ಹೊಸದಿಲ್ಲಿ: ಸಿಡ್ನಿಯಲ್ಲಿ ನಡೆಯಲಿರುವ “ನ್ಯೂ ಇಯರ್ ಟೆಸ್ಟ್’ ಪಂದ್ಯದಲ್ಲಿ ಗಾಯಾಳು ಬೌಲರ್ ಉಮೇಶ್ ಯಾದವ್ ಬದಲು ಶಾರ್ದೂಲ್ ಠಾಕೂರ್ ಆಡುವ ಅವಕಾಶ ಹೆಚ್ಚಿದೆ ತಿಳಿದು ಬಂದಿದೆ. ಟಿ. ನಟರಾಜನ್‌ಗೆ ಹೋಲಿಸಿದರೆ ಠಾಕೂರ್‌ಗೆ ಅನುಭವ ಹೆಚ್ಚು ಎಂಬುದೇ ಇದಕ್ಕೆ ಕಾರಣ.
ಶಾರ್ದೂಲ್ ಠಾಕೂರ್ ಅವರ ಟೆಸ್ಟ್ ಪ್ರವೇಶ ಅತ್ಯಂತ ದುರಂತದ್ದಾಗಿತ್ತು. 2018ರಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಹೈದರಾಬಾದ್‌ನಲ್ಲಿ ಟೆಸ್ಟ್ ಕ್ಯಾಪ್ ಧರಿಸಿದ ಅವರು ಕೇವಲ 1.4 ಓವರ್ ಎಸೆಯುವಷ್ಟರಲ್ಲಿ ಗಾಯಾಳಾಗಿ ಹೊರಬೀಳುವ ಸಂಕಟಕ್ಕೆ ಸಿಲುಕಿದ್ದರು. ಅಂದಿನಿಂದ ಟೆಸ್ಟ್ ಆಡುವ ಅವಕಾಶವೇ ಶಾರ್ದೂಲ್ ಗೆ ಲಭಿಸಿಲ್ಲ. ಆದರೆ 62 ಪ್ರಥಮ ದರ್ಜೆ ಪಂದ್ಯಗಳಿಂದ 206 ವಿಕೆಟ್ ಕೆಡವಿದ್ದಾರೆ. ಭಾರತವನ್ನು 12 ಏಕದಿನ ಪಂದ್ಯಗಳಲ್ಲೂ ಪ್ರತಿನಿಧಿಸಿದ್ದಾರೆ.
ಇದನ್ನೂ ಓದಿ:ಬಾಂಗ್ಲಾದೇಶ ಪ್ರವಾಸಕ್ಕೆ ವಿಂಡೀಸ್ ಆಟಗಾರರ ಹಿಂದೇಟು! ಪ್ರಮುಖ ಆಟಗಾರರ ಗೈರು!
ತಂಡ ಸಿಡ್ನಿ ತಲುಪಿದ ಬಳಿಕ ಕೋಚ್ ರವಿಶಾಸ್ತ್ರಿ, ಉಸ್ತುವಾರಿ ನಾಯಕ ಅಜಿಂಕ್ಯ ರಹಾನೆ ಮತ್ತು ಬೌಲಿಂಗ್ ಕೋಚ್ ಭರತ್ ಅರುಣ್ ಸೇರಿಕೊಂಡು ಅಂತಿಮ ತೀರ್ಮಾನಕ್ಕೆ ಬರಲಿದ್ದಾರೆ.
ಇದೇ ವೇಳೆ ಗಾಯಾಳು ಉಮೇಶ್ ಯಾದವ್ ಭಾರತಕ್ಕೆ ಮರಳಿ ಬೆಂಗಳೂರಿನ ಎನ್‌ಸಿಎಯಲ್ಲಿ ಪುನಶ್ಚೇತನ ಪ್ರಕ್ರಿಯೆಯಲ್ಲಿ ತೊಡಗಲಿದ್ದಾರೆ.