Advertisement

ನಾಡು-ನುಡಿಗೆ ತಿ.ತಾ. ಶರ್ಮ ಕೊಡುಗೆ ಅಪಾರ

03:32 PM Apr 18, 2022 | Team Udayavani |

ಚಿತ್ರದುರ್ಗ: ಕರ್ನಾಟಕದಲ್ಲಿ ಪ್ರತಿಮೆ, ವಿಗ್ರಹ, ಆಧಾರಗಳ ವಿನಾಶವಾಗುತ್ತಿದೆ. ಅಂತಹ ಆಧಾರಗಳನ್ನು ಸಂರಕ್ಷಿಸಬೇಕು. ಕರ್ನಾಟಕವನ್ನು ವಿರೂಪಗೊಳಿಸುವುದು ನಿಲ್ಲಬೇಕು. ಇತಿಹಾಸಕ್ಕೆ ಬೇರೆ ಭಾಷೆ ವಿದ್ವಾಂಸರು ನೀಡಿರುವ ಕೊಡುಗೆಯನ್ನು ಸ್ಮರಿಸಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಇತಿಹಾಸ ಪ್ರಾಧ್ಯಾಪಕ ಡಾ| ಎಂ.ವಿ. ಶ್ರೀನಿವಾಸ್‌ ಹೇಳಿದರು.

Advertisement

ಚಿತ್ರದುರ್ಗ ಇತಿಹಾಸ ಕೂಟ, ಇತಿಹಾಸ-ಸಂಸ್ಕೃತಿ-ಸಂಶೋಧನೆಗಳ ವಿಚಾರ ವೇದಿಕೆ ಹಾಗೂ ರೇಣುಕಾ ಪ್ರಕಾಶನ ಸಹಯೋಗದಲ್ಲಿ ಭಾನುವಾರ ನಗರದ ಐಎಂಎ ಸಭಾಂಗಣದಲ್ಲಿ ನಡೆದ ‘ಕರ್ನಾಟಕ ಇತಿಹಾಸ: ತಿ.ತಾ. ಶರ್ಮ ಅವರ ವಿಚಾರಗಳು’ ವಿಷಯ ಕುರಿತ 42ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಂಸ್ಕೃತಿಕ ಲೋಕದಲ್ಲಿ ಉನ್ನತ ಸ್ಥಾನದಲ್ಲಿದ್ದ ತಿರುಮಲೆ ತಾತಾಚಾರ್ಯ ಶರ್ಮ ಅವರು ಕನ್ನಡ ನಾಡು, ನುಡಿಗೆ ಅಮೂಲ್ಯ ಸೇವೆ ಸಲ್ಲಿಸಿ ಅಮರರಾಗಿದ್ದಾರೆ. ಇತಿಹಾಸಕಾರ, ಶಾಸನ ತಜ್ಞ, ಪತ್ರಿಕೋದ್ಯಮಿ, ಸ್ವಾತಂತ್ರ್ಯ ಹೋರಾಟಗಾರ, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾಗಿದ್ದ ತಿ.ತಾ. ಶರ್ಮ ಅವರ ವಿಚಾರ ಇಂದಿನ ಪೀಳಿಗೆಗೆ ಗೊತ್ತಿಲ್ಲ. ಕರ್ನಾಟಕಕ್ಕೆ ಅವರು ನೀಡಿರುವ ಕೊಡುಗೆ ಅಪೂರ್ವವಾದುದು ಎಂದರು.

ವೈಚಾರಿಕ, ವೈಜ್ಞಾನಿಕ, ವಿಶ್ಲೇಷಾತ್ಮಕ ಅಧ್ಯಯನ ಮಾಡಬೇಕೆಂಬ ನಿಲುವು ತಿ.ತಾ. ಶರ್ಮಾ ಅವರದ್ದಾಗಿತ್ತು. ಇತಿಹಾಸವೇ ವೈಚಾರಿಕವಾದುದು. ಹಾಗಾಗಿ ಅವರಲ್ಲಿದ್ದ ಸಂಶೋಧನೆ, ವೇದನೆ, ಅಭಿಪ್ರಾಯಗಳನ್ನು ಕೊಡುತ್ತಾರೆ. ಸಾರ್ವಕಾಲಿಕ ಸತ್ಯಗಳನ್ನು ಅರವತ್ತು ವರ್ಷಗಳ ಹಿಂದೆಯೇ ಅವರು ಹೇಳಿದ್ದರು ಎಂದು ಸ್ಮರಿಸಿದರು.

ಚಿತ್ರದುರ್ಗ ಇತಿಹಾಸ ಕೂಟದ ನಿರ್ದೇಶಕ ಡಾ| ಲಕ್ಷ್ಮಣ ತೆಲಗಾವಿ ಮಾತನಾಡಿ, ಕೋವಿಡ್‌ ಮಹಾಮಾರಿಯಿಂದ ಕಳೆದೆರಡು ವರ್ಷಗಳಿಂದ ಚಿತ್ರದುರ್ಗ ಇತಿಹಾಸ ಕೂಟದ ಮಾಸಿಕ ಉಪನ್ಯಾಸ ಮಾಲೆ ಸಂಪೂರ್ಣವಾಗಿ ನಿಲ್ಲಿಸಲಾಗಿತ್ತು. ಈಗ ಮತ್ತೆ ಪ್ರತಿ ತಿಂಗಳು ಉಪನ್ಯಾಸ ಕಾರ್ಯಕ್ರಮಗಳು ಯಾವುದೇ ಅಡೆತಡೆಯಿಲ್ಲದೆ ನಿರಂತರವಾಗಿ ನಡೆಯುತ್ತವೆ. ಇಲ್ಲಿಯವರೆಗೂ ನಡೆದ ಉಪನ್ಯಾಸಗಳನ್ನೆಲ್ಲಾ ಸಂಗ್ರಹಿಸಿ ಸಂಕಲನ ಹೊರತರುವ ಪ್ರಯತ್ನ ಮಾಡುತ್ತಿದ್ದೇವೆ. ಇದಕ್ಕೆ ಚಿತ್ರದುರ್ಗ ಇತಿಹಾಸ ಕೂಟದ ಎಲ್ಲಾ ಸದಸ್ಯರ ಹಾಗೂ ಅಭಿಮಾನಿಗಳ ಸಹಕಾರವಿದೆ ಎಂದು ತಿಳಿಸಿದರು.

Advertisement

ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿದ ಅನೇಕ ವಿದ್ವಾಂಸರು ಇಲ್ಲಿಯವರೆಗೂ ಉಪನ್ಯಾಸಗಳನ್ನು ನೀಡಿದ್ದಾರೆ. ಇಷ್ಟೇ ಅಲ್ಲದೆ ಸ್ಥಳೀಯ ಚಾರಿಣಿ, ಸಾಹಸಿಗರು, ಚಿತ್ರಕಲಾವಿದರಿಗೂ ಉಪನ್ಯಾಸ ನೀಡುವ ಅವಕಾಶ ಒದಗಿಸಲಾಗುವುದು. ಇತ್ತೀಚೆಗೆ ಸಂಶೋಧನಾ ಕ್ಷೇತ್ರ ಬರಡಾಗುತ್ತಿದೆ. ಬರೆದಿದ್ದನ್ನು ಓದುವವರಿಲ್ಲ. ಪ್ರೋತ್ಸಾಹವಿಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇತಿಹಾಸ ಕೂಟದ ಸಂಚಾಲಕ ಡಾ| ಎನ್.ಎಸ್. ಮಹಂತೇಶ್‌ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಡಾ| ತಿಪ್ಪೇಸ್ವಾಮಿ, ಪ್ರೊ| ಎಚ್‌. ಲಿಂಗಪ್ಪ, ಪ್ರೊ| ಜಿ.ಎನ್. ಮಲ್ಲಿಕಾರ್ಜುನಪ್ಪ, ಜಿ.ಎಸ್. ಉಜ್ಜಿನಪ್ಪ, ಆರ್.ಎನ್.ಬೋರಯ್ಯ, ಡಿ. ಗೋಪಾಲಸ್ವಾಮಿ ನಾಯಕ, ಡಾ| ಎಸ್‌.ಕೆ. ಯೋಗಾನಂದ ಮತ್ತಿತರರು ಹಾಜರಿದ್ದರು.

ವಿಮರ್ಶಗೆ ಒತ್ತು ಕೊಟ್ಟಿದ್ದ ತಿ.ತಾ. ಶರ್ಮ ಚರಿತ್ರೆಯಲ್ಲಿರುವ ನ್ಯೂನತೆಗಳನ್ನು ಸರಿಪಡಿಸಬೇಕೆಂದು ಹೇಳಿದ್ದರು. ಆರ್ಯರು ಹೊರಗಿನಿಂದ ಬಂದವರಲ್ಲ, ಸ್ಥಳೀಯರು ಎನ್ನುವುದನ್ನು ತಮ್ಮ ಬರವಣಿಗೆಯಲ್ಲಿ ಉಲ್ಲೇಖೀಸಿದ್ದಾರೆ. ಭಾಷಾ ಪ್ರಯೋಗದಿಂದ ಒಂದು ಜನಾಂಗದ ಮೂಲವನ್ನು ಗುರುತಿಸಬಹುದು ಎಂದಿದ್ದರು. ಐತಿಹಾಸಿಕ ಧರ್ಮ, ಸತ್ಯದ ಪ್ರತಿಪಾದನೆ, ಸತ್ಯದ ಅನ್ವೇಷಣೆ ಆಗಬೇಕು ಎನ್ನುವ ಬಯಕೆ ಅವರದಾಗಿತ್ತು. -ಡಾ| ಎಂ.ವಿ. ಶ್ರೀನಿವಾಸ್‌, ನಿವೃತ್ತ ಪ್ರಾಧ್ಯಾಪಕರು

Advertisement

Udayavani is now on Telegram. Click here to join our channel and stay updated with the latest news.

Next