ಇಂಫಾಲ : ಮಾನವ ಹಕ್ಕುಗಳ ಕಾರ್ಯಕರ್ತೆ ಇರೋಮ್ ಶರ್ಮೀಳಾ ಅವರು ಮುಂದಿನ ತಿಂಗಳಲ್ಲಿ ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮಣಿಪುರ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಉಕ್ರಮ್ ಇಬೋಬಿ ಸಿಂಗ್ ಅವರ ವಿರುದ್ಧ ತೌಬಾಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಶರ್ಮೀಳಾ ಅವರು ತೌಬಾಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಆಕೆಯ “ಪೀಪಲ್ಸ್ ರಿಸರ್ಜೆನ್ಸ್ ಆ್ಯಂಡ್ ಜಸ್ಟಿಸ್ ಅಲಾಯನ್ಸ್ (ಪಿಆರ್‌ಜೆಎ) ಪಕ್ಷದ ಸಂಚಾಲಕ ಎರೆಂಡ್ರೋ ಲಿಕೋನ್‌ಬಾಮ್ ತಿಳಿಸಿದ್ದಾರೆ.
ಸಶಸ್ತ್ರ ಪಡೆಗಳ ವಿಶೇಷಾಧಿಕಾರದ ವಿರುದ್ಧ ಹೋರಾಟಕ್ಕೆ ಹೆಸರುವಾಸಿಯಾಗಿದ್ದ ಮಾನವ ಹಕ್ಕುಗಳ ಕಾರ್ಯಕರ್ತೆ ಶರ್ಮೀಳಾ ಅವರು, ಕಾಂಗ್ರೆಸ್ ಮುಖ್ಯಮಂತ್ರಿ ಇಬೋಬಿ ಸಿಂಗ್ ಅವರ ನಿರಂತರ ಮೂರು ಅಧಿಕಾರಾವಧಿಯಲ್ಲಿ ರಾಜಕೀಯ ಶಕ್ತಿಯಾಗಿ ಮೇಲೆದ್ದು ಬಂದಿದ್ದಾರೆ.
ಮಣಿಪುರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಕಳೆದ ಫೆ.3ರಂದು 60 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು ಮುಖ್ಯಮಂತ್ರಿ ಉಕ್ರಮ್ ಇಬೋಬಿ ಸಿಂಗ್ ಅವರು ತೌಬಾಲ್ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳಿದೆ.
ಕಳೆದ ವರ್ಷ ಆಗಸ್ಟ್‌ನಲ್ಲಿ 44ರ ಹರೆಯದ ಉಕ್ಕಿನ ಮಹಿಳೆ ಇರೋಮ್ ಶರ್ಮೀಳಾ ತನ್ನ 16 ವರ್ಷಗಳ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದರು. ಆಕೆಯ ಈ ನಿರಶನ ಆಂದೋಲನವು ವಿಶ್ವದಲ್ಲೇ ಅತೀ ದೀರ್ಘಾವಧಿಯದ್ದಾಗಿದ್ದು ರಾಜ್ಯದಲ್ಲಿ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯಿದೆಯನ್ನು ತೆಗೆದುಹಾಕಲು ತಾನು ಮುಖ್ಯಮಂತ್ರಿಯಾಗಲು ಬಯಸಿರುವುದಾಗಿ ಆಕೆ ಹೇಳಿಕೊಂಡಿದ್ದರು.
ಕಳೆದ ವರ್ಷ ಶರ್ಮೀಳಾ ತಮ್ಮ ಪಿಆರ್‌ಜೆಎ ಪಕ್ಷವನ್ನು ಸ್ಥಾಪಿಸಿದಾಗ ತಾನು ತೌಬಾಲ್ ಹಾಗೂ ಖುರಾಯಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳಿದ್ದರು. ಖುರಾಯಿ ಶರ್ಮೀಳಾಗೆ ಹುಟ್ಟೂರ ಕ್ಷೇತ್ರವಾದರೆ, ತೌಬಾಲ್ ಮುಖ್ಯಮಂತ್ರಿ ಸ್ಪರ್ಧಿಸುವ ಕ್ಷೇತ್ರವಾಗಿದೆ.