Advertisement

ಬಳ್ಳಮಂಜ ಅನಂತೇಶ್ವರ ಸನ್ನಿಧಿಯಲ್ಲಿ ಷಷ್ಠಿ ಸಂಭ್ರಮ

05:06 PM Nov 23, 2017 | |

ಬೆಳ್ತಂಗಡಿ: ಮಚ್ಚಿನ ಗ್ರಾಮದ ಬಳ್ಳಮಂಜ ಶ್ರೀ ಅನಂತೇಶ್ವರ ಕ್ಷೇತ್ರ ಸಹಸ್ರಾರು ಭಕ್ತರ ಪಾಲಿನ ಪುಣ್ಯ ಬೀಡು. ಭಕ್ತರ ಸಂಕಷ್ಟ ನಿವಾರಿಸಿ ಅನಂತ ಫಲವನ್ನೀವ ಅನಂತರೂಪಿ ಶ್ರೀ ಸುಬ್ರಹ್ಮಣ್ಯನು ಆವಿರ್ಭವಿಸಿದ ಪವಿತ್ರ ಸಾನ್ನಿಧ್ಯ. ಶ್ರೀ ಒಡೆಯನಿಗೀಗ ಷಷ್ಠಿ ಬ್ರಹ್ಮರಥೋತ್ಸವದ ಸಂಭ್ರಮ.

Advertisement

ಷಷ್ಠಿ ಉತ್ಸವ
ಸುಬ್ರಹ್ಮಣ್ಯ, ಕುಡುಪು ಹೊರತು ಪಡಿಸಿದರೆ ಸಹಸ್ರಾರು ಭಕ್ತರ ಕೂಡುವಿಕೆಯಿಂದ ಭಕ್ತಿ ಭಾವದ ಮಿಳಿತವಾಗಿ ವಿಜೃಂಭಣೆಯಿಂದ ನಡೆಯುವ ಷಷ್ಠಿ ಉತ್ಸವ ಬಳ್ಳಮಂಜ ಷಷ್ಠಿ ಎಂಬ ಹೆಗ್ಗಳಿಕೆ ಇದೆ.

ಖ್ಯಾತಿ ಪಸರಿಸುತ್ತಿದೆ
ತುಳುನಾಡಿನಾದ್ಯಂತ ಶ್ರೀಕ್ಷೇತ್ರದ ಖ್ಯಾತಿ ಪಸರಿಸಿದ್ದು, ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಸಂಖ್ಯೆ ವೃದ್ಧಿಸುತ್ತಿದೆ. ಜಿಲ್ಲೆಯಲ್ಲೇ ಅತ್ಯಂತ ಪ್ರಸಿದ್ಧ ಕ್ಷೇತ್ರವೆಂದೆನಿಸಿದ್ದು, ಷಷ್ಠಿ ಮಹೋತ್ಸವಕ್ಕೆ ಬ್ರಹ್ಮ ರಥೋತ್ಸವ ಕಣ್ತುಂಬಿಕೊಳ್ಳಲು ಜನರು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ.

ಕ್ಷೇತ್ರ ಬೆಳಗಿತು; ಜನ ಬೆಳಗಿದರು
ಸಹಸ್ರಾರು ವರ್ಷಗಳ ಇತಿಹಾಸವಿರುವ ದೇವಸ್ಥಾನಕ್ಕೆ ಅಭಿವೃದ್ಧಿ ಕಾರ್ಯ ಅಗತ್ಯವಿತ್ತು. ಅದರಂತೆ 2000 ಇಸವಿಯಿಂದ ಈಚೆಗೆ ಅನೇಕ ಅಭಿವೃದ್ಧಿ ಕಾರ್ಯ ಮಾಡುವ ಮೂಲಕ ಕ್ಷೇತ್ರವು ನಾವೀನ್ಯ ಪಡೆಯಿತು. ಶ್ರೀ ದೇವರ ಶಿಲಾಮಯ ಗರ್ಭಗುಡಿ ಸಹಿತವಾಗಿ, ಮೂಲಸ್ಥಾನ, ಅನಂತ ತೀರ್ಥಕೆರೆ, ನಾಗನಕಟ್ಟೆ ಶಿಲಾಮಯ ದೈವಸ್ಥಾನ ರೂಪುಗೊಂಡು ರಜತಪಲ್ಲಕ್ಕಿಯಲ್ಲಿ ಶ್ರೀ ದೇವರ ಉತ್ಸವಗಳ ಭಾಗ್ಯ ಒದಗಿತು.

ಇತ್ತೀಚಿನ ವರ್ಷಗಳಲ್ಲಿ ದೇವಾಲಯದ ಹೊರಪ್ರಾಂಗಣದ ಮೇಲ್ಛಾವಣಿ, ಶಿಲಾಮಯ ವಸಂತಮಂಟಪ, ಅಂಗಣ ಬಂಡಿ ಅನಂತ ಪ್ರಾಸಾದ ಅನ್ನಛತ್ರ, ಶಿಲಾಮಯ ಒಳಸುತ್ತು ಪೌಳಿ, ಇಂಟರ್‌ಲಾಕ್‌ ಅಳವಡಿಕೆ, ಬ್ರಹ್ಮರಥ, ಚಂದ್ರಮಂಡಲ ರಥದ ದುರಸ್ತಿ ಅತಿಥಿ ಗೃಹಗಳ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ಇತ್ಯಾದಿ ಅಭಿವೃದ್ಧಿ ಕಾರ್ಯಗಳಾಗಿವೆ. 2014ರಲ್ಲಿ ಶ್ರೀ ಸ್ವಾಮಿಗೆ ಬ್ರಹ್ಮಕಲಶಾಭಿಷೇಕ ಕಾರ್ಯ ಗಳನ್ನು ನಡೆಸಲಾಯಿತು.

Advertisement

ಮತ್ತೆ ಅಭಿವೃದ್ಧಿಗೆ ಸಜ್ಜಾಗಿದೆ ಕ್ಷೇತ್ರ
ದೇವಸ್ಥಾನದ ಹೊರ ಸುತ್ತುಪೌಳಿ ಶಿಥಿಲಾವಸ್ಥೆಯಲ್ಲಿದ್ದು, ಅದನ್ನು ನವೀಕರಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಜತೆಗೆ ಸುಸಜ್ಜಿತ ಕಚೇರಿ ಹಾಗೂ ಮಹಡಿಯನ್ನೊಳಗೊಂಡ ನವೀಕೃತ ಹೊರಗೋಪುರವನ್ನು ನಿರ್ಮಿಸಿ ಶ್ರೀ ಸ್ವಾಮಿಗೆ ಅರ್ಪಿಸುವ ಸಂಕಲ್ಪ ಮಾಡಲಾಗಿದೆ.

ಷಷ್ಠಿ ಜಾತ್ರೆಯ ಬಳಿಕ ಕಾಮಗಾರಿ
ಮುಂದಿನ ಎಪ್ರಿಲ್‌ ತಿಂಗಳಲ್ಲಿ ಜರಗುವ ಮೇಷ ಜಾತ್ರೆಯ ಸಂದರ್ಭದಲ್ಲಿ ನವೀಕೃತ ಹೊರಗೋಪುರವನ್ನು ಶ್ರೀ ದೇವರಿಗೆ ಸಮರ್ಪಿಸುವ ಉದ್ದೇಶ ಹೊಂದಿದ್ದು, ಷಷ್ಠಿ ಜಾತ್ರೆ ಬಳಿಕ ಕಾಮಗಾರಿ ಆರಂಭಿಸಲಾಗುತ್ತದೆ.
ಡಾ| ಹರ್ಷ ಸಂಪಿಗೆತ್ತಾಯ,
 ಆನುವಂಶಿಕ ಆಡಳಿತ ಮೊಕ್ತೇಸರ 

– ಚಂದ್ರಶೇಖರ್‌ ಎಸ್‌. ಅಂತರ

Advertisement

Udayavani is now on Telegram. Click here to join our channel and stay updated with the latest news.

Next