ನವದೆಹಲಿ: ಲೋಕಸಭಾ ಚುನಾವಣೆಯ ಮತಎಣಿಕೆ ಮಂಗಳವಾರ (ಜೂನ್ 04) ಬೆಳಗ್ಗೆ ಆರಂಭಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷ 270ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವ ಬೆನ್ನಲ್ಲೇ ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಭಾರೀ ಪ್ರಮಾಣದಲ್ಲಿ ಕುಸಿತ ಕಾಣುವ ಮೂಲಕ ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ.
ಇದನ್ನೂ ಓದಿ:Election Results; ಡಿ.ಕೆ.ಸುರೇಶ್ ಗೆ ನಿರಂತರ ಹಿನ್ನಡೆ: ಕ್ಷೇತ್ರದಲ್ಲಿ ಭದ್ರತೆ ಬಿಗಿ
ಸೋಮವಾರ ಷೇರುಪೇಟೆ ವಹಿವಾಟಿನಲ್ಲಿ 2,500ಕ್ಕೂ ಅಧಿಕ ಅಂಕ ಏರಿಕೆ ಕಂಡಿತ್ತು. ಆದರೆ ಇಂದು ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 2000 ಅಂಕಗಳಷ್ಟು ಕುಸಿತ ಕಂಡಿದ್ದು, 74,107.99 ಅಂಕಗಳ ಮಟ್ಟಕ್ಕೆ ಇಳಿಕೆಯಾಗಿದೆ.
ಅದೇ ರೀತಿ ಎನ್ ಎಸ್ ಇ ನಿಫ್ಟಿ ಶೇ.3.03ರಷ್ಟು ಕುಸಿತ ಕಂಡಿದ್ದು, 22,557 ಅಂಕಗಳ ಮಟ್ಟಕ್ಕೆ ಇಳಿಕೆಯಾಗಿದೆ. ಸೋಮವಾರ ಸೆನ್ಸೆಕ್ಸ್, ನಿಫ್ಟಿ ಏರಿಕೆಯಿಂದ ಹೂಡಿಕೆದಾರರಿಗೆ 12 ಲಕ್ಷ ಕೋಟಿ ರೂಪಾಯಿ ಲಾಭವಾಗಿತ್ತು.
ಮಂಗಳವಾರ ಸೆನ್ಸೆಕ್ಸ್ 2000 ಅಂಕಗಳಷ್ಟು ಕುಸಿತ ಕಂಡ ಪರಿಣಾಮ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ರಿಲಯನ್ಸ್, ಎಲ್ & ಟಿ, ಪವರ್ ಗ್ರಿಡ್, ಎನ್ ಟಿಪಿಸಿ, ಎಚ್ ಡಿಎಫ್ ಸಿ ಬ್ಯಾಂಕ್ ಷೇರು ಭಾರೀ ನಷ್ಟ ಕಂಡಿದೆ.
ಲೋಕಸಭಾ ಚುನಾವಣೆಯ ಮತಎಣಿಕೆ ಮುಂದುವರಿದಿದ್ದು, ಈಗಿನ ಟ್ರೆಂಡ್ ಪ್ರಕಾರ ಭಾರತೀಯ ಜನತಾ ಪಕ್ಷ 249 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಎನ್ ಡಿಎ ಮೈತ್ರಿಕೂಟ 305ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇಂಡಿಯಾ ಮೈತ್ರಿಕೂಟ 216 ಸ್ಥಾನಗಳಲ್ಲಿ ಮುನ್ನಡೆ ಕಂಡಿದೆ.