ಲಂಡನ್: ಆಸ್ಟ್ರೇಲಿಯಾದ ಪ್ರತಿಭಾನ್ವಿತ ಬ್ಯಾಟ್ಸಮನ್ ಶಾನ್ ಮಾರ್ಷ್ ವಿಶ್ವಕಪ್ ಕೂಟದಿಂದಲೇ ಹೊರಬಿದ್ದಿದ್ದಾರೆ. ಮಾರ್ಷ್ ಬದಲಿಗೆ ಪೀಟರ್ ಹ್ಯಾಂಡ್ಸ್ ಕಾಂಬ್ ಅವರನ್ನು ತಂಡಕ್ಕೆ ಕರೆಸಿಕೊಳ್ಳಲಾಗಿದೆ.
ನೆಟ್ಸ್ ನಲ್ಲಿ ಅಭ್ಯಾಸ ನಡೆಸುವ ವೇಳೆ ಪ್ಯಾಟ್ ಕಮಿನ್ಸ್ ಎಸೆದ ಬಾಲ್ ಮಾರ್ಷ್ ಮುಂಗೈ ಗೆ ಬಡಿದ ಕಾರಣ ಗಾಯಗೊಂಡಿದ್ದಾರೆ. ಶಾನ್ ಮಾರ್ಷ್ ಅವರ ಮುಂಗೈ ಮೂಳೆ ಮುರಿತವಾಗಿರುವ ಕಾರಣ ಅವರು ತಂಡದಿಂದ ಹೊರಗುಳಿಯಬೇಕಾಗಿದೆ. ಅವರ ಬದಲಿಗೆ ಪೀಟರ್ ಹ್ಯಾಂಡ್ಸ್ ಕಾಂಬ್ ಆಸೀಸ್ 15ರ ಬಳಗಕ್ಕೆ ಸೇರಲಿದ್ದಾರೆ ಎಂದು ಆಸಿಸ್ ಕೋಚ್ ಜಸ್ಟಿನ್ ಲ್ಯಾಂಗರ್ ತಿಳಿಸಿದ್ದಾರೆ.
ಪ್ರಸಕ್ತ ಕೂಟದಲ್ಲಿ ಶ್ರೀಲಂಕಾ ಮತ್ತು ಪಾಕಿಸ್ಥಾನದ ವಿರುದ್ಧ ಆಡುವ ಅವಕಾಶ ಪಡೆದಿದ್ದ ಶಾನ್ ಎರಡು ಪಂದ್ಯಗಳಲ್ಲಿ ಒಟ್ಟು 26 ರನ್ ಗಳಿಸಿದ್ದರು.
ಕೇವಲ ಶಾನ್ ಮಾರ್ಷ್ ಅಲ್ಲದೆ ಗ್ಲೆನ್ ಮ್ಯಾಕ್ಸವೆಲ್ ಕೂಡಾ ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ಹೊಡೆತ ತಿಂದಿದ್ದಾರೆ. ಆದರೆ ಮ್ಯಾಕ್ಸ್ ವೆಲ್ ಗೆ ಗಂಭೀರ ಗಾಯವೇನು ಆಗಿಲ್ಲ ಎಂದು ಆಸೀಸ್ ಕ್ರಿಕೆಟ್ ಮೂಲಗಳು ತಿಳಿಸಿವೆ.
ಈಗಾಗಲೇ ಏಳು ಪಂದ್ಯಗಳನ್ನು ಜಯಿಸಿ 14 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿರುವ ಕಾಂಗರೂಗಳು ಅಂತಿಮ ಲಿಗ್ ಪಂದ್ಯವನ್ನು ದಕ್ಷಿಣ ಆಫ್ರಿಕಾ ವಿರುದ್ಧ ಶನಿವಾರ ಆಡಲಿದೆ.