ಬೆಳಗಾವಿ: ಕನ್ನಡ ಸಾಹಿತ್ಯದ ಅವಲೋಕನ ಮಾಡಿದಾಗ ಹಾಸ್ಯ ಸಾಹಿತ್ಯ ರಚನೆ ಕಡಿಮೆಯಾಗುತ್ತಿದೆ ಎನ್ನುವ ಭಾವನೆ ಮೂಡುತ್ತದೆ ಎಂದು ಹಿರಿಯ ಲೇಖಕ ಪ್ರೊ| ಎಂ. ಎಸ್. ಇಂಚಲ ಹೇಳಿದರು.
ನಗರದ ಹಾಸ್ಯಕೂಟ ಹಾಗೂ ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಚುನಾವಣೆಯಲ್ಲಿ ಹಾಸ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೊದಲು ಬೀಚಿ, ಟಿ. ಸುನಂದಮ್ಮ., ನಾಡಗೇರ ಕೃಷ್ಣರಾಯ್, ರಾಶಿ, ಎನ್ಕೆ ನಂತರದ ಕಾಲದಲ್ಲಿ ಅನಂತ ಕಲ್ಲೋಳ, ಭುವನೇಶ್ವರಿ ಹೆಗಡೆ, ಎಂ. ಎಸ್. ನರಸಿಂಹಮೂರ್ತಿ, ಡುಂಡಿರಾಜ್ ಮುಂತಾದ ಹಾಸ್ಯ ಬರಹಗಾರರ ದಂಡೇ ಸಿಗುತ್ತದೆ. ಇತ್ತೀಚೆಗೆ ನೋಡಿದಾಗ ಹಾಸ್ಯ ಬರಹಗಾರರ ಕೊರತೆ ಎದ್ದು ಕಾಣುತ್ತಿದೆ. ಕತೆ, ಕವಿತೆಗಳಷ್ಟು ನಗೆಬರಹಗಳ ರಚನೆ ಕಂಡು ಬರುತ್ತಿಲ್ಲ ಎಂದರು.
ಬಾಯಿತುಂಬ ನಕ್ಕರೆ ಹೊಟ್ಟೆ ತುಂಬ ಸಕ್ಕರೆ ನಗುವಿನಿಂದ ನೋವನ್ನು ಮರೆಯಬಹುದು ಅದಕ್ಕಾಗಿ ಉಚಿತವಾಗಿ ನಗೆ ಹಂಚಿಕೊಂಡು ನಿಮ್ಮ ಹಾಗೂ ನಿಮ್ಮ ಸುತ್ತಮುತ್ತಲೂ ಸಂತೋಷದ ವಾತಾವರಣ ನಿರ್ಮಿಸಿ ಎಂದು ಅವರು ಹೇಳಿದರು.
ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿದ್ದ ಅರಣ್ಯ ಇಲಾಖೆಯಲ್ಲಿ ಅಧೀಕ್ಷಕ ಅಶೋಕ ನಲವಡೆ ಮಾತನಾಡಿ, ಬೆಳಗಾವಿ ಜನತೆಗೆ ನಗಲು ಕಲಿಸುತ್ತಿರುವ ಹಾಸ್ಯಕೂಟಕ್ಕೆ ನಾವೆಲ್ಲ ಪ್ರಾಯೋಜಕತ್ವ ಕೊಡುವುದರ ಮೂಲಕ ಪ್ರೋತ್ಸಾಹಿಸಬೇಕು ಎಂದರು.
ಗುಂಡೇನಟ್ಟಿ ಮಧುಕರ ಮಾತನಾಡಿ, ಚುನಾವಣೆ, ರಾಜಕಾರಣಿಗಳು ಇರುವವರೆಗೆ ಹಾಸ್ಯ ಬರವಣಿಗೆಗೆ, ವ್ಯಂಗ್ಯ ಚಿತ್ರಕಾರರಿಗೆ ವಸ್ತುಗಳ ಆಯ್ಕೆಯ ವಿಷಯಕ್ಕೇನೂ ಕೊರತೆಯಿಲ್ಲ. ಚುನಾವಣೆ ಹಾಗೂ ರಾಜಕಾರಣಿಗಳು ಇದ್ದಲ್ಲಿ ಹಾಸ್ಯವಿದ್ದೇ ಇರುತ್ತದೆ. ಆದರೆ ಆರೋಗ್ಯಕರ ಹಾಸ್ಯವಾಗಿರಬೇಕಾದುದು ಅತ್ಯವಶ್ಯ ಎಂದರು. ವಿರುಪಾಕ್ಷ ಕಮನೂರ ಚುನಾವಣೆ ಎಂಬ ಕವಿತೆ ಓದಿದರು. ಗೀತಾ ಚಿದಾನಂದ ಹಾಡಿದರು. ಮಾರಿಹಾಳಕರ ಪ್ರಾರ್ಥಿಸಿದರು. ಅರವಿಂದ ಹುನಗುಂದ ನಿರೂಪಿಸಿದರು.