ಬೆಳಗಾವಿ: ಮುಜರಾಯಿ ಸಚಿವೆ, ನಿಪ್ಪಾಣಿ ಕ್ಷೇತ್ರದ ಶಾಸಕಿ ಶಶಿಕಲಾ ಜೊಲ್ಲೆ ಅವರು 68.58 ಕೋಟಿ ರೂ. ಮೌಲ್ಯದ ಒಡತಿಯಾಗಿದ್ದು, ಕುಟುಂಬದ ಮೇಲೆ 22.41 ಕೋಟಿ ರೂ. ಸಾಲವಿದೆ.
11.6 ಕೋಟಿ ಮೌಲ್ಯದ ಚರಾಸ್ತಿ ಹಾಗೂ 56.98 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಸೇರಿ ಒಟ್ಟು 68.58 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಶಶಿಕಲಾ ಒಬ್ಬರಿಗೆ 1.03 ಕೋಟಿ ರೂ. ವಾರ್ಷಿಕ ಆದಾಯವಿದೆ.
ಶಶಿಕಲಾ ಹೆಸರಲ್ಲಿ 3.9 ಕೋಟಿ ಹಾಗೂ ಅವರ ಪತಿ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೆಸರಲ್ಲಿ 5.73 ಕೋಟಿ ರೂ., ಪುತ್ರರ ಹೆಸರಲ್ಲಿ 1.17 ಕೋಟಿ ರೂ. ಹಾಗೂ ಇತರರ ಹೆಸರಲ್ಲಿ 26 ಲಕ್ಷ ರೂ. ಮೌಲ್ಯದ ಚರಾಸ್ತಿಗಳು ಇವೆ.
ಶಶಿಕಲಾ ಜೊಲ್ಲೆ ಹೆಸರಲ್ಲಿ 24.13 ಕೋಟಿ ರೂ. ಸ್ಥಿರಾಸ್ತಿ, ಪತಿ ಅಣ್ಣಾಸಾಹೇಬ ಹೆಸರಲ್ಲಿ 15.04 ಕೋಟಿ ರೂ., ಪುತ್ರನ ಹೆಸರಲ್ಲಿ 17.81 ಕೋಟಿ ರೂ. ಸೇರಿ ಒಟ್ಟು 56.98 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯನ್ನು ಜೊಲ್ಲೆ ಕುಟುಂಬ ಹೊಂದಿದೆ. 42.81 ಲಕ್ಷ ರೂ. ಹಣ ಅವರ ಬ್ಯಾಂಕ್ ಖಾತೆಯಲ್ಲಿದೆ.
ಶಶಿಕಲಾ ಅವರ ಬಳಿ 73 ಲಕ್ಷ ರೂ, ಬೆಲೆಬಾಳುವ ಎರಡು ಕಾರು, ಅಣ್ಣಾಸಾಹೇಬ ಜೊಲ್ಲೆ ಅವರ ಬಳಿ 67.68 ಲಕ್ಷ ರೂ. ಬೆಲೆಬಾಳುವ ಫೋರ್ಡ್ ಸೇರಿ ವಿವಿಧ ಕಾರುಗಳಿವೆ. ಜೊಲ್ಲೆ ಕುಟುಂಬದ ಖಾತೆಯಲ್ಲಿ 2.19 ಕೋಟಿ ರೂ. ಹಣವಿದೆ. 1.87 ಕೋಟಿ ರೂ. ಮೌಲ್ಯದ ವಿವಿಧ ಷೇರು ಹಾಗೂ ಬಾಂಡ್‌ಗಳನ್ನು ಅವರು ಖರೀದಿಸಿದ್ದು, ಕುಟುಂಬದಲ್ಲಿ 5.9 ಕೋಟಿ ರೂ. ಮೌಲ್ಯದ ಆಸ್ತಿ ಇದೆ. ಉಳಿತಾಯ ಹಾಗೂ ವಿಮೆಗಳ ಮೊತ್ತ ಸುಮಾರು 76.95 ಲಕ್ಷ ರೂ. ಶಶಿಕಲಾ ಅವರೇ ವಿವಿಧ ಬ್ಯಾಂಕುಗಳಿಂದ 80 ಲಕ್ಷ ರೂ. ವೈಯಕ್ತಿಕ ಸಾಲ ಹಾಗೂ 9.05 ಕೋಟಿ ರೂ. ವಿವಿಧ ಸಾಲ ಪಡೆದಿದ್ದಾರೆ. ಕುಟುಂಬದ ಮೇಲೆ 22.41 ಕೋಟಿ ರೂ. ಸಾಲವಿದೆ.
1.45 ಕೋಟಿ ರೂ. ಮೌಲ್ಯದ ಚಿನ್ನಾಭರಣ
ಶಶಿಕಲಾ ಜೊಲ್ಲೆ ಅವರು 73 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹೊಂದಿದ್ದಾರೆ. ಕುಟುಂಬದಲ್ಲಿ 1.45 ಕೋಟಿಯ ಚಿನ್ನ ಹಾಗೂ ಬೆಳ್ಳಿ ಆಭರಣಗಳಿವೆ. ವಿವಿಧ ಗ್ರಾಮಗಳಲ್ಲಿ 3.9 ಕೋಟಿ ರೂ. ಮೌಲ್ಯದ ಕೃಷಿ ಜಮೀನು ಶಶಿಕಲಾ ಹೊಂದಿದ್ದು, 11.76 ಕೋಟಿಯ ಜಮೀನು ಕುಟುಂಬಕ್ಕಿದೆ. 15.20 ಕೋಟಿಯ ವಾಣಿಜ್ಯ ಭೂಮಿಯನ್ನು ಶಶಿಕಲಾ ಹೊಂದಿದ್ದಾರೆ. 21.85 ಕೋಟಿ ಮೌಲ್ಯದ ವಾಣಿಜ್ಯ ಭೂಮಿ ಕುಟುಂಬಕ್ಕಿದೆ.
ಜಾನುವಾರುಗಳೂ ಆಸ್ತಿ
ಶಶಿಕಲಾ ಜೊಲ್ಲೆ ನೀಡಿದ ಆಸ್ತಿ ವಿವರದಲ್ಲಿ ಆಕಳು, ಎಮ್ಮೆ, ನಾಯಿಗಳೂ ಸೇರಿವೆ. ತಮ್ಮ ಬಳಿ 4.50 ಲಕ್ಷ ರೂ. ಮೌಲ್ಯದ 10 ಹೈಬ್ರಿಡ್ ಹಸುಗಳು, 5.80 ಲಕ್ಷ ರೂ. ಮೌಲ್ಯದ 17 ದೇಸಿ ಹಸುಗಳು, 3.60 ಲಕ್ಷ ರೂ. ಬೆಲೆಬಾಳುವ 6 ಎಮ್ಮೆ, 2.50 ಲಕ್ಷ ರೂ. ಮೌಲ್ಯದ ಒಂದು ಕುದುರೆ ಹಾಗೂ 68 ಸಾವಿ ರೂ. ಮೌಲ್ಯದ 4 ನಾಯಿಗಳು ಇವೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಘೋಷಿಸಿಕೊಂಡಿದ್ದಾರೆ.