ನವದೆಹಲಿ:ಕೋವಿಡ್ ಎರಡನೇ ಅಲೆಯ ಆರ್ಥಿಕ ಪರಿಣಾಮ ಮತ್ತು ಲಸಿಕೆ ನೀಡಿಕೆಯಲ್ಲಿನ ವಿಳಂಬ ಹೂಡಿಕೆದಾರರ ಮೇಲೆ ಪರಿಣಾಮ ಬೀರಿದ್ದು, ಶುಕ್ರವಾರ(ಮೇ 14) ಮುಂಬಯಿ ಷೇರುಮಾರುಕಟ್ಟೆ ಸಂವೇದಿ ಸೂಚ್ಯಂಕ ಅಲ್ಪ ಹೆಚ್ಚಳದೊಂದಿಗೆ ವಹಿವಾಟು ಮುಕ್ತಾಯಗೊಳಿಸಿದೆ.
ಇದನ್ನೂ ಓದಿ:ಅಫ್ಘಾನಿಸ್ತಾನ್: ಕಾಬೂಲ್ ಮಸೀದಿಯೊಳಗೆ ಬಾಂಬ್ ಸ್ಫೋಟ, ಇಮಾಮ್ ಸೇರಿ 12 ಮಂದಿ ಸಾವು
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ ಕೇವಲ 41.75 ಅಂಕಗಳಷ್ಟು ಏರಿಕೆ ಕಂಡಿದ್ದು, 48,732.55 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಳಿಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 18.70 ಅಂಕಗಳಷ್ಟು ಚೇತರಿಕೆಯೊಂದಿಗೆ 14,677.80ರ ಗಡಿ ತಲುಪಿದೆ.
ಸೆನ್ಸೆಕ್ಸ್ ಅಲ್ಪ ಚೇತರಿಕೆಯಿಂದ ಏಷ್ಯನ್ ಪೇಂಟ್ಸ್, ಐಟಿಸಿ, ನೆಸ್ಲೆ ಇಂಡಿಯಾ, ಎಲ್ ಆ್ಯಂಡ್ ಟಿ, ಎಚ್ ಯುಎಲ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಲಾಭಗಳಿಸಿವೆ.
ಮತ್ತೊಂದೆಡೆ ಇಂಡಸ್ ಇಂಡ್ ಬ್ಯಾಂಕ್, ಮಹೀಂದ್ರ ಆ್ಯಂಡ್ ಮಹೀಂದ್ರ, ಡಾ.ರೆಡ್ಡೀಸ್, ಎಸ್ ಬಿಐ ಮತ್ತು ಎನ್ ಟಿಪಿಸಿ ಷೇರುಗಳು ನಷ್ಟ ಕಂಡಿದೆ. ಭಾರತದಲ್ಲಿನ ಕೋವಿಡ್ ಪರಿಸ್ಥಿತಿ ಷೇರುಪೇಟೆ ಹೂಡಿಕೆದಾರರ ಮೇಲೆ ಪರಿಣಾಮ ಬೀರಿರುವುದಾಗಿ ಕೋಟಕ್ ಮಹೀಂದ್ರದ ಶಿಬಾನಿ ಕುರಿಯನ್ ತಿಳಿಸಿದ್ದಾರೆ.