ಶಶಾಂಕ್ ನಿರ್ದೇಶನದ “ಲವ್ 360′ ಸಿನಿಮಾದ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಇದೇ ಆಗಸ್ಟ್ 19ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ. ಸದ್ಯ “ಲವ್ 360′ ಸಿನಿಮಾವನ್ನು ಪ್ರೇಕ್ಷಕರಿಗೆ ತಲುಪಿಸುವ ಕೆಲಸದಲ್ಲಿ ನಿರತವಾಗಿರುವ ಚಿತ್ರತಂಡ, ಭರ್ಜರಿಯಾಗಿ ಸಿನಿಮಾದ ಪ್ರಚಾರ ಕಾರ್ಯದಲ್ಲಿ ನಿರತವಾಗಿದೆ.
ಈಗಾಗಲೇ “ಲವ್ 360′ ಸಿನಿಮಾದ ಫಸ್ಟ್‌ಲುಕ್, ಟ್ರೇಲರ್ ಮತ್ತು ಮೂರು ಹಾಡುಗಳು ಬಿಡುಗಡೆಯಾಗಿದ್ದು, ಎಲ್ಲದಕ್ಕೂ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಸಿಗುತ್ತಿದೆ. ಇದೇ ಖುಷಿಯಲ್ಲಿರುವ ಚಿತ್ರತಂಡ, ಈಗ ಕಾಲೇಜ್ ಕ್ಯಾಂಪಸ್‌ಗಳಲ್ಲಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ್ದು, ಯುವ ಪ್ರೇಕ್ಷಕರನ್ನು ಸೆಳೆಯಲು ಮುಂದಾಗಿದೆ.
ಇದಕ್ಕಾಗಿ ವಿಶೇಷವಾದ ಟ್ಯಾಬ್ಲೋ ವಾಹನವನ್ನು ಸಿದ್ಧಪಡಿಸಿರುವ ಚಿತ್ರತಂಡ, ರಾಜ್ಯದಾದ್ಯಂತ ಭರ್ಜರಿಯಾಗಿ ಪ್ರಚಾರ ಪ್ರವಾಸ ಮಾಡುತ್ತಿದೆ. ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಇರುವ ಪ್ರಮುಖ ಕಾಲೇಜ್‌ಗಳ ಕ್ಯಾಂಪಸ್‌ಗೆ ನಾಯಕ ಪ್ರವೀಣ್, ನಾಯಕಿ ರಚನಾ ಇಂದರ್, ನಿರ್ದೇಶಕ ಶಶಾಂಕ್ ಸೇರಿದಂತೆ ಚಿತ್ರದ ಪ್ರಮುಖ ಕಲಾವಿದರು ಮತ್ತು ತಂತ್ರಜ್ಞರ ಜೊತೆಗೆ ಚಿತ್ರತಂಡ ಭೇಟಿ ನೀಡುತ್ತಿದೆ.
ಇದನ್ನೂ ಓದಿ:ಜು.31ಕ್ಕೆ ಬರುತ್ತಿದೆ ಯೋಗರಾಜ್ ಭಟ್ರ ‘ಗಾಳಿಪಟ 2’ ಟ್ರೇಲರ್
ಈ ಬಗ್ಗೆ ಮಾತನಾಡುವ ನಿರ್ದೇಶಕ ಶಶಾಂಕ್, “ಇದೊಂದು ಲವ್ ಕಂ ಕ್ರೈಂ-ಥ್ರಿಲ್ಲರ್ ಸಬ್ಜೆಕ್ಟ್ ಸಿನಿಮಾ. ಹಾಗಂತ ಇದು ಹತ್ತರ ಜೊತೆ ಹನ್ನೊಂದು ಎನ್ನುವಂಥ ಸಿನಿಮಾವಂತೂ ಖಂಡಿತ ಅಲ್ಲ. ಒಂದು ಲವ್‌ಸ್ಟೋರಿಯನ್ನು ಬೇರೆಯದ್ದೇ ರೀತಿಯಲ್ಲಿ ಸಿನಿಮಾದಲ್ಲಿ ಹೇಳಿದ್ದೇವೆ. ಹಾಗಾಗಿ ಯೂಥ್ ಆಡಿಯನ್ಸ್ ಜೊತೆ ಕಾಲೇಜ್ ಕ್ಯಾಂಪಸ್ ಮೂಲಕ ಔಟ್ ಡೋರ್ ಪಬ್ಲಿಸಿಟಿ ಪ್ರಾರಂಭಿಸಿದ್ದೇವೆ. ಸದ್ಯ “ಲವ್ 360′ ಸಿನಿಮಾದ ಪ್ರಚಾರದ ವೇಳೆ ಆಡಿಯನ್ಸ್ ಕಡೆಯಿಂದ ನಿರೀಕ್ಷೆಗೂ ಮೀರಿದ ರೆಸ್ಪಾನ್ಸ್ ಸಿಗುತ್ತಿದೆ. ಈಗಾಗಲೇ ಟ್ರೇಲರ್, ಸಾಂಗ್ಸ್ ಎಲ್ಲವೂ ಹಿಟ್ ಆಗಿದೆ. ಅದರಲ್ಲೂ ಸಿನಿಮಾದಲ್ಲಿ ಸಿದ್ಧ್ ಶ್ರೀರಾಮ್ ಹಾಡಿರುವ “ಜಗವೇ ನೀನು ಗೆಳತಿಯೇ… ನನ್ನ ಜೀವನದ ಒಡತಿಯೇ…’ ಹಾಡಂತೂ ಲವ್ ಆ್ಯಂಥಮ್ ಸಾಂಗ್ ಆಗಿದೆ. ಹರೆಯದವರಿಂದ, ವೃದ್ಧರವರೆಗೆ ಎಲ್ಲ ಜೋಡಿಗಳು ಈ ಹಾಡನ್ನು ತಮಗೆ ಕನೆಕ್ಟ್ ಮಾಡಿಕೊಳ್ಳುತ್ತಿದ್ದಾರೆ. ಇನ್ಸಸ್ಟಾಗ್ರಾಮ್‌ನಲ್ಲಿ ಈ ಹಾಡಿಗೆ ಲಕ್ಷಾಂತರ ರೀಲ್ಸ್‌ಗಳು ಅಪ್ಲೋಡ್ ಆಗಿವೆ. ಅರ್ಜುನ್ ಜನ್ಯ ಸಂಗೀತ ಮ್ಯೂಸಿಕ್, ಸಿದ್ಧ್ ಶ್ರೀರಾಮ್ ವಾಯ್ಸ ಮ್ಯಾಜಿಕ್ ಹಾಡಿನಲ್ಲಿದೆ. ಕನ್ನಡದಲ್ಲಿ ಇತ್ತೀಚಿನ ದಿನಗಳಲ್ಲಿ ಹಾಡೊಂದು ಇಷ್ಟೊಂದು ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿರುವುದು ನೋಡಿದರೆ ಖುಷಿಯಾಗುತ್ತದೆ’ ಎನ್ನುತ್ತಾರೆ.
ಜಿ. ಎಸ್. ಕಾರ್ತಿಕ ಸುಧನ್