ತಮಿಳುನಾಡು : ಆದಾಯ ಮೀರಿ ಆಸ್ತಿ ಗಳಿಕೆ ಕೇಸ್‌ನಲ್ಲಿ ಬರೋಬ್ಬರಿ ನಾಲ್ಕು ವರ್ಷ ಜೈಲು ಶಿಕ್ಷೆ ಅನುಭವಿಸಿ ಇತ್ತೀಚಿಗೆ ಹೊರ ಬಂದ ಎಐಎಡಿಎಂಕೆ ಮಾಜಿ ನಾಯಕಿ ವಿ.ಕೆ. ಶಶಿಕಲಾ ನಟರಾಜನ್ ಅವರು ಇದೀಗ ರಾಜಕೀಯ ಜೀವನಕ್ಕೆ ನಿವೃತ್ತಿಯನ್ನು ಘೋಷಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಚಿನ್ನಮ್ಮ ತಾನು ರಾಜಕೀಯ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದಾರೆ.
ವಿಧಾನಸಭೆ ಚುನಾವಣೆಗೆ ಕೆಲವೇ ವಾರಗಳಷ್ಟೇ ಬಾಕಿ ಇರುವಾಗಲೇ ರಾಜಕೀಯ ನಿವೃತ್ತಿ ಘೋಷಿಸಿರುವುದು ಬಾರಿ ಕುತೂಹಲಕ್ಕೆ ಕಾರಣವಾಗಿದೆ.
ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಅತ್ಯಾಪ್ತ ಗೆಳತಿಯಾಗಿದ್ದ ಶಶಿಕಲಾ ಹೇಳಿದ ಮಾಧ್ಯಮ ಪ್ರಕಟಣೆಯಲ್ಲಿ “ಜಯಲಲಿತಾ ಜೀವಂತವಾಗಿದ್ದಾಗಲೂ ನಾನು ಅಧಿಕಾರದ ಆಸೆಗೆ ಬಿದ್ದಿರಲಿಲ್ಲ. ಅವರ ನಿಧನಾ ನಂತರವೂ ನಾನದನ್ನು ಬಯಸಲ್ಲ. ನಾನು ರಾಜಕೀಯಕ್ಕೆ ವಿದಾಯ ಹೇಳುತ್ತೇನೆ. ಆದರೆ, ಜಯಲಲಿತಾ ಅವರ ಪಕ್ಷವು ಗೆಲ್ಲಲಿ ಎಂದು ಬಯಸುತ್ತೇನೆ. ಎಐಎಡಿಎಂಕೆಯ ಎಲ್ಲ ಬೆಂಬಲಿಗರೂ ಒಟ್ಟಾಗಿ ಕೆಲಸ ಮಾಡಿ, ಡಿಎಂಕೆಯನ್ನು ಸೋಲಿಸಿ ಎಂದು ಮನವಿ ಮಾಡುತ್ತೇನೆ’ ಎಂದು ಶಶಿಕಲಾ ಹೇಳಿದ್ದಾರೆ.
ಇನ್ನು ಕೆಲವೇ ದಿನಗಳಲ್ಲಿ ತಮಿಳುನಾಡು ವಿಧಾನಸಭೆಗೆ ಚುನಾವಣೆ ನಡೆಯಲಿದ್ದು ಎಐಎಡಿಎಂಕೆ ಯ ನಾಯಕತ್ವವನ್ನು ಚಿನ್ನಮ್ಮ ವಹಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು ಆದರೆ ಇಂದಿನ ನಿರ್ಧಾರ ಕುತೂಹಲಕ್ಕೆ ಕಾರಣವಾಗಿದೆ.