ಚಿತ್ರರಂಗಕ್ಕೆ ಹೊಸ ಹೊಸ ಹೀರೋಗಳು ಬರುತ್ತಲೇ ಇದ್ದಾರೆ. ಕೆಲವರಿಗೆ ಕುಟುಂಬದ ಬೆಂಬಲವಿದ್ದರೆ, ಇನ್ನು ಕೆಲವರಿಗೆ ಚಿತ್ರರಂಗದ ಮಂದಿಯ ಬೆಂಬಲವಿರುತ್ತದೆ. ಈಗ ಶಶಾಂಕ್ ಎಂಬ ಹೊಸ ಪ್ರತಿಭೆ ಹೀರೋ ಆಗಿ ಎಂಟ್ರಿಕೊಟ್ಟಿದ್ದಾರೆ. ಇವರ ಅದೃಷ್ಟವೆಂದರೆ ಇವರಿಗೆ ಕುಟುಂಬ ಹಾಗೂ ಚಿತ್ರರಂಗದ ಎರಡೂ ಕಡೆಯ ಬೆಂಬಲವಿದೆ. ಏಕೆಂದರೆ ಇವರ ಕುಟುಂಬಕ್ಕೆ ಸಿನಿಮಾ ಹಿನ್ನೆಲೆ ಇದೆ. ಈಗಾಗಲೇ ತೆರೆಕಂಡಿರುವ “ಮೆಲೋಡಿ’ ಹಾಗೂ “ಪ್ರೀತಿ ಕಿತಾಬು’ ಚಿತ್ರವನ್ನು ಶಶಾಂಕ್ ಅವರ ತಂದೆ ಹಾಗೂ ಅಣ್ಣ ಸೇರಿಕೊಂಡು ನಿರ್ಮಿಸಿದ್ದರು. ಆ ಸಮಯದಿಂದಲೇ ಶಶಾಂಕ್‌ಗೆ
ಸಿನಿಮಾ ಆಸಕ್ತಿ ಹುಟ್ಟಿತಂತೆ. “ಆದಿ ಪುರಾಣ’ ಸಿನಿಮಾ ಮಾಡುವಾಗ ಯಾರನ್ನು ಹೀರೋ ಮಾಡುವುದೆಂದು ಶಶಾಂಕ್ ತಂದೆ ಹಾಗೂ ಅಣ್ಣ ಶಮಂತ್ ಆಲೋಚಿಸುತ್ತಿದ್ದಾಗ ನಿರ್ದೇಶಕ ಮೋಹನ್ ಕಾಮಾಕ್ಷಿ, ನಿಮ್ಮ ಮನೆಯಲ್ಲೇ ಹೀರೋ ಇದ್ದಾನೆ ಎನ್ನುವ ಮೂಲಕ ಶಶಾಂಕ್ ಹೀರೋ ಆಗಿದ್ದಾರೆ.
ಶಶಾಂಕ್ ಸಿನಿಮಾಕ್ಕೆ ಬರುವ ಮುನ್ನ ರಂಗಭೂಮಿ ಹಾಗೂ ಇತರ ಸಂಸ್ಥೆಯಲ್ಲಿ ನಟನಾ ತರಬೇತಿ ಪಡೆದಿದ್ದಾರೆ. ಹಾಗಾಗಿ, ಚಿತ್ರೀಕರಣ ಹೆಚ್ಚು ಕಷ್ಟವಾಗಲಿಲ್ಲವಂತೆ. ಹೊಸ ಹೀರೋನಾ ಲಾಂಚ್‌ಗೆ ಏನೆಲ್ಲಾ ಅಂಶಗಳಿರಬೇಕೋ ಆ ಅಂಶಗಳೊಂದಿಗೆ “ಆದಿ ಪುರಾಣ’ ಮೂಡಿಬಂದಿದೆಯಂತೆ. “ಮೊದಲೇ ರಿಹರ್ಸಲ್ ಮಾಡಿದ್ದರಿಂದ ಡೈಲಾಗ್ ಸೇರಿದಂತೆ ನಟನೆ ಕಷ್ಟವಾಗಲಿಲ್ಲ. ಆದರೆ, ಚಿತ್ರದಲ್ಲಿ ನನಗೆ ಕಷ್ಟವಾಗಿದ್ದು ರೊಮ್ಯಾಂಟಿಕ್ ದೃಶ್ಯಗಳು’ ಎನ್ನುತ್ತಾ ನಗುತ್ತಾರೆ ಶಶಾಂಕ್. ಅಂದಹಾಗೆ, ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್‌ಗೆ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಶಶಾಂಕ್ ಖುಷಿಯಾಗಿದ್ದಾರೆ. ಈ ವರ್ಷಕ್ಕೆ ಇಂಜಿನಿಯರಿಂಗ್ ಪದವಿ ಪೂರೈಸಲಿರುವ ಶಶಾಂಕ್‌ಗೆ ಮುಂದೆ ಚಿತ್ರರಂಗದಲ್ಲಿ ತೊಡಗಿಸಿಕೊಳ್ಳುವ ಆಸೆ ಇದೆ. ಆ ನಿಟ್ಟಿನಲ್ಲಿ “ಆದಿಪುರಾಣ’ ಚಿತ್ರ ಒಂದು ಒಳ್ಳೆಯ ವೇದಿಕೆಯಾಗುತ್ತದೆ ಎಂಬ ನಂಬಿಕೆ ಅವರಿಗಿದೆ.
ರವಿ ರೈ