೆ ಭಾನುವಾರ ಸರಣಿ ಸಭೆಗಳನ್ನು ನಡೆಸಿದೆ. ನಗರದ ಹೊರವಲಯದ ಕಲ್ಯಾಣ ಮಂಟಪದಲ್ಲಿ ವಿಧಾನಸಭೆ ಚುನಾವಣೆಗಾಗಿ ನೇಮಕಗೊಂಡಿರುವ ಪೂರ್ಣಾವಧಿ ವಿಸ್ತಾರಕರ ಪ್ರಶಿಕ್ಷಣ ವರ್ಗ ನಡೆದರೆ, ಮಲ್ಲೇಶ್ವರದಲ್ಲಿರುವ
ರಾಜ್ಯ ಬಿಜೆಪಿ ಕಚೇರಿಯಲ್ಲಿ ನವಕರ್ನಾಟಕ ನಿರ್ಮಾಣ ಪರಿವರ್ತನಾ ರಥಯಾತ್ರೆ ಜಿಲ್ಲಾ ಯಾತ್ರಾ ಪ್ರಮುಖರು, ಇತ್ತೀಚೆಗೆ ನೇಮಕಗೊಂಡಿರುವ ಸಾಂಪ್ರದಾಯಿಕ ಪ್ರಚಾರ ಸಮಿತಿ ಮತ್ತು ಅಸಾಂಪ್ರದಾಯಿಕ ಪ್ರಚಾರ ಸಮಿತಿ
ಸದಸ್ಯರೊಂದಿಗೆ ಪ್ರತ್ಯೇಕ ಸಭೆ ನಡೆಸಲಾಗಿದೆ.
ಕಳೆದ ಆಗಸ್ಟ್‌ನಲ್ಲಿ ರಾಜ್ಯಕ್ಕೆ ಭೇಟಿ ನೀಡಿದ್ದ ಅಮಿತ್ ಶಾ, ಪಕ್ಷದ ರಾಜ್ಯ ಘಟಕದ ನಿಷ್ಕ್ರಿಯತೆ, ಮುಖಂಡರ ನಡುವಿನ ಭಿನ್ನಾಭಿಪ್ರಾಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಮುಂಬರುವ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಸಂಘಟನೆ ಕಾರ್ಯ ಚುರುಕುಗೊಳಿಸುವಂತೆ ತಾಕೀತು ಮಾಡಿದ್ದರು. ಅಲ್ಲದೆ, ಭಿನ್ನಮತ ದೂರವಿಟ್ಟು ಒಗ್ಗಟ್ಟಿನ ಕೆಲಸ ಮಾಡುವಂತೆ ನಿರ್ದೇಶಿಸಿದ್ದರು. ಅದಾದ ಬಳಿಕ ಸಂಘಟನಾ ಕೆಲಸಗಳನ್ನು ಚುರುಕುಗೊಳಿಸಿದ್ದ ಬಿಜೆಪಿ ಸರಣಿ ಸಭೆಗಳನ್ನು ನಡೆಸಿತ್ತು. ಆದರೆ, ಒಂದು ವಾರದಿಂದ ಮತ್ತೆ ಪಕ್ಷದಲ್ಲಿ ಅಸಮಾಧಾನ ಹೊಗೆಯಾಡತೊಡಗಿತ್ತು.
ಈ ಮಧ್ಯೆ ಅ. 2ರಿಂದ ಕೇರಳ ಪ್ರವಾಸದಲ್ಲಿರುವ ಅಮಿತ್ ಶಾ, ಅ. 4ರಂದು ಮಂಗಳೂರಿನಲ್ಲಿ ಪಕ್ಷದ ಪ್ರಮುಖರು ಹಾಗೂ ಸಾಂಪ್ರದಾಯಿಕ ಪ್ರಚಾರ ಸಮಿತಿ ಮತ್ತು ಅಸಾಂಪ್ರದಾಯಿಕ ಪ್ರಚಾರ ಸಮಿತಿ ಸದಸ್ಯರೊಂದಿಗೆ ಸಭೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಘಟಕ ಪಕ್ಷ ಸಂಘಟನೆ ಕುರಿತಂತೆ ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಬೇಕಿದ್ದು, ಅದಕ್ಕಾಗಿ ಗುರುವಾರ ಸರಣಿ ಸಭೆಗಳನ್ನು ಏರ್ಪಡಿಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.
ಶಾ ರಾಜ್ಯ ಮುಖಂಡರಿಗೆ ನೀಡಿರುವ ಸೂಚನೆಗಳ ಪೈಕಿ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ವಿಷಯ ಪ್ರಮುಖವಾದದ್ದು. ಈ ಹಿನ್ನೆಲೆಯಲ್ಲಿ ಹೊರವಲಯದಲ್ಲಿ ನಡೆದ ಪೂರ್ಣಾವಧಿ ವಿಸ್ತಾರಕರ ಸಭೆಯಲ್ಲಿ ವಿಸ್ತಾರಕರು ಇದುವರೆಗೆ ಮಾಡಿರುವ ಕೆಲಸಗಳ ಬಗ್ಗೆ ಮಾಹಿತಿ ಪಡೆಯಲಾಗಿದೆ. ಪ್ರಮುಖವಾಗಿ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಕುರಿತಂತೆ ವಿವರ ಪಡೆಯಲಾಗಿದೆ.
ಗೈರು ಹಾಜರಿ ನಡುವೆ ಸಭೆ: ರಾಜ್ಯದಲ್ಲಿ ಪಕ್ಷ ಸಂಘಟನೆ ಮತ್ತು ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದಂತೆ ಬೂತ್ ಸಮಿತಿ, ಸಾಂಪ್ರದಾಯಿಕ ಪ್ರಚಾರ ಸಮಿತಿ ಮತ್ತು ಅಸಾಂಪ್ರದಾಯಿಕ ಪ್ರಚಾರ (ಸಾಮಾಜಿಕ ಜಾಲತಾಣ ಪ್ರಚಾರ) ಸಮಿತಿಗಳನ್ನು ರಚಿಸಿದ್ದು, ಈಗಾಗಲೇ ಬೂತ್ ಸಮಿತಿ ಸಭೆ ನಡೆದಿದೆ. ಉಳಿದೆರಡು ಸಮಿತಿಗಳ ಸಭೆ ಬಾಕಿ ಇದ್ದು, ಅಮಿತ್ ಶಾ ಬರುವುದರೊಳಗಾಗಿ ಈ ಸಭೆಗಳನ್ನು ನಡೆಸಬೇಕೆಂಬ ಉದ್ದೇಶದಿಂದ ಸಾಂಪ್ರದಾಯಿಕ ಪ್ರಚಾರ ಸಮಿತಿ
ನೇತೃತ್ವ ವಹಿಸಿರುವ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮತ್ತು ಅಸಾಂಪ್ರದಾಯಿಕ ಪ್ರಚಾರ ಸಮಿತಿ ನೇತೃತ್ವ
ವಹಿಸಿರುವ ಸಂಸದ ಪ್ರಹ್ಲಾದ ಜೋಶಿ ಅವರ ಗೈರು ಹಾಜರಿ ನಡುವೆಯೇ ಭಾನುವಾರ ಎರಡೂ ಸಭೆಗಳನ್ನು ಪಕ್ಷದ
ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ರಾಜ್ಯ ಉಸ್ತುವಾರಿ ಮುರಳೀಧರರಾವ್ ಅವರು ನಡೆಸಿದ್ದಾರೆ.