ತುಮಕೂರು: ದೇಶ ಅಭಿವೃದ್ಧಿ ಸಾಧಿಸಬೇಕಾದರೆ ಮಹಿಳೆಯರು ಸ್ವಾವಲಂಬಿಗಳಾಗಿ ಆರ್ಥಿಕವಾಗಿ ಪ್ರಗತಿ ಸಾಧಿಸಬೇಕು. ಟೋಲ್‌ಗಳಲ್ಲಿ ಭಿಕ್ಷೆ ಬೇಡುವ ಲಿಂಗತ್ವ ಅಲ್ಪಸಂಖ್ಯಾತರು ಇನ್ಮುಂದೆ ಕೈಚಾಚಿ ಭಿಕ್ಷೆ ಬೇಡದೆ ಕೈ ಎತ್ತಿ ನೀಡುವಂತಾಗಬೇಕು ಎಂದು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ವಿ.ಟೆಂಗಳಿ ಹೇಳಿದರು.
ನಗರದ ಬಾಲಭವನದಲ್ಲಿ ಬುಧವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಏರ್ಪಡಿಸಿದ್ದ ಫಲಾನುಭವಿಗಳಿಗೆ
ಚೆಕ್ ವಿತರಣಾ ಹಾಗೂ ಪ್ರಗತಿ ಪರಿಶೀಲನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅನೇಕ ಸಾಲ ಸೌಲಭ್ಯ: ಆರ್ಥಿಕ ಸಂಕಷ್ಟದಲ್ಲಿರುವ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಮಹಿಳಾ ಅಭಿವೃದ್ಧಿ ನಿಗಮದಿಂದ ಅನೇಕ ಸಾಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಇದರ ಅನುಕೂಲ ಪಡೆದು ಮಹಿಳೆಯರು ಆರ್ಥಿಕವಾಗಿ ಪ್ರಗತಿ ಹೊಂದಬೇಕು ಎಂದರು. ದಾರಿ ತೋರಿಸಬೇಕು: ಸಾಲ ಪಡೆದು ಅಭಿವೃದ್ಧಿ ಹೊಂದಿದ ಮಹಿಳೆಯರು ಇತರೆ ಮಹಿಳೆಯರಿಗೂ ದಾರಿ ತೋರಿಸಬೇಕೆಂದು ಹೇಳಿ, ಕೋವಿಡ್-19 ಲಾಕ್‌ಡೌನ್ ಸಂಕಷ್ಟ ಪರಿಸ್ಥಿತಿಯಲ್ಲಿದ್ದ ಮಹಿಳೆಯರಿಗೆ ನಿಗಮ ನೀಡಿದ ಸಹಾಯಧನ ಸೌಲಭ್ಯದಿಂದ ಅವರ ಕುಟುಂಬದವರ ಜೀವನ ನಿರ್ವಹಣೆಗೂ ಅನುಕೂಲವಾಗಿದೆ ಎಂದು ತಿಳಿಸಿದರು.
ಸ್ವಯಂ ಉದ್ಯೋಗ ಕೈಗೊಳ್ಳಿ: ಇಂದು ಟೋಲ್‌ಗಳಲ್ಲಿ ಭಿಕ್ಷೆ ಬೇಡುವ ಲಿಂಗತ್ವ ಅಲ್ಪಸಂಖ್ಯಾತರು ಇನ್ನು ಮುಂದೆ ಕೈಚಾಚಿ ಭಿಕ್ಷೆ ಬೇಡದೆ ಕೈ ಎತ್ತಿ ನೀಡುವಂತಾಗ ಬೇಕು. ಇದಕ್ಕಾಗಿ ಸರ್ಕಾರವು ಲಿಂಗತ್ವ ಅಲ್ಪಸಂಖ್ಯಾತರಿಗೆ ಸಾಲ ಸೌಲಭ್ಯ ನೀಡಿದ್ದು, ಈ ಸಾಲದಿಂದ ಹಲ ವಾರು ಲಿಂಗತ್ವ ಅಲ್ಪಸಂಖ್ಯಾತರು ಕುರಿ ಸಾಕಣೆ, ಬಟ್ಟೆ ಮಾರಾಟ ಮಾಡುವಂತ ಸ್ವಯಂ ಉದ್ಯೋಗ ಕೈಗೊಂಡು ಆರ್ಥಿಕಾಭಿವೃದ್ಧಿ ಹೊಂದುತ್ತಿರುವುದು ಸಂತಸ ತಂದಿದೆ ಎಂದರು.
500 ರೂ.ಗಳಿಗೆ ಹೆಚ್ಚಳ: ಮಾಜಿ ದೇವದಾಸಿಯರ ಪುನರ್ವಸತಿ ಹಾಗೂ ಆರ್ಥಿಕಾಭಿವೃದ್ಧಿಗಾಗಿ ಈ ಹಿಂದೆ ನಿಗಮದಿಂದ ನೀಡಲಾಗುತ್ತಿದ್ದ 25,000 ರೂ.ಗಳ ಸಹಾಯಧನ ಸೇರಿದಂತೆ 50,000 ರೂ.ಗಳ ಸಾಲ ಸೌಲಭ್ಯದ ಮೊತ್ತವನ್ನು 1 ಲಕ್ಷ ರೂ.ಗಳಿಗೆ ಹೆಚ್ಚಿಸಿ ಮಾರ್ಗಸೂಚಿಗೆ ಬದಲಾವಣೆ ತರಲಾಗಿದೆ. ಇದರಿಂದ ಅವರ ಮಕ್ಕಳು ಸ್ವಯಂ ಉದ್ಯೋಗ ಕೈಗೊಳ್ಳಲು ಅನುಕೂಲವಾಗಲಿದೆ. ಮಾಜಿ ದೇವದಾಸಿಯರಿಗೆ ನೀಡಲಾಗುತ್ತಿದ್ದ ಮಾಸಿಕ ವೇತನ 1 ಸಾವಿರ ರೂ.ಗಳ ಮೊತ್ತವನ್ನು 1500 ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ನುಡಿದರು.
ಸಾಲ ಮರುಪಾವತಿಸಿ: ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ವ್ಯವಸ್ಥಾಪಕ ನಾರಾಯಣಸ್ವಾಮಿ ಮಾತನಾಡಿ, ಸರ್ಕಾರದ ಯಾವುದೇ ಸಾಲ ಯೋಜನೆ ಯಶಸ್ವಿಯಲ್ಲಿ ಬ್ಯಾಂಕುಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಸಾಲ ಪಡೆದವರಿಂದ ವಸೂಲಾತಿಯಾದಾಗ ಮಾತ್ರ
ಮರು ಸಾಲ ನೀಡಲು ಅನುವಾಗುತ್ತದೆ. ಬ್ಯಾಂಕುಗಳು ಕೆರೆಯ ನೀರಿದ್ದಂತೆ. ಕೆರೆಯ ನೀರು ಬತ್ತದಂತೆ ಸಾಲ ಪಡೆದವರು ನಿಗಧಿತ
ಸಮಯದೊಳಗೆ ಸಾಲ ಮರು ಪಾವತಿ ಮಾಡಬೇಕೆಂದರು.
ನಂತರ ಉದ್ಯೋಗಿನಿ, ಸಮೃದ್ಧಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಫಲಾನು ಭವಿಗಳಿಗೆ ಸಾಲದ ಚೆಕ್ ವಿತರಣೆ ಮಾಡಲಾಯಿತು ಹಾಗೂ ಸಹಬಾಳ್ವೆ ಸಂಘದ ಅಧ್ಯಕ್ಷ ದೀಪಿಕಾ ಅವರ ಸೇವೆಯನ್ನು ಪರಿಗಣಿಸಿ ಸನ್ಮಾನಿಸಿ ಗೌರವಿಸಲಾಯಿತು.
ಚೆಕ್ ವಿತರಣಾ ಕಾರ್ಯಕ್ರಮದ ನಂತರ ಇಲಾಖಾಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಮಾಡಿ ಉದ್ಯೋಗಿನಿ, ದಮನಿತ ಹಾಗೂ
ಧನಶ್ರೀ ಫಲಾನುಭವಿಗಳ ಘಟಕಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎನ್. ನಟರಾಜ್ ಇತರರು ಇದ್ದರು.