Advertisement

ಸಾಹಿತ್ಯ ರಸಾಸ್ವಾದದ ಮೂಲಕ ಸಮಾಜ, ಧರ್ಮ, ಸ್ನೇಹ, ವೇದಾಂತದ ದರ್ಶನ

11:29 PM Dec 09, 2023 | Team Udayavani |

ಕಲೆ ಮತ್ತು ಸಾಹಿತ್ಯ ಎರಡರ ಅಪರೂಪದ ಸಂಗಮವಾಗಿರುವ ಶತಾವಧಾನಿ ಡಾ| ಆರ್‌. ಗಣೇಶ್‌ ಅವರಿಗೆ ಈಗ ಅರವತ್ತರ ಸಂಭ್ರಮ. ಅವಧಾನದ ಮೂಲಕ ಜಗತ್ತಿಗೆ ಹೆಚ್ಚು ಪರಿಚಿತವಾಗಿರುವ ಗಣೇಶ್‌ ಅವರು “ಉದಯವಾಣಿ ಸಾಪ್ತಾಹಿಕ ಸಂಪದ’ಕ್ಕೆ ಮಾತಿಗೆ ಸಿಕ್ಕರು. ಅವರ ಸಂದರ್ಶನ ಒಂದು ಪುಟ್ಟ ಭಾಗ ಇಲ್ಲಿದೆ.

Advertisement

ಸಂದರ್ಶನ: ಡಾ| ಸಂಧ್ಯಾ ಹೆಗಡೆ, ದೊಡ್ಡಹೊಂಡ

ಇತ್ತೀಚೆಗೆ ನೀವು ಕತೆ, ಕವನ, ಕಾದಂಬರಿ – ಹೀಗೆ ಸಾಹಿತ್ಯ ಹಾಗೂ ಸಂಗೀತದಂಥ ಕಲಾಪ್ರಕಾರಗಳಲ್ಲಿ ಹೆಚ್ಚು ತೊಡಗಿಕೊಂಡಂತೆ ಕಾಣುತ್ತದೆ…

ಇಲ್ಲ, ಮೊದಲಿನಿಂದಲೂ ನಾನು ಕತೆ, ಕವಿತೆ, ಕಾದಂಬರಿ, ಲಲಿತಪ್ರಬಂಧ ಇತ್ಯಾದಿ ಪ್ರಕಾರಗಳಲ್ಲಿ ದುಡಿಯುತ್ತಲೇ ಇದ್ದೇನೆ. ಆದರೆ ಅವು ಬೆಳಕಿಗೆ ಬಂದಂತೆ ತೋರುವುದು ಮಾತ್ರ ಈಚೆಗೆ. ನನ್ನ ಶಾಲೆ-ಕಾಲೇಜಿನ ದಿನಗಳಿಂದಲೇ ಈ ಕೃಷಿ ಸಾಗಿತ್ತಾದರೂ ಆಗ ಬರೆದದ್ದು ನನಗೆ ತೃಪ್ತಿ ತಾರದ ಕಾರಣ ಪ್ರಕಟಿಸದೇ ಉಳಿಸಿದ್ದೆ; ಹೆಚ್ಚಿನವನ್ನು ಹರಿದೂ ಹಾಕಿದೆ. ಈಚೆಗೆ ಪ್ರಕಟವಾದ ಇಂಥ ಸಾಹಿತ್ಯಪ್ರಕಾರಗಳಲ್ಲಿ ಹೆಚ್ಚಿನ ಭಾಗ ನನ್ನ ಆ ಕಾಲದ ಆಲೋಚನೆಗಳ ಪರಿಣತ ರೂಪವೇ ಇದೆಯೆಂದರೆ ತಪ್ಪಾಗದು. ಸಂಗೀತ, ನೃತ್ಯ ಮತ್ತು ಚಿತ್ರಗಳಂಥ ಲಲಿತಕಲೆಗಳಲ್ಲಿ ನನ್ನ ಆಸಕ್ತಿ ಸಾಹಿತ್ಯಕ್ಕಿಂತ ಮುಂಚಿನದು. ಆದರೆ ಅವುಗಳಲ್ಲಿ ಪ್ರಯೋಗ ಪರಿಣತಿ ಬರುವಷ್ಟು ದುಡಿಮೆ ಸಾಗಲಿಲ್ಲ. ಅಲ್ಲೇನಿದ್ದರೂ ನನ್ನದು ಭಾವಯಿತ್ರೀ ಪ್ರತಿಭೆ; ಸಾಹಿತ್ಯದ ಮೂಲಕ ಅವುಗಳೊಡನೆ ಎಷ್ಟು ಬೆಸೆದುಕೊಳ್ಳಬಹುದೋ ಅಷ್ಟರ ಮಟ್ಟಿಗೆ ಕಾರಯಿತ್ರೀ ಪ್ರತಿಭೆ. ಹೀಗಾಗಿ ನನ್ನ ಬದುಕಿನಲ್ಲಿ ಯಾವ ಕಲೆಯೂ ಹೊಸತಾಗಿ ಬಂದದ್ದಿಲ್ಲ.

ಕಲೆ, ಸಾಹಿತ್ಯ, ವೇದಾಂತ, ಅವಧಾನ – ಹೀಗೆ ಹಲವು ಮುಖಗಳಲ್ಲಿ ನಿಮ್ಮ ಆಸಕ್ತಿ ಚೆಲ್ಲುವರಿದಿದೆ. ಈ ನಡುವೆ ನಿಮ್ಮ ವ್ಯಕ್ತಿತ್ವದ ಕೇಂದ್ರವನ್ನು ಹೇಗೆ ಗುರುತಿಸಿಕೊಳ್ಳುವಿರಿ?
ಗೀತ ನೃತ್ಯ, ಚಿತ್ರ, ಶಿಲ್ಪ, ಅವಧಾನ ಗಳಂಥ ಕಲೆ, ವಿವಿಧ ಭಾಷೆಗಳ ಸಾಹಿತ್ಯ, ವಿಜ್ಞಾನ ಮತ್ತು ದರ್ಶನಶಾಸ್ತ್ರಗಳು – ಎಲ್ಲವೂ ನನಗೆ ಪ್ರೀತಿಯ ಕ್ಷೇತ್ರಗಳೇ. ಆದರೆ ನನ್ನ ಕೃಷಿ ಹೆಚ್ಚಾಗಿ ಸಾಗಿರುವುದು ಭಾಷೆ-ಸಾಹಿತ್ಯಗಳ ಮೂಲಕ. ಇವುಗಳ ರಸಾಸ್ವಾದದ ಮೂಲಕವೇ ನನಗೆ ಸಮಾಜ, ಧರ್ಮ, ಸ್ನೇಹ, ವೇದಾಂತ ಮುಂತಾದುವುಗಳ ದರ್ಶನವಾಯಿತು. ಹೀಗೆ ಸಾಹಿತ್ಯವೇ ನನ್ನ ಆಧಾರಶ್ರುತಿ. ಉಳಿದುವೆಲ್ಲ ಇದಕ್ಕೆ ಸಂವಾದಿಯಾಗಿ ಬರುವ ವಿವಿಧ ಸ್ವರಗಳು. ವಸ್ತುತಃ ವ್ಯಕ್ತಿತ್ವವನ್ನು ಕಳೆದುಕೊಳ್ಳಲೆಂದೇ ಕಲೆ- ದರ್ಶನಗಳಂಥ ಸಾಧನಗಳಿರುವುದು. ಇದು ನನಗೆ ಒದಗಿಬಂದದ್ದು ಸಾಹಿತ್ಯದ ಮೂಲಕ.

Advertisement

ನಿಮಗೆ ಹೆಚ್ಚು ತೃಪ್ತಿ ಕೊಟ್ಟದ್ದು ಅವಧಾನವೋ ಇತರ ಕಲಾಪ್ರಕಾರಗಳೋ ?
ಕಲೆಯ ಸೃಷ್ಟಿಯ ಮೂಲಕ ಸಿಗುವ ಆನಂದವನ್ನು ಕುರಿತು ಈ ಪ್ರಶ್ನೆ ಹುಟ್ಟಿದ್ದಲ್ಲಿ ಅದು ಅವಧಾನದಿಂದ ಎನ್ನಬೇಕು. ಇದಕ್ಕೆ ಕಾರಣ ನನಗೆ ಆ ಮಾಧ್ಯಮದಲ್ಲಿರುವ ಗತಿ. ಹಾಗಲ್ಲದೆ ಕಲೆಯ ಆಸ್ವಾದದಿಂದ ದಕ್ಕುವ ಆನಂದವನ್ನು ಕುರಿತಿದ್ದರೆ, ಎಲ್ಲ ಕಲೆಗಳೂ ಸೇರುತ್ತವೆ – ಒಂದೇ ಸಿಹಿ ಹಲವು ತಿಂಡಿಗಳ ಮೂಲಕ ಸವಿಗೆ ಎಟುಕುವ ಹಾಗೆ.

ಪಾಶ್ಚಾತ್ಯ ಸಾಹಿತ್ಯ ಮತ್ತು ಸಂಸ್ಕೃತಿಗಳ ಕಡೆಗೆ ವಾಲುತ್ತಿರುವ ಯುವಜನಾಂಗ ವನ್ನು ಮತ್ತೆ ಭಾರತೀಯ ಸಂಸ್ಕೃತಿಯ ಕಡೆಗೆ ಆಕರ್ಷಿಸುವ ಉಪಾಯಗಳು ಯಾವುವು?
ಇದಕ್ಕೆ ಉತ್ತರ ಹೇಳುವುದು ಕಷ್ಟ. ಮೊದಲು ನಮ್ಮೊಳಗೆ ನಮ್ಮ ಮೌಲ್ಯಗಳನ್ನು ತುಂಬಿಕೊ
ಳ್ಳೋಣ. ಹಾಗೆ ತುಂಬಿ ಕೋಡಿವರಿಯುವ ಸತ್ವೋನ್ನತಿ ತನ್ನಂತೆಯೇ ತನ್ನ ಪ್ರಸಾರ ಮಾಧ್ಯಮ ಗಳನ್ನು ಹುಡುಕಿಕೊಳ್ಳುತ್ತದೆ. ವ್ಯಾಟ್ಸ್‌ಆ್ಯಪ್‌ ಫಾರ್ವರ್ಡ್‌ಗಳಂತೆ ಘೋಷಣೆಗಳನ್ನೋ ಹಪಹಪಿಕೆಗಳನ್ನೋ ಸುಮ್ಮನೆ ಹಬ್ಬಿಸುವುದರಿಂದ ಪ್ರಯೋಜನ ಕಡಿಮೆ. ಮೌಲ್ಯಗಳ ಸಜೀವ ಅನುಸಂಧಾನವೊಂದೇ ತಾರಕ ಮಾರ್ಗ.

ಲೋಕ ನಿಮ್ಮನ್ನು ಹೇಗೆ ನೆನಪಿಟ್ಟು ಕೊಳ್ಳ ಬೇಕೆಂದು ಬಯಸುವಿರಿ?
ಈ ಬಗೆಯ ತಳಮಳಗಳೆಲ್ಲ ತುಂಬ ಹಿಂದೆ ಕುದಿಯುತ್ತಿದ್ದವು. ಈಗ ಆ ಕೋಟಲೆ ಇಲ್ಲ. ನಾವುಗಳು ಮಾಡಿದ್ದು ನಮ್ಮ ನೆಮ್ಮದಿಗೂ ಮಿಕ್ಕವರ ಸಂತಸಕ್ಕೂ ಒದಗಿಬಂದರೆ ಸಾಕು.

Advertisement

Udayavani is now on Telegram. Click here to join our channel and stay updated with the latest news.

Next