Advertisement

ಉಗ್ರ ನಿಗ್ರಹ ಮಾಡಿದ ಕೊಡಗಿನ ವೀರಯೋಧ ಮಹೇಶ್‌ಗೆ ಶೌರ್ಯ ಚಕ್ರ

03:17 AM Mar 17, 2019 | |

ಮಡಿಕೇರಿ: ಉಗ್ರರು ಸಾಕಷ್ಟು ಸಂಖ್ಯೆಯಲ್ಲಿದ್ದರೂ ಅಂಜದೆ ಅವರ ಅಡಗುದಾಣದ ಮೇಲೆ ದಾಳಿ ನಡೆಸಿ ಭಯೋತ್ಪಾದಕ ಕೃತ್ಯಕ್ಕೆ ಕಡಿವಾಣ ಹಾಕಿದ ಕೊಡಗಿನ ವೀರ ಯೋಧ ಸಿಪಾಯಿ ಎಚ್‌.ಎನ್‌. ಮಹೇಶ್‌ ಅವರಿಗೆ  ಶಾಂತಿ ಕಾಲದ ಉನ್ನತ ಪ್ರಶಸ್ತಿಯಾದ ಶೌರ್ಯ ಚಕ್ರ ಪ್ರದಾನ ಮಾಡಿ ಗೌರವಿಸಲಾಗಿದೆ.

Advertisement

ಭಾರತೀಯ ಸೇನಾ ಪಡೆ ಯಿಂದ ನೀಡಲಾಗುವ ಶೌರ್ಯ ಚಕ್ರವನ್ನು ಗುರುವಾರ ಹೊಸದಿಲ್ಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಯವರು ಮಹೇಶ್‌ ಅವರಿಗೆ ಪ್ರದಾನ‌ ಮಾಡಿದರು. ಗೋಣಿಕೊಪ್ಪದ ಗುತ್ತಿಗೆದಾರ ನಾಗರಾಜ್‌ ಮತ್ತು ಲಕ್ಷ್ಮೀ ದಂಪತಿಯ ಪುತ್ರ ಮಹೇಶ್‌ ಏಳು ವರ್ಷಗಳಿಂದ ಸೇನೆಯಲ್ಲಿ ಸಿಪಾಯಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ವರ್ಷ ಜಮ್ಮುಕಾಶ್ಮೀರದಲ್ಲಿ ನಡೆದ ಭಯೋತ್ಪಾದಕರ ದಾಳಿ ಸಂದರ್ಭ ಆ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ಮಹೇಶ್‌ ತತ್‌ಕ್ಷಣ ಉಗ್ರರನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆಗಿಳಿದಿದ್ದರು. ಮಹೇಶ್‌ ಅವರು ಉಗ್ರರ ಗುಂಡಿನ ದಾಳಿಯನ್ನು ಲೆಕ್ಕಿಸದೆ ಮುನ್ನುಗ್ಗಿ ಅವರ ಮೇಲೆ ಸತತ ಗುಂಡಿನ ಮಳೆಗೆರೆಯುತ್ತಾ ಹಿಮ್ಮೆಟ್ಟಿಸಿದ್ದರು. ಈ ಸಂದರ್ಭ ಓರ್ವ ಉಗ್ರನನ್ನು ಬಲಿ ಪಡೆದಿದ್ದರು. ಮತ್ತೋರ್ವ ಉಗ್ರ ಗಂಭೀರವಾಗಿ ಗಾಯಗೊಂಡು ಪಲಾಯನಗೈದಿದ್ದ.

ಕೊಡಗಿನ ಹಿರಿಮೆ
ಮಹೇಶ್‌ ಹಾಗೂ ಅವರ ಜತೆಗಿದ್ದ ಸೇನಾ ತಂಡ ಗುಂಡಿನ ಮಳೆಗರೆಯುತ್ತಿದ್ದಾಗ ಉಗ್ರರು ಜೀವಭಯದಿಂದ ಅಡಗು  ತಾಣವೊಂದರಲ್ಲಿ ಆಶ್ರಯ ಪಡೆದಿದ್ದರು. ತನ್ನಲ್ಲಿದ್ದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಮಯಪ್ರಜ್ಞೆ ಮತ್ತು ವಿವೇಚನೆಯಿಂದ ಬಳಸಿ ಹೆಚ್ಚುವರಿ ಸೇನಾ ಸಹಾಯ ಆಗಮಿಸುವ ವರೆಗೂ ಉಗ್ರರನ್ನು ಅಲ್ಲಿಯೇ ಹಿಡಿದಿರಿಸುವಲ್ಲಿ ಮಹೇಶ್‌ ಯಶಸ್ವಿಯಾಗಿದ್ದರು. ಮರು ದಿನವೂ ಕಾರ್ಯಾಚರಣೆ ಮುಂದು ವರಿಸಿ ಉಗ್ರ ರನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದ್ದರು. ಮಹೇಶ್‌ ಅವರ ಶೌರ್ಯ ಸಾಧನೆಗೀಗ ಶೌರ್ಯಚಕ್ರ ಪ್ರಶಸ್ತಿ ಲಭಿಸಿದೆ. ಮಹೇಶ್‌ ಅವರು ಶೌರ್ಯಚಕ್ರ ಪ್ರಶಸ್ತಿ ಸ್ವೀಕರಿಸುವ ಸಂದರ್ಭ ಅವರ ತಂದೆ ನಾಗರಾಜ್‌ ಮತ್ತು ತಾಯಿ ಲಕ್ಷ್ಮೀ ಅವರು ಹಾಜರಿದ್ದು ಪುತ್ರನ ಸಾಧನೆಗೆ ಆನಂದಬಾಷ್ಪ ಮೂಲಕ ಹರ್ಷ ವ್ಯಕ್ತಪಡಿಸಿದರು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೂ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next