Advertisement

ಬಿಎಸ್‌ಇ, ನಿಫ್ಟಿ ಗಗನಮುಖಿ: ದಾಖಲೆ ನಿರ್ಮಿಸಿದ ಷೇರು ಪೇಟೆ ಏರಿಕೆ

07:11 PM Dec 01, 2022 | Team Udayavani |

ಮುಂಬೈ/ನವದೆಹಲಿ: ಬಾಂಬೆ ಷೇರು ಪೇಟೆಯಲ್ಲಿ ಗುರುವಾರ ಕೂಡ ಸಂವೇದಿ ಸೂಚ್ಯಂಕ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ದಿನಾಂತ್ಯಕ್ಕೆ 184.50 ಪಾಯಿಂಟ್ಸ್‌ ಏರಿಕೆಯಾಗಿ, ಸೂಚ್ಯಂಕ 63, 284.19ರಲ್ಲಿ ಮುಕ್ತಾಯವಾಗಿದೆ. ಮಧ್ಯಂತರದಲ್ಲಿ ಸೂಚ್ಯಂಕ  483.42 ಪಾಯಿಂಟ್ಸ್‌ ಏರಿಕೆಯಾಗಿ 63,284.19ರ ವರೆಗೆ ಜಿಗಿದಿತ್ತು.

Advertisement

ಉತ್ಪಾದನಾ ಕ್ಷೇತ್ರದ ಪಿಎಂಐ ಸೂಚ್ಯಂಕ, ಅಮೆರಿಕದ ಫೆಡರಲ್‌ ರಿಸರ್ವ್‌ನ ಮುಂದಿನ ದಿನಗಳಲ್ಲಿ ಭಾರೀ ಪ್ರಮಾಣದ ಬಡ್ಡಿ ದರ ಏರಿಕೆ ನಡೆಸದೇ ಇರುವ ಬಗ್ಗೆ ಚಿಂತನೆ ನಡೆಸಿರುವುದು ಕೂಡ ಸತತ ಎಂಟನೇ ಸೆಷನ್‌ನಲ್ಲಿಯೂ ಕೂಡ ಸೂಚ್ಯಂಕದಲ್ಲಿ ಏರಿಕೆ ಹಾದಿ ಹಿಡಿದಿದೆ ಎಂದು ವಿಶ್ಲೇಷಣೆಗಳು ನಡೆದಿವೆ.

ಅಲ್ಟ್ರಾಟೆಕ್‌ ಸಿಮೆಂಟ್‌, ಟಾಟಾ ಸ್ಟೀಲ್‌, ಟಿಸಿಎಸ್‌, ಟೆಕ್‌ ಮಹೀಂದ್ರಾ, ವಿಪ್ರೋ, ಇನ್ಫೋಸಿಸ್‌, ಎಚ್‌ಸಿಎಲ್‌ ಟೆಕ್ನಾಲಜೀಸ್‌, ಎಲ್‌ ಆ್ಯಂಡ್‌ ಟಿ ಷೇರುಗಳಿಗೆ ಪ್ರಧಾನವಾಗಿ ಬೇಡಿಕೆ ಇತ್ತು.

ನಿಫ್ಟಿ ಸೂಚ್ಯಂಕ 54.15 ಪಾಯಿಂಟ್ಸ್‌ ಏರಿಕೆಯಾಗಿದ್ದು, ದಿನಾಂತ್ಯಕ್ಕೆ 18,812.50ಕ್ಕೆ ಮುಕ್ತಾಯಗೊಂಡಿದೆ. ಹೀಗಾಗಿ, ದಾಖಲೆ ಮುಕ್ತಾಯ ಎಂದು ವಿಶ್ಲೇಷಿಸಲಾಗಿದೆ.

ಏಷ್ಯಾದಲ್ಲಿ:

Advertisement

ಏಷ್ಯಾದ ಇತರ ರಾಷ್ಟ್ರಗಳಲ್ಲಿ ಕೂಡ ಷೇರು ಪೇಟೆ ಚೇತೋಹಾರಿಯಾಗಿತ್ತು. ಚೀನಾದಲ್ಲಿ ಕೊರೊನಾ ಪ್ರತಿಬಂಧಕ ಕ್ರಮಗಳನ್ನು ಕೆಲವು ನಗರಗಳಲ್ಲಿ ವಾಪಸ್‌ ಪಡೆದಿರುವುದೂ ಸುಲಲಿತ ಷೇರುಪೇಟೆ ವಹಿವಾಟಿಗೆ ಕಾರಣವಾಗಿದೆ.

2,438 ಪಾಯಿಂಟ್ಸ್‌- ಇದುವರೆಗಿನ ಬಿಎಸ್‌ಇ ಏರಿಕೆ

9 ಲಕ್ಷ ಕೋಟಿ ರೂ.- 8 ಸೆಷನ್‌ಗಳಲ್ಲಿನ ಟ್ರೇಡಿಂಗ್‌ನಲ್ಲಿ ಹೂಡಿಕೆದಾರರಿಗೆ ಲಾಭ

290 ಕೋಟಿ ರೂ.- ಬಿಎಸ್‌ಇ ಷೇರುಗಳ ಮೌಲ್ಯ ವೃದ್ಧಿ

ಉತ್ಪಾದನಾ ಸೂಚ್ಯಂಕದಲ್ಲಿ ಜಿಗಿತ:

ದೇಶದ ಉತ್ಪಾದನಾ ಕ್ಷೇತ್ರದಲ್ಲಿ ಏರಿಕೆಯಾಗಿದೆ. ಅದು ಮೂರು ತಿಂಗಳ ಗರಿಷ್ಠಕ್ಕೆ ಹೆಚ್ಚಳವಾಗಿದೆ ಎಂದು ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ಇಂಡಿಯಾ ಮ್ಯಾನ್ಯುಫ್ಯಾಕ್ಚರಿಂಗ್‌ ಪರ್ಚೇಸ್‌ ಮ್ಯಾನೇಜರ್ಸ್‌ ಇಂಡೆಕ್ಸ್‌ (ಪಿಎಂಐ)ನ ಅಧ್ಯಯನದಲ್ಲಿ ಅಭಿಪ್ರಾಯಪಡಲಾಗಿದೆ. ಕಳೆದ ತಿಂಗಳಿಗೆ ಸಂಬಂಧಿಸಿದಂತೆ ಉತ್ಪಾದನಾ ಕ್ಷೇತ್ರದ ಚಟುವಟಿಕೆ ಪ್ರಮಾಣ ಶೇ.55.7 ಆಗಿದೆ. ಅಕ್ಟೋಬರ್‌ನಲ್ಲಿ ಅದರ ಪ್ರಮಾಣ ಶೇ.55.3 ಆಗಿತ್ತು. ಸತತ 17ನೇ ಬಾರಿಗೆ ಒಟ್ಟಾರೆಯಾಗಿ ಈ ಕ್ಷೇತ್ರದ ಚಟುವಟಿಕೆಯಲ್ಲಿ ಚೇತರಿಕೆ ಉಂಟಾಗಿದೆ.  ಮುಂದಿನ ವರ್ಷ ಉತ್ಪಾದನೆಯನ್ನು ಹೆಚ್ಚಿಸುವ ಬಗ್ಗೆ ಕಂಪನಿಗಳು ಹೆಚ್ಚಿನ ಉತ್ಸಾಹ ಹೊಂದಿವೆ. ಜತೆಗೆ ಗ್ರಾಹಕರ ಬೇಡಿಕೆಗಳಿಗೆ ಅನುಸಾರವಾಗಿ ಅಗತ್ಯ ವಸ್ತುಗಳನ್ನು ಪೂರೈಸುವ ನಂಬಿಕೆಯೇ ಈ ಬೆಳವಣಿಗೆಗೆ ಕಾರಣ ಎಂದು ಎಸ್‌ ಆ್ಯಂಡ್‌ ಪಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next