Advertisement
ಕಳೆದ ವಾರ ಸುಮಾರು ಶೇ. 5 ಕ್ಕೂ ಮೀರಿ ಕುಸಿದ ಶೇರು ಮಾರುಕಟ್ಟೆ ಸುಮಾರು ಪ್ರಶ್ನೆಗಳಿಗೆ ಎಡೆ ಮಾಡಿಕೊಟ್ಟಿದೆ. ಭಾರತದ ಪ್ರಗತಿ ಅಂಕಿಗಳು ಚೆನ್ನಾಗಿದ್ದರೂ, ಬೆಲೆ ಏರಿಕೆ ಈವರೆಗೆ ನಿಯಂತ್ರಣದಲ್ಲಿದ್ದರೂ ಶೇರುಕಟ್ಟೆ ಕುಸಿಯಲು ಕಾರಣವೇನು ಎಂಬ ಪ್ರಶ್ನೆ ಹಲವರನ್ನು ಕಾಡುವುದು ಸಹಜ. ಮುಖ್ಯವಾಗಿ ನಾವು ಒಂದು ವಿಚಾರವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ರುಪಾಯಿ ಕುಸಿಯಲು ರುಪಾಯಿಯೇ ಕ್ಷೀಣಿಸಬೇಕೆಂದಿಲ್ಲ, ಡಾಲರ್ ಪ್ರಬಲವಾದರೂ ಸಾಕು. ಅಧ್ಯಕ್ಷ ಟ್ರಂಪ್ ತೆಗೆದುಕೊಂಡ ಹಲವಾರು ಹೆಜ್ಜೆಗಳು ಅಮೆರಿಕಾ ಹಾಗೂ ಅದರ ಡಾಲರ್ ಪ್ರಬಲವಾಗಲು ಕಾರಣವಾಯಿತು. ಏರುತ್ತಿರುವ ತೈಲದ ಬೆಲೆ ಆಮದಿಗೆ ನೀಡಿರುವ ಪ್ರಾಧಾನ್ಯ ಭಾರತದ ಆರ್ಥಿಕತೆಯ ಮೇಲೆ ಋಣಾತ್ಮಕ ಪ್ರಭಾವ ಬೀರದಿರದು. ಜೊತೆಗೆ ರಫ್ತು ಕೂಡಾ ಕಡಿಮೆಯಾಗಿ ಡಾಲರ್ ಬೇಡಿಕೆ ಹೆಚ್ಚಾದಾಗ ರುಪಾಯಿ ಮೌಲ್ಯ ಕುಸಿಯುವುದರಲ್ಲಿ ಆಶ್ಚರ್ಯವಿಲ್ಲ. ಅಮೇರಿಕಾ-ಚೀನಾಗಳ ಮಧ್ಯೆ ನಡೆಯುತ್ತಿರುವ ಆರ್ಥಿಕ ಸಮರ ಭಾರತದ ಮೇಲೂ ಪರಿಣಾಮ ಬೀರುತ್ತದೆ.
ಏನಿದು ಸಿಪ್?
SIP ಅಂದರೆ Systematic Investment Plan, ಒಂದು ಕ್ರಮಬದ್ಧವಾದ ಹೂಡಿಕಾ ಕ್ರಮ. ಇಲ್ಲಿ ಒಂದು ಪೂರ್ವ ನಿಗದಿತ ಸಮಯಾನುಸಾರ ಪ್ರತಿ ತಿಂಗಳು, ಪ್ರತಿ ಪಕ್ಷ, ಪ್ರತಿ ವಾರ ಅಥವಾ ಪ್ರತಿ ದಿನ ಕೂಡಾ ಒಂದು ಪೂರ್ವ ನಿಗದಿತ ಮೊತ್ತವನ್ನು ಒಂದು ನಿಗದಿತ ಅವಧಿಯವರೆಗೆ ಒಂದು ಮ್ಯೂಚುವಲ್ ಫಂಡಿನಲ್ಲಿ ಹೂಡುತ್ತಾ ಹೋಗುವುದು. ಅದು ಹೇಗೆ ನಡೆಯುತ್ತದೆ ಎಂದು ಕೆಳಗಿನ ಟೇಬಲ್ ನೋಡಿ ತಿಳಿಯೋಣ:
Related Articles
ಈ ಟೇಬಲ್‌ನಲ್ಲಿ ಹತ್ತು ತಿಂಗಳುಗಳಲ್ಲಿ ಪ್ರತಿ ಬಾರಿಯೂ ರೂ 1000 ಕೊಟ್ಟು ಪ್ರಚಲಿತ ಮಾರುಕಟ್ಟೆ ಬೆಲೆಗೆ(Net Asset value) ಮ್ಯೂಚುವಲ್ ಫಂಡ್ ಒಂದರ ಯುನಿಟ್‌ಗಳನ್ನು ಕೊಳ್ಳಲಾಗುತ್ತದೆ. ಪ್ರತಿ ತಿಂಗಳೂ ಆ ಮೂಲಕ ವೆಚ್ಚವು ಸರಾಸರಿ ಆಗುತ್ತಾ ಹೋಗುತ್ತದೆ. ಪ್ರತಿ ಬಾರಿಯೂ ನಿಶ್ಚಿತ ರೂ. 1000 ಏನ್ನೇ ಹೂಡುವುದರಿಂದ ಆ ಮೊತ್ತಕ್ಕೆ ಬರುವ ಯುನಿಟ್‌ಗಳ ಸಂಖ್ಯೆ NಅV ಅಥವಾ ಅದರ ನಿವ್ವಳ ಆಸ್ತಿ ಮೌಲ್ಯವನ್ನು ಹೊಂದಿಕೊಂಡು ಹೆಚ್ಚು ಕಡಿಮೆಯಾಗುತ್ತದೆ. ಹಾಗಾಗಿ ಯೂನಿಟ್‌ಗಳಿಗೆ ಬೆಲೆ ಜಾಸ್ತಿಯಿರುವಾಗ ಕಡಿಮೆ ಯೂನಿಟ್‌ಗಳ ಹಾಗೂ ಯೂನಿಟ್ ತಳಿಗೆ ಬೆಲೆ ಕಡಿಮೆಯಿರುವಾಗ ಜಾಸ್ತಿ ಯುನಿಟ್‌ಗಳನ್ನು ಖರೀದಿಸಲ್ಪಡುತ್ತವೆ. ಇದರಿಂದಾಗಿ ತೂಕಾಧಾರಿತ ಸರಾಸರಿ (Weighted Average) ವೆಚ್ಚ ಕಡಿಮೆಯಾಗುತ್ತದೆ. ಈ ರೀತಿ ಏರಿಳಿಯುತ್ತಿರುವ ಮಾರುಕಟ್ಟೆಯಲ್ಲಿ ವೆಚ್ಚವನ್ನು ಸರಾಸರಿ ಆಗಿಸುವುದೇ ಸಿಪ್ ಮಾದರಿಯ ಹೂಡಿಕೆಯ ವೈಶಿಷ್ಟ್ಯ!
Advertisement
ಈಗ, ಮೇಲಿನ ಟೇಬಲ ಅನ್ನು ಇನ್ನೊಮ್ಮೆ ಸರಿಯಾಗಿ ನೋಡಿ. ಇಲ್ಲಿ ಸರಾಸರಿ ವೆಚ್ಚ ರೂ 15.88 ರಂತೆ ಒಟ್ಟು ರೂ 10,000 ಹೂಡಲಾಗಿದೆ. ಯುನಿಟ್ಟೊಂದರ ದರ ರೂ 15.88 ಕನಿಷ್ಠವೇನೂ ಅಲ್ಲ. ಹಾಗೆ ನೋಡಿದರೆ, ಕನಿಷ್ಠ ದರ ರೂ 12.77 (3 ನೇ ತಿಂಗಳಲ್ಲಿ). ಈ ಸಿಪ್ ಬೈ ಸಿಪ್ ಮಾಡುವುದರಿಂದ ಗರಿಷ್ಟ ದರದ ತೊಂದರೆ ಹೇಗೆ ಉಂಟಾಗುವುದಿಲ್ಲವೋ ಹಾಗೆಯೇ ಕನಿಷ್ಠ ದರದ ಫಲವೂ ದೊರೆಯುವುದಿಲ್ಲ! ಇದೊಂದು ಸರಾಸರಿ ಬೆಲೆಯಲ್ಲಿ ಫಂಡು ಕೊಳ್ಳುವ ಒಂದು ಕಾರ್ಯತಂತ್ರ ಮಾತ್ರ.
ಸಾಧಕ-ಬಾಧಕಗಳು:ಆದರೆ ಒಂದು ಮಾತ್ರ ಸತ್ಯ. ಮಾರುಕಟ್ಟೆಯ ಕನಿಷ್ಠ ಗರಿಷ್ಠಗಳನ್ನು ತಿಳಿಯಲಾರದ ಸಂದರ್ಭದಲ್ಲಿ ಸುಮ್ಮನೇ ಬಿ.ಪಿ ಏರಿಸಿಕೊಂಡು ಮನೆಯಲ್ಲಿದ್ದೇ ಬೈದುಕೊಂಡು ಆಫೀಸಿನಲ್ಲಿ ಬೈಸಿಕೊಂಡು ಶೇರು ಮೋಹಿನಿಯಾಟ್ಟಂನ ಮೇಲೆ ರಿವಸರ್ಸ್ ಮಾಡುವುದರಿಂದ, ಆರಾಮವಾಗಿ ಕುಳಿತುಕೊಂಡು ಸರಾಸರಿ ವೆಚ್ಚದಲ್ಲಿ ಶೇರು ಖರೀದಿಸುತ್ತಾ ಹೋಗಬಹುದು. ರಿಟರ್ನ್ ಸ್ವಲ್ಪ ಕಡಿಮೆಯಾದರೂ ಸರಿ ಆರಾಮದಲ್ಲಿ ಕುಳಿತಲ್ಲೆ ದುಡ್ಡು ಮಾಡುವುದು ಒಳ್ಳೆಯದಲ್ಲವೇ? ಅಷ್ಟಕ್ಕೂ ಅಂತಹ ಕನಿಷ್ಠ ಮಟ್ಟ ನಮ್ಮ ಕೈಗೆ ಸಿಗುತ್ತದೆಯೇ? ಈ ನಿಟ್ಟಿನಲ್ಲಿ ಸಿಪ್ ಅತ್ಯಂತ ಉಪಕಾರಿ. ಸಿಸ್ಟಮಾಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್‌ನಿಂ ದ ಇನ್ನೊಂದು ಲಾಭವಿದೆ- ಮಾರುಕಟ್ಟೆ ಎಷ್ಟು ಕೆಳಗೆ ಇದೆ ಎಂದು ಗೊತ್ತಿದ್ದರೂ ಆ ಸಂದರ್ಭಗಳಲ್ಲೆಲ್ಲ ಕೈಯಲ್ಲಿ ದುಡ್ಡಿರುವುದಿಲ್ಲ. ಎಷ್ಟೋ ಉಳಿತಾಯ ಮಾಡಿಕೊಳ್ಳುವುದೂ ಕೂಡಾ ಕಷ್ಟಸಾಧ್ಯವಾಗಿರುತ್ತದೆ. ಹಾಗಾಗಿ ಈ ರೀತಿ ಪ್ರತಿ ತಿಂಗಳೂ/ವಾರವೂ ಶಿಸ್ತುಬದ್ಧವಾಗಿ ಮ್ಯೂಚುವಲ… ಫಂಡುಗಳಲ್ಲಿ ಹಣ ಹೂಡುವುದು ಒಂದು ಉತ್ತಮ ಪದ್ಧತಿ. ಇದು ಕುಸಿತದ ಸಮಯದಲ್ಲಿ ಮಾತ್ರವಲ್ಲ, ಮಾರುಕಟ್ಟೆಯ ಯಾವುದೇ ಸಮಯಕ್ಕೂ ಉತ್ತಮ ಉತ್ತರ.
ಜಯದೇವ ಪ್ರಸಾದ ಮೊಳೆಯಾರ
******** ಹೀಗೆ ಮಾಡಿ 1. ಗಾಬರಿಯಾಗಿ ಮಾರಾಟ ಬೇಡ
ಮಾರುಕಟ್ಟೆ ತೀವ್ರ ಕುಸಿತ ಕಂಡಿದೆ ಎಂಬ ಕಾರಣಕ್ಕೆ ಸಿಕ್ಕಿದ ಬೆಲೆಗೆ ಶೇರು ಮಾರುವ ಹತಾಶ ನಿರ್ಧಾರಕ್ಕೆ ಬರಬೇಡಿ. ಸಧ್ಯದ ಬೆಲೆ ನೀವು ಕೊಂಡ ಬೆಲೆಗಿಂತ ಕಡಿಮೆಯೇ ಇರಬಹುದು, ಸದ್ಯ ನೀವು ನಷ್ಟದಲ್ಲಿದ್ದೀರಿ ಎಂಬುದೂ ಸರಿಯೆ. ಆದರೆ ನೀವು ಗಾಬರಿಗೆ ಒಳಗಾಗಿ ಸಿಕ್ಕ ಬೆಲೆಗೆ ಮಾರಾಟಮಾಡುವುದು ನ್ಯಾಯೋಚಿತ ನಿರ್ಧಾರ ಅಲ್ಲವೇ ಅಲ್ಲ. ನಿಮ್ಮ ಪೋರ್ಟ್‌ಫೋಲಿಯೋ ಪ್ಲಾನರ್ ಜೊತೆಗೆ ಕುಳಿತು ಅಥವಾ ನೀವೇ ಸ್ವಯಂ ಅಧ್ಯಯನ ಮಾಡಿ ತೀರ್ಮಾನಕ್ಕೆ ಬನ್ನಿ.ಇಂತಹ ಸಂದರ್ಭದಲ್ಲಿ ಹೆದರಿಕೆಯಾಗುವುದು ಸಹಜ. ಆದರೂ ಪ್ಯಾನಿಕ್ ಸೆಲ್ಲಿಂಗ್ ನಿಂದ ಹೆಚ್ಚಿನ ಸಂದರ್ಭದಲ್ಲಿ ಪ್ರಯೋಜನವಾಗುವುದಿಲ್ಲ. ಅದೊಂದು ದುಡುಕಿನ ನಿರ್ಧಾರವಾಗಿರುತ್ತದೆ. 2. ಎಸ್.ಐ.ಪಿ.ಹೂಡಿಕೆ ರದ್ದು ಮಾಡಬೇಡಿ
ಇಂಥ ಸಂದರ್ಭದಲ್ಲಿ ಹತಾಶರಾಗಿ ಕೆಲವರು ತಮ್ಮ ಮಾಸಿಕ ವೇತನದಲ್ಲಿ ಕಟಾವಣೆ ಮಾಡಿ ಎಸ್.ಐ.ಪಿ. ಮೂಲಕ ಹೂಡಿಕೆ ಮಾಡುವ ಮೊತ್ತವನ್ನು ರದ್ದು ಮಾಡುವ ಇಲ್ಲವೇ ಮೊತ್ತವನ್ನು ಕಡಿಮೆ ಮಾಡುವ ಆತುರದ ನಿರ್ಧಾರಕ್ಕೆ ಬರುತ್ತಾರೆ. ಇದು ತಪ್ಪು. ಇದೊಂದು ದೀರ್ಘಕಾಲೀನ ಹೂಡಿಕೆ ಎನ್ನುವುದನ್ನು ಮರೆಯಬಾರದು. ಇಂಥ ಇಳಿಕೆ ಅವಧಿಯಲ್ಲಿ ಎಸ್.ಐ.ಪಿ. ಮೂಲಕ ಹೂಡಿದ ಮೊತ್ತ ದೀರ್ಘಾವಧಿಯಲ್ಲಿ ನಿಮಗೆ ದೊಡ್ಡ ಇಡುಗಂಟನ್ನು ಕೊಡುವಲ್ಲಿ ಶಕ್ತವಾಗುತ್ತದೆ ಎಂಬುದನ್ನು ಮರೆಯಬಾರದು. ಹಾಗಾಗಿ ಎಸ್.ಐ.ಪಿ. ಹೂಡಿಕೆಯನ್ನು ಹಾಗೆಯೇ ಮುಂದುವರೆಸಿಕೊಂಡು ಹೋಗುವುದು ಒಳಿತು. 3.ಕೊಳ್ಳಲು ಮುಂದಾಗಬೇಡಿ
ಯಾವುದೇ ಸ್ಟಾಕ್, ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಬಿದ್ದಿದೆ, ಅದರ ಬೆಲೆ ಹಿಂದೆಂದೂ ಕಂಡಿರದಷ್ಟು ಇಳಿತಕ್ಕೆ ಬಂದಿದೆ ಎಂಬ ಒಂದೇ ಮಾನದಂಡವನ್ನಿಟ್ಟುಕೊಂಡು ಆ ನಿರ್ದಿಷ್ಟ ಶೇರನ್ನು ಕೊಳ್ಳಲು ಅವಸರದ ನಿರ್ಧಾರ ಮಾಡಬೇಡಿ. ಏಕೆಂದರೆ ಇಳಿತಕ್ಕೂ ಯಾವ ಮಾನದಂಡವಿರುವುದಿಲ್ಲ. ಕೊಳ್ಳಲೇಬೇಕಿದ್ದರೆ, ಆ ನಿರ್ದಿಷ್ಟ ಕಂಪೆನಿಯ ಶೇರು ಏಕೆ ಬಿದ್ದಿದೆ ಎಂಬುದನ್ನು ತಿಳಿದು, ಕಂಪೆನಿಯ ವಹಿವಾಟು, ಅದು ಯಾವ ಸೆಕ್ಟರ್‌ಗೆ ಸೇರಿದ್ದು ಎಂಬುದನ್ನು ತಿಳಿದು ಕೊಳ್ಳಿ. 4.ಒಂದೇ ಸೆಕ್ಟರ್ ಗೆ ಸೇರಿದ ಶೇರು ಕೊಳ್ಳಬೇಡಿ
ನಿಮ್ಮ ಹೂಡಿಕೆ ಎಲ್ಲ ಔದ್ಯಮಿಕ ಕ್ಷೇತ್ರಗಳ: ಸಂತುಲಿತ ಪ್ಯಾಕೇಜ್ ಆಗಿರುವುದು ಒಳಿತು. ಸಿಮೆಂಟ್, ಪೆಟ್ರೋಲ್, ಬ್ಯಾಂಕಿಂಗ್, ಹೀಗೆ ವಿವಿಧ ಕ್ಷೇತ್ರಗಳಲ್ಲಿ ನಿಮ್ಮ ಹೂಡಿಕೆಯನ್ನು ಹಂಚಿ ನಿಯೋಜನೆಯಾಗುವಂತೆ ನೋಡಿಕೊಳ್ಳಿ. ಯಾವುದೇ ಒಂದು ಕ್ಷೇತ್ರದಲ್ಲಿ ಮಾರುಕಟ್ಟೆ ಇಳಿತಕಂಡರೂ ನಮ್ಮ ಹೂಡಿಕೆ ಸೇಫ್ ಆಗಿರಬಲ್ಲದು. 5. ಲಿವರೇಜ್ ಮಾಡಲು ಹೋಗಬೇಡಿ
ಸ್ಟಾಕ್ ಮಾರುಕಟ್ಟೆಯ ಪರಿಭಾಷೆಯಲ್ಲಿ ಲಿವರೇಜ್ ಎಂಬುದು ತುಂಬ ಮಹತ್ವದ ಕ್ರಮ. ಮಾರುಕಟ್ಟೆ ಬಿದ್ದಾಗ ಹೂಡಿಕೆ ಕಂಪೆನಿಗಳು ಸಾಲ ಮಾಡಿ ಹಣ ತಂದು ಬಿದ್ದ ಬೆಲೆಯಲ್ಲಿ ಶೇರುಗಳನ್ನು ಕೊಂಡು ತಮ್ಮ ನಷ್ಟವನ್ನು ಸರಿದೂಗಿಸಿಕೊಳ್ಳಲು ಮುಂದಾಗುತ್ತವೆ. ಆದರೆ ಇದು ಉತ್ತಮ ಉಪಕ್ರಮ ಅಲ್ಲವೇ ಅಲ್ಲ. ವ್ಯಕ್ತಿಗತವಾಗಿಯಾದರೂ ನಾವು ಕೊಂಡಿರುವ ಶೇರುಬೆಲೆ ಬಿದ್ದಾಗ, ಬಿದ್ದ ಬೆಲೆಯಲ್ಲಿ ಇನ್ನಷ್ಟನ್ನು ಕೊಂಡು ನಮ್ಮ ಸರಾಸರಿ ಕೊಳ್ಳುಬೆಲೆ ತಗ್ಗಿಸಿಕೊಳ್ಳುವುದಕ್ಕೆ ಮುಂದಾಗುತ್ತೇವೆ. ಮೇಲ್ನೋಟಕ್ಕೆ ಇದು ಸೂಕ್ತ ಎನಿಸಿದರೂ ಎಲ್ಲ ಕಾಲಕ್ಕೂ ಇದು ಯೋಗ್ಯ ನಿರ್ಧಾರ ಎಂದು ಹೇಳಲಾಗುವುದಿಲ್ಲ. ನಿರಂಜನ