ಪಟ್ನಾ : ‘ಭಾರತೀಯ ಜನತಾ ಪಕ್ಷಕ್ಕೆ ತ್ರಿವಳಿ ತಲಾಕ್ ನೀಡಿದ ಮೊದಲ ರಾಜ್ಯವೆಂದರೆ ರಾಜಸ್ಥಾನ’ ಎಂದು ರಾಜಕಾರಣಿಯಾಗಿ ಪರಿವರ್ತಿರಾಗಿರುವ ಬಿಜೆಪಿಯ ಹಿರಿಯ ನಾಯಕ ಅವರು ತಮ್ಮ ಪಕ್ಷ ಮತ್ತು ಅದರ ನಾಯಕತ್ವವನ್ನು ಗುರಿ ಇರಿಸಿ ವ್ಯಂಗ್ಯವಾಡಿದ್ದಾರೆ.
ರಾಜಸ್ಥಾನದಲ್ಲಿ ಮೂರು ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎಲ್ಲ ಸ್ಥಾನಗಳನ್ನು ಗೆದ್ದುಕೊಂಡಿರುವ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಕೆಲಕಾಲದಿಂದ ಬದಿಗೊತ್ತಲ್ಪಟ್ಟಿರುವ ನಾಯಕ
ಶತ್ರುಘ್ನ ಸಿನ್ಹಾ ಈ ಮಾತುಗಳನ್ನು ಆಡಿದ್ದಾರೆ.
ಶತ್ರು ನುಡಿದಿರುವ ತ್ರಿವಳಿ ತಲಾಕ್ ವ್ಯಂಗ್ಯೋಕ್ತಿ ಹೀಗಿದೆ : ಅಜ್‌ಮೇರ್ : ತಲಾಕ್; ಅಲ್ವಾರ್: ತಲಾಕ್, ಮಂಡಲಗಢ: ತಲಾಕ್. ನಮ್ಮ ವಿರೋಧಿಗಳು ಬಿಜೆಪಿಯನ್ನು ಮಣಿಸಿ ಈ ಮೂರು ಚುನಾವಣೆಗಳನ್ನು ದೊಡ್ಡ ಅಂತರದಲ್ಲಿ ಗೆದ್ದಿರುವುದು ಪಕ್ಷಕ್ಕೆ ಒದಗಿರುವ ಬಹುದೊಡ್ಡ ಪ್ರಹಾರವಾಗಿದೆ !
ಶತ್ರು ಮುಂದುವರಿದು ಬರೆದಿರುವುದು ಹೀಗೆ : ಈಗಲೂ ಕಾಲ ಮಿಂಚಿಲ್ಲ; ಕೂಡಲೇ ನೇರ್ಪು ಕ್ರಮ ಕೈಗೊಳ್ಳಿ; ಇಲ್ಲದಿದ್ದರೆ ವಿನಾಶಕಾರಿ ಸೋಲು ಖಚಿತ; ಪಕ್ಷದ ವಿರುದ್ಧ ಟಾಟಾ-ಬೈಬೈ ಫಲಿತಾಂಶ ಗ್ಯಾರಂಟಿ. ಎದ್ದೇಳು ಬಿಜೆಪಿ; ಜೈ ಹಿಂದ್ !
ಶತ್ರುಘ್ನ ಸಿನ್ಹಾ ಅವರು ಬಿಹಾರದ ಪಟ್ನಾ ಸಾಹೇಬ್ ಕ್ಷೇತ್ರದಿಂದ ಲೋಕಸಭೆಗೆ ಗೆದ್ದವರಾಗಿದ್ದಾರೆ. ಬಿಜೆಪಿಗೆ ತ್ರಿವಳಿ ತಲಾಕ್ ನೀಡಿದ ಮೊದಲ ರಾಜ್ಯವೆಂದು ಶತ್ರು ಟ್ವೀಟ್ ಮಾಡಿರುವುದು ಪಕ್ಷದ ವರಿಷ್ಠರ ಕೆಂಗಣ್ಣಿಗೆ ಕಾರಣವಾಗಿದೆ.