ಮುಂಬಯಿ: ಆರ್ಥಿಕ ಪುನಶ್ಚೇತನಕ್ಕೆ ಆರ್ ಬಿಐ ಒತ್ತು ಹಾಗೂ ಒಮಿಕ್ರಾನ್ ಸೋಂಕಿನ ಕುರಿತ ಭಯ ಕಡಿಮೆಯಾದ ಪರಿಣಾಮ ಬುಧವಾರ(ಡಿಸೆಂಬರ್ 08) ಮುಂಬಯಿ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕ ಬರೋಬ್ಬರಿ 1,016 ಅಂಕಗಳಷ್ಟು ಜಿಗಿತ ಕಾಣುವ ಮೂಲಕ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.
ಇದನ್ನೂ ಓದಿ:ಜಗತ್ತಿನ 57 ದೇಶಗಳಲ್ಲಿ ಒಮಿಕ್ರಾನ್ ಸೋಂಕು ಪ್ರಕರಣ ಪತ್ತೆ; ವಿಶ್ವ ಆರೋಗ್ಯ ಸಂಸ್ಥೆ
ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 1,016 ಅಂಕಗಳಷ್ಟು ಏರಿಕೆಯಾಗಿದ್ದು, 58,649.68 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 293.05 ಅಂಕ ಏರಿಕೆಯೊಂದಿಗೆ 17,469.75 ಅಂಕಗಳ ಗಡಿ ತಲುಪಿದೆ.
ಬಜಾಜ್ ಫೈನಾನ್ಸ್, ಮಾರುತಿ, ಎಸ್ ಬಿಐ, ಬಜಾಜ್ ಫಿನ್ ಸರ್ವ್, ಸನ್ ಫಾರ್ಮಾ ಮತ್ತು ಏಷ್ಯನ್ ಪೇಂಟ್ಸ್ ಷೇರುಗಳು ಶೇ.4ರಷ್ಟು ಲಾಭಗಳಿಸಿದೆ. ಮತ್ತೊಂದೆಡೆ ಕೋಟಕ್ ಬ್ಯಾಂಕ್, ಪವರ್ ಗ್ರಿಡ್ ಷೇರುಗಳು ನಷ್ಟ ಕಂಡಿದೆ.
ಜಾಗತಿಕ ಷೇರು ಮಾರುಕಟ್ಟೆಯಲ್ಲಿನ ಭರ್ಜರಿ ವಹಿವಾಟು ಮತ್ತು ರೆಪೋ ಮತ್ತು ರಿವರ್ಸ್ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾಸ್ಥಿತಿಯಲ್ಲಿ ಆರ್ ಬಿಐ ಮುಂದುವರಿಸಿರುವುದಾಗಿ ಪ್ರಕಟಿಸಿರುವುದು ಷೇರುಪೇಟೆಯ ಸೆನ್ಸೆಕ್ಸ್ ಏರಿಕೆಗೆ ಕಾರಣವಾಗಿದೆ ಎಂದು ಎಲ್ ಕೆಪಿ ಸೆಕ್ಯುರಿಟೀಸ್ ರಿಸರ್ಚ್ ಹೆಡ್ ಎಸ್.ರಂಗನಾಥನ್ ವಿಶ್ಲೇಷಿಸಿದ್ದಾರೆ.