ತಿರುವನಂತಪುರಂ: ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲು ಮಸೂದೆ ಜಾರಿಗೆ ಮಾಡಲು ಮುಂದಾದ ಕರ್ನಾಟಕದ ಕಾಂಗ್ರೆಸ್ ಸರಕಾರದ ನಿರ್ಧಾರ ಅಸಂವಿಧಾನಿಕ ಮತ್ತು ಅವಿವೇಕ ಎಂದು ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಟೀಕಾ ಪ್ರಹಾರ ನಡೆಸಿದ್ದಾರೆ.
ಸುದ್ದಿಗಾರರರೊಂದಿಗೆ ಮಾತನಾಡಿದ ಸಂಸದ ಮತ್ತು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ತರೂರ್ ‘ ‘ಇದು ಬುದ್ಧಿವಂತ ನಿರ್ಧಾರವಲ್ಲ. ಪ್ರತಿ ರಾಜ್ಯವೂ ಇಂತಹ ಕಾನೂನು ತಂದರೆ ಅದು ಸಂವಿಧಾನ ಬಾಹಿರವಾಗುತ್ತದೆ. ಸಂವಿಧಾನದ ಪ್ರಕಾರ, ಪ್ರತಿಯೊಬ್ಬ ನಾಗರಿಕನಿಗೆ ಭಾರತದ ಯಾವುದೇ ಭಾಗದಲ್ಲಿ ಮುಕ್ತವಾಗಿ ವಾಸಿಸುವ, ಕೆಲಸ ಮಾಡುವ ಮತ್ತು ಪ್ರಯಾಣಿಸುವ ಹಕ್ಕಿದೆ, ”ಎಂದರು.
“ಕರ್ನಾಟಕ ಸರಕಾರವು ಇದರ ಬಗ್ಗೆ ಏಕೆ ಯೋಚಿಸಿದೆ, ಯಾವ ಆಧಾರದ ಮೇಲೆ ನನಗೆ ತಿಳಿದಿಲ್ಲ. ಇಂತಹ ಕಾನೂನು ಜಾರಿಗೆ ಬಂದರೆ ರಾಜ್ಯದ ವ್ಯವಹಾರಗಳನ್ನು ತಮಿಳುನಾಡು ಮತ್ತು ಕೇರಳದಂತಹ ನೆರೆಯ ರಾಜ್ಯಗಳಿಗೆ ಸ್ಥಳಾಂತರಿಸಲಾಗುತ್ತದೆ’ ಎಂದು ಹೇಳಿದರು.
‘ಹರಿಯಾಣದ ಸರ್ಕಾರವೊಂದು ಇದೇ ವಿಧೇಯಕವನ್ನು ಮಂಡಿಸಲು ಯತ್ನಿಸಿದಾಗ ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು ಎಂದರು ಮಾತ್ರವಲ್ಲದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಮಸೂದೆ ತಡೆಹಿಡಿಯುವ ನಿರ್ಧಾರ ಕೈಗೊಂಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.
ಉದ್ಯಮ ವಲಯದ ಹಲವರ ವಿರೋಧದ ಬಳಿಕ ಇಕ್ಕಟ್ಟಿಗೆ ಸಿಲುಕಿದ ರಾಜ್ಯ ಸರಕಾರ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲು ಮಸೂದೆ ಜಾರಿಗೆ ತಾತ್ಕಾಲಿಕ ತಡೆ ನೀಡಿದೆ.