ಮುಂಬೈ:ಆರ್ಥಿಕ ಚೇತರಿಕೆಗಾಗಿ ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ) ಶುಕ್ರವಾರ ರೆಪೋ ದರ ಇಳಿಸಿದ ಬೆನ್ನಲ್ಲೇ ಮುಂಬೈ ಶೇರುಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 434 ಅಂಕಗಳಷ್ಟು ಕುಸಿತದೊಂದಿಗೆ ದಿನಾಂತ್ಯಕ್ಕೆ 37,673.31 ಅಂಕಗಳೊಂದಿಗೆ ವಹಿವಾಟು ಮುಕ್ತಾಯಗೊಳಿಸಿದೆ.
ಆರ್ ಬಿಐ ಇಂದು ನಾಲ್ಕನೇ ದ್ವೈಮಾಸಿಕ ನೀತಿ ಪುನರ್ ವಿಮರ್ಶಾ ಸಭೆಯಲ್ಲಿ ಸತತ 5ನೇ ಬಾರಿಗೆ 25 ಬೇಸಿಸ್ ಅಂಶಗಳಷ್ಟು ರೆಪೋ ದರವನ್ನು ಕಡಿಮೆ ಮಾಡುವ ಮೂಲಕ ಬಡ್ಡಿದರ ಇಳಿಸಲು ನಿರ್ಧಾರ ಕೈಗೊಂಡಿತ್ತು.
ಇದರಿಂದಾಗಿ ರಾಷ್ಟ್ರೀಯ ಶೇರು ಮಾರುಕಟ್ಟೆ ನಿಫ್ಟಿ ಸೂಚ್ಯಂಕ 139.25 ಅಂಕಗಳ ನಷ್ಟದೊಂದಿಗೆ 11,174.75 ಅಂಕಗಳೊಂದಿಗೆ ವಹಿವಾಟು ಅಂತ್ಯಗೊಳಿಸಿದೆ.
ಮುಂಬೈ ಶೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ ಭಾರೀ ಕುಸಿತ ಕಂಡ ಪರಿಣಾಮ ಕೋಟಕ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಟಾಟಾ ಮೋಟಾರ್ಸ್, ಎಚ್ ಡಿಎಫ್ ಸಿ ಬ್ಯಾಂಕ್, ಟಾಟಾ ಸ್ಟೀಲ್, ಎಸ್ ಬಿಐ ಶೇರುಗಳು ಶೇ.3.46ರಷ್ಟು ಕುಸಿತ ಕಾಣುವ ಮೂಲಕ ನಷ್ಟ ಅನುಭವಿಸಿದೆ.
ಏತನ್ಮಧ್ಯೆ ಟಿಸಿಎಸ್, ಇನ್ಫೋಸಿಸ್, ಟೆಕ್ ಮಹೀಂದ್ರಾ, ಎನ್ ಟಿಪಿಸಿ, ಎಚ್ ಸಿಎಲ್ ಟೆಕ್, ಹೀರೋ ಮೋಟಾರ್ ಕಾರ್ಪೋರೇಶನ್, ಇಂಡಸ್ ಲ್ಯಾಂಡ್ ಬ್ಯಾಂಕ್ ನ ಶೇರುಗಳು ಶೇ.1.03ರಷ್ಟು ಏರಿಕೆ ಕಂಡು ಲಾಭ ಪಡೆದಿರುವುದಾಗಿ ವರದಿ ತಿಳಿಸಿದೆ.