ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಚುನಾವಣಾ ಕಣದಿಂದ ಹಿಂದೆ ಸರಿಯಲಿದ್ದಾರೆ ಎಂಬ ಊಹಾಪೋಹವನ್ನು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಶಶಿ ತರೂರ್ ಶನಿವಾರ (ಅಕ್ಟೋಬರ್ 08) ತಳ್ಳಿಹಾಕಿದ್ದು, ಚುನಾವಣಾ ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:ಹಿರಿಯ ಬಿಜೆಪಿಗರ ಪಾದ ತೊಳೆದ ಅಸ್ಸಾಂ ಸಿಎಂ; ವಿಡಿಯೋ ವೈರಲ್
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಶಶಿ ತರೂರ್ ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಇದೊಂದು ಪಕ್ಷದೊಳಗಿನ ಸ್ನೇಹಪೂರ್ವಕ ಸ್ಪರ್ಧೆಯಾಗಿದೆ. ಈ ಸವಾಲಿನಿಂದ ಹಿಂದೆ ಸರಿಯುವುದಿಲ್ಲ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಸಿದ್ದು, ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಜಿ.23 ನಾಯಕರ ಗುಂಪಿನಲ್ಲಿ ಗುರುತಿಸಿಕೊಂಡಿರುವ ಶಶಿ ತರೂರ್ ಖರ್ಗೆಗೆ ಪ್ರತಿಸ್ಪರ್ಧಿಯಾಗಿದ್ದಾರೆ.
ದೆಹಲಿಯಲ್ಲಿ ಕೆಲವೊಂದು ಊಹಾಪೋಹ ಹರಿದಾಡುತ್ತಿದ್ದು, ನಾನು ಇಂದು (ಅ.08) ನಾಮಪತ್ರ ಹಿಂಪಡೆಯಲಿದ್ದೇನೆ ಎಂದು ಪ್ರಚಾರ ಮಾಡಲಾಗುತ್ತಿದೆ. ಆದರೆ ನಾನು ನಿಮಗೆ ಭರವಸೆ ಕೊಡುತ್ತಿದ್ದೇನೆ, ನಾನು ಸ್ಪರ್ಧೆಯಿಂದ ಹಿಂದೆ ಸರಿಯಲಾರೆ. ನನ್ನ ಇಡೀ ಜೀವಮಾನದಲ್ಲಿ ಸವಾಲಿನಿಂದ ಹಿಂದೆ ಸರಿದಿದ್ದೇ ಇಲ್ಲ ಎಂದು ತರೂರ್ ಟ್ವೀಟ್ ಮಾಡಿರುವ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
ಅಕ್ಟೋಬರ್ 17ರಂದು ಅಧ್ಯಕ್ಷ ಸ್ಥಾನದ ಚುನಾವಣೆ ನಡೆಯಲಿದೆ. ಅಕ್ಟೋಬರ್ 19ರಂದು ಮತ ಎಣಿಕೆ ನಡೆಯಲಿದ್ದು, ಅಂದು ಸಂಜೆ ವೇಳೆಗೆ ಫಲಿತಾಂಶ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.