ಚೆನ್ನೈ: ಎಐಎಡಿಎಂಕೆಯ ಉಚ್ಚಾಟಿತ ನಾಯಕಿ ವಿ.ಕೆ. ಶಶಿಕಲಾಗೆ ಶೆಲ್ ಕಂಪೆನಿಗಳ ನಂಟು ಇತ್ತೇ ಎಂಬ ಶಂಕೆ ವ್ಯಕ್ತವಾಗಿದೆ. ಐಟಿ ದಾಳಿ ನಡೆದ ಸಂದರ್ಭ ಜಯಾ ಟಿವಿ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ.) ವಿವೇಕ್ ಜಯರಾಮನ್‌ಗೆ ಸೇರಿದ 100 ಬ್ಯಾಂಕ್ ಖಾತೆಗಳನ್ನು ಗುರುತಿಸ ಲಾಗಿದೆ. ಮಾತ್ರವಲ್ಲ ನೋಟು ಅಪಮೌಲ್ಯದ ಬಳಿಕ ಬಹುಕೋಟಿ ರೂ. ಮೊತ್ತವನ್ನು ಅವುಗಳಲ್ಲಿ ಠೇವಣಿಯಾಗಿ ಇರಿಸಿದ್ದರ ಬಗ್ಗೆ ಅನುಮಾನ ಗಳೂ ವ್ಯಕ್ತವಾಗಿವೆ.
ವಿವೇಕ್ ಸದ್ಯ ಬೆಂಗಳೂರಿನ ಪರ ಪ್ಪನ ಅಗ್ರಹಾರದಲ್ಲಿ ಶಿಕ್ಷೆ ಅನುಭವಿ ಸುತ್ತಿರುವ ವಿ.ಕೆ. ಶಶಿಕಲಾರ ಸೋದರ ಸಂಬಂಧಿ. ಆದಾಯ ತೆರಿಗೆ ಅಧಿಕಾರಿಗಳು ಈ ಬ್ಯಾಂಕ್ ಖಾತೆ ಗಳನ್ನು ಜಪ್ತಿ ಮಾಡಿಕೊಂಡಿದ್ದು, ಶುಕ್ರವಾರ ನಡೆದಿದ್ದ ದಾಳಿಯಲ್ಲಿ 6 ಕೋಟಿ ರೂ. ನಗದು, 8.5 ಕೆಜಿ ಚಿನ್ನ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಜತೆಗೆ ಕಾಲೇಜೊಂದರ ಹಾಸ್ಟೆಲ್ ಕಪಾಟಿನಿಂದ ಬಹುಕೋಟಿ ರೂ. ಮೌಲ್ಯದ ವಜ್ರಗಳನ್ನೂ ವಶಪಡಿಸಿಕೊಳ್ಳಲಾಗಿತ್ತು.
ಜಯಾ ಟಿವಿ ಎಂ.ಡಿ. ವಿವೇಕ್ ಜಯರಾಮನ್ 20ಕ್ಕೂ ಅಧಿಕ ಕಂಪೆನಿಗಳ ಹೆಸರಲ್ಲಿ ಬ್ಯಾಂಕ್ ಖಾತೆ ಹೊಂದಿರುವುದು ದಾಖಲೆಗಳ ಪರಿಶೀಲನೆ ವೇಳೆ ಗೊತ್ತಾಗಿದೆ. ನೋಟು ಅಪಮೌಲ್ಯದ ಬಳಿಕ ಕೋಟಿಗಟ್ಟಲೆ ರೂ. ಮೊತ್ತವನ್ನು ಅವುಗಳಲ್ಲಿ ತೊಡಗಿಸಲಾಗಿತ್ತು. ದಾಳಿ ಸಂದರ್ಭ ಖಾತೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅವರ ಸಹೋದರಿ ಕೃಷ್ಣ ಪ್ರಿಯಾ ಮತ್ತು ಆಡಿಟರ್ ನಿವಾಸಕ್ಕೆ ದಾಳಿ ನಡೆಸಿದ ವೇಳೆ ಇನ್ನೂ ಹಲವು ಕಾಗದ ಪತ್ರ ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳನ್ನು ಪರಿಶೀಲಿಸಲಾಗುತ್ತಿದೆ ಎಂದಿದ್ದಾರೆ ಆದಾಯ ತೆರಿಗೆ ಇಲಾಖೆ ಹಿರಿಯ ಅಧಿಕಾರಿಗಳು. ಈ ಖಾತೆಯಲ್ಲಿ ತೊಡಗಿಸಲಾಗಿರುವ ಮೊತ್ತದಿಂದ ಕೋಟಿಗಟ್ಟಲೆ ರೂ. ಮೌಲ್ಯದ ಸ್ಥಿರ ಮತ್ತು ಚರ ಆಸ್ತಿ ಖರೀದಿಗೆ ವಿನಿಯೋಗಿಸಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.
ದಾಳಿ ಮುಕ್ತಾಯ: ಕೊಡನಾಡ್ ಎಸ್ಟೇಟ್, ಇತರ ಸ್ಥಳಗಳಲ್ಲಿ ರವಿ ವಾರವೂ ಶೋಧಕಾರ್ಯ ಮುಂದು ವರಿದಿತ್ತು. ಒಟ್ಟಾರೆ ಬೆಳವಣಿಗೆ ಬಗ್ಗೆ ಚೆನ್ನೈಯಲ್ಲಿ ಪ್ರತಿಕ್ರಿಯೆ ನೀಡಿದ ಆದಾಯ ತೆರಿಗೆ ಅಧಿಕಾರಿಗಳು, ಇಲಾಖೆ ದಾಳಿ ಬಹುತೇಕ ಪೂರ್ಣ ಗೊಂಡಿದೆ ಎಂದು ತಿಳಿಸಿದೆ. ಇನ್ನೇನಿದ್ದರೂ ಹೇಳಿಕೆ ದಾಖಲಿಸುವುದು, ಅದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುವ ಪ್ರಕ್ರಿಯೆ ಮಾತ್ರ ಉಳಿದಿದೆ ಎಂದಿದ್ದಾರೆ.
ವಿ.ಕೆ. ಶಶಿಕಲಾ ಮತ್ತು ಇತರರ
ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ್ದರಲ್ಲಿ ಯಾವ ಸಂಚೂ ಇಲ್ಲ. ಸೂಕ್ತ ಮಾಹಿತಿ ಮತ್ತು ದಾಖಲೆಗಳ ಆಧಾರದಲ್ಲಿಯೇ ಕ್ರಮ ಕೈಗೊಳ್ಳಲಾಗಿದೆ.
-ಪೊನ್ ರಾಧಾಕೃಷ್ಣನ್, ಕೇಂದ್ರ ಹಣಕಾಸು ಖಾತೆ ಸಹಾಯಕ ಸಚಿವ