ಚಿತ್ರದುರ್ಗ: ಜೀತ ಪದ್ಧತಿ ಶೋಷಣೆಯಾಗಿದ್ದು,ನಮ್ಮ ಜಿಲ್ಲೆಯನ್ನು ಜೀತಮುಕ್ತ ಮಾಡೋಣ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು ಹೇಳಿದರು.
ಜಿಲ್ಲಾಡಳಿತ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಜಿಪಂ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಜೀತದಾಳು ಪದ್ದತಿ ರದ್ದತಿ ದಿನಾಚರಣೆ ಹಾಗೂ ಪುನರ್ವಸತಿ ಶಿಬಿರದಲ್ಲಿ ಅವರು ಮಾತನಾಡಿದರು.
ಭಾರತದಲ್ಲಿ ಸತಿಸಹಗಮನ ಪದ್ಧತಿ, ಮಲಹೊರುವ ಪದ್ಧತಿ, ಜೀತ ಪದ್ಧತಿ ಹೀಗೆ ಅನೇಕ ಅನಿಷ್ಠ ಪದ್ಧತಿಗಳು ಜಾರಿಯಲ್ಲಿದ್ದವು. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಜೀತ ಪದ್ಧತಿ ಇನ್ನೂ ನಿರ್ಮೂಲನೆಯಾಗಿಲ್ಲ. ಸಾವಿತ್ರಿಬಾಯಿ ಫುಲೆ, ಜ್ಯೋತಿ ಬಾಪುಲೆ, ರಾಮಾನುಜಾಚಾರ್ಯ ಸೇರಿದಂತೆ ಅನೇಕ ಮಹನೀಯರು ನಿರ್ಮೂಲನೆಗಾಗಿ ಹೋರಾಟ ಮಾಡಿದ್ದಾರೆ ಎಂದರು. ಜೀತ ಪದ್ಧತಿ ಮತ್ತು ಮಲ ಹೊರುವ ಪದ್ಧತಿ ನಿರ್ಮೂಲನೆಗಾಗಿ ಮಾಜಿ ಮುಖ್ಯಮಂತ್ರಿ ದಿ| ಡಿ.ದೇವರಾಜ ಅರಸ್ ಸಾಕಷ್ಟು ಶ್ರಮಿಸಿದ್ದಾರೆ. ಈಗ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ನೀಡುವ ಮೂಲಕ ಜೀತ ವಿಮುಕ್ತ ಜಿಲ್ಲೆಯಾಗಿ ಮಾಡಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಕೆ. ನಂದಿನಿ ದೇವಿ ಮಾತನಾಡಿ, ಕಾನೂನು ಪ್ರಕಾರ ಜೀತ ಪದ್ಧತಿ ಅಪರಾಧವಾಗಿದೆ. ಜೀತದಾಳಾಗಿರುವುದು ಮತ್ತು ಜೀತಕ್ಕಾಗಿ ಜನರನ್ನು ದುಡಿಸಿಕೊಳ್ಳುವವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ ಎಂದು ಎಚ್ಚರಿಸಿದರು.
ಇದನ್ನೂ ಓದಿ :ಅಡಕೆ ಹಾನಿಕರವಲ್ಲ, ಸಾಬೀತಿಗೆ ಬದ್ಧ : ಆರಗ
ಜೀತ ಪದ್ಧತಿಯಿಂದ ಬಿಡುಗಡೆ ಹೊಂದಿರುವವರಿಗೆ ಜೀವನೋಪಾಯಕ್ಕೆ ಜಾಬ್ ಕಾರ್ಡ್, ಮನೆ ಸೇರಿದಂತೆ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ. ಕಾರ್ಮಿಕ ಇಲಾಖೆಯಲ್ಲಿ ಹೆಸರು ನೋಂದಣಿ ಮಾಡಿಕೊಂಡವರಿಗೆ ಕೆಲಸ ಸೇರಿದಂತೆ ಅವರ ಮಕ್ಕಳ ವಿದ್ಯಾಭ್ಯಾಸ, ಮದುವೆ ಖರ್ಚಿಗೆ ಸಾಲ ನೀಡಲಾಗುತ್ತದೆ. ಕೆಲಸದ ವೇಳೆ ಮರಣ ಹೊಂದಿದರೆ 5 ಲಕ್ಷದವರೆಗೂ ಪರಿಹಾರಧನ ನೀಡಲಾಗುತ್ತದೆ. ಜೀತದಾಳುಗಳು ಕಂಡು ಬಂದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಾರ್ವಜನಿಕರು ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಪಂ ಉಪಕಾರ್ಯದರ್ಶಿ ಮಹಮ್ಮದ್ ಮುಬಿನ್, ಮುಖ್ಯ ಯೋಜನಾಧಿಕಾರಿ ಗಾಯತ್ರಿ ಸೇರಿದಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.