Advertisement

ಷೇರು ಪೇಟೆಗೆ ಅಮೆರಿಕದ ಖದರ್‌

03:08 AM Jan 21, 2021 | Team Udayavani |

ಮುಂಬಯಿ:  ಬಾಂಬೆ ಷೇರು ಪೇಟೆಯ ಸೂಚ್ಯಂಕದ ಗೆಲುವಿನ ಓಟ ಬುಧವಾರವೂ ಮುಂದುವರಿದಿದೆ. ದಿನಾಂತ್ಯಕ್ಕೆ ಸೂಚ್ಯಂಕ 393.83 ಪಾಯಿಂಟ್ಸ್‌ಗಳಷ್ಟು ಏರಿಕೆಯಾಗಿ 49,792.12ರಲ್ಲಿ  ಮುಕ್ತಾ ಯವಾಗಿದೆ. ಹೀಗಾಗಿ, ಗರಿಷ್ಠ ಮುಕ್ತಾಯ ದಾಖಲೆ ತಲುಪಿದಂತಾಗಿದೆ. ಸೂಚ್ಯಂಕ 50 ಸಾವಿರ ತಲುಪಲು ಇನ್ನು 207. 88 ಪಾಯಿಂಟ್ಸ್‌ಗಳಷ್ಟು ಮಾತ್ರ ಬೇಕಾಗಿದೆ. ಅಮೆರಿಕದಲ್ಲಿ ನಾಯಕತ್ವ ಬದಲಾಗಿ, ಗಟ್ಟಿ ನಿರ್ಧಾರಗಳು ಹೊರಹೊಮ್ಮುವ ಸೂಚನೆಗಳು ವ್ಯಕ್ತವಾಗಿರುವಂತೆಯೇ ಸೂಚ್ಯಂಕ ಗುರಿ ತಲುಪುವ ವಿಶ್ವಾಸ ಹೂಡಿಕೆದಾರರಲ್ಲಿ ಮೂಡಿದೆ.

Advertisement

ಬಿಎಸ್‌ಇನಲ್ಲಿ ಮಾರುತಿಯ ಷೇರುಗಳು ಶೇ.2.75ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಬಿಕರಿಯಾಗಿವೆ. ಟೆಕ್‌ ಮಹೀಂದ್ರಾ (ಶೇ.2.67), ಮಹೀಂದ್ರಾ ಆ್ಯಂಡ್‌ ಮಹೀಂದ್ರಾ (ಶೇ.1.98), ಏಷ್ಯನ್‌ ಪೇಂಟ್ಸ್‌ (ಶೇ.1.98) ಷೇರುಗಳಿಗೂ ಬೇಡಿಕೆ ಉಂಟಾಯಿತು. ಅಮೆರಿಕದ ನಿಯೋಜಿತ ವಿತ್ತ ಸಚಿವ ಜನೆಟ್‌ ವೆಲ್ಲೆನ್‌ ಕೊರೊನಾದಿಂದ ಹಿನ್ನಡೆ ಅನುಭವಿಸಿರುವ ದೇಶದ ಅರ್ಥ ವ್ಯವಸ್ಥೆ ಪುನಶ್ಚೇತನಕ್ಕೆ ಸಾಧ್ಯವಾದಷ್ಟು ಪ್ರಮಾಣದಲ್ಲಿ ಆರ್ಥಿಕ ಪ್ಯಾಕೇಜ್‌ ನೀಡಲಾಗುತ್ತದೆ ಎಂದು ಪ್ರಕಟಿಸಿದ್ದು, ಜಗತ್ತಿನ ಷೇರುಪೇಟೆಗಳಲ್ಲಿ ಚೇತೋಹಾರಿ ವಹಿವಾಟು ನಡೆಯುವಂತೆ ಮಾಡಿತು.

ಇನ್ನು ನಿಫ್ಟಿ ಸೂಚ್ಯಂಕ 123.55 ಪಾಯಿಂಟ್ಸ್‌ ಗಳಷ್ಟು ಏರಿಕೆಯಾಗಿದೆ. ದಿನದ ಮುಕ್ತಾಯದಲ್ಲಿ ದಾಖಲೆಯ 14,644.70ರಲ್ಲಿ ಕೊನೆಗೊಂಡಿತು.

ರೂಪಾಯಿ ಚೇತರಿಕೆ: ಅಮೆರಿಕದ ಡಾಲರ್‌ ಎದುರು ರೂಪಾಯಿ ಸತತ 2ನೇ ದಿನ 12 ಪೈಸೆಗಳಷ್ಟು ಚೇತರಿಸಿಕೊಂಡಿದೆ. ಆರಂಭದಲ್ಲಿ 73.11 ರೂ.ಗಳಲ್ಲಿ ಶುರುವಾಗಿ ಮಧ್ಯಾಂತರದಲ್ಲಿ 73.05ಕ್ಕೆ ತಲುಪಿತು. ಅಂತಿಮವಾಗಿ 73.05ರಲ್ಲಿ ಮುಕ್ತಾಯವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next