ಬೆಂಗಳೂರು: ಶರಾವತಿ ಸಂತ್ರಸ್ತರಿಗೆ ನೀಡಿದ ಜಾಗವನ್ನು ಯಾವುದೇ ಕಾರಣಕ್ಕೂ ಸರಕಾರ ಮರಳಿ ವಶಪಡಿಸಿಕೊಳ್ಳುವುದಿಲ್ಲ. ಈ ಸಂಬಂಧ 15 ದಿನದೊಳಗಾಗಿ ಕೇಂದ್ರ ಸರ್ಕಾರಕ್ಕೆ ಕಡತ ರವಾನಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.
ಶರಾವತಿ ಸಂತ್ರಸ್ತರಿಗೆ ಮತ್ತೆ ಸಂತ್ರಸ್ತ ಎದುರಾಗುವ ಅಪಾಯದ ಬಗ್ಗೆ ಶೂನ್ಯವೇಳೆಯಲ್ಲಿ ಬಿಜೆಪಿ ಶಾಸಕ ಹರತಾಳ ಹಾಲಪ್ಪ ಪ್ರಸ್ತಾಪಿಸಿದಾಗ ಉತ್ತರಿಸಿದ ಮಾಧುಸ್ವಾಮಿ, ಅರಣ್ಯ ಸಂರಕ್ಷಣಾ ಕಾಯಿದೆ ಪ್ರಕಾರ ಅರಣ್ಯಭೂಮಿಯನ್ನು ಡಿನೋಟಿಫೈ ಮಾಡುವುದಕ್ಕೆ ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ ಎಂದು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾದ ಹಿನ್ನೆಲೆಯಲ್ಲಿ ನಿಮಗೆ ಅಧಿಕಾರ ಇಲ್ಲ ಎಂದು ಹೈಕೋರ್ಟ್ ಹೇಳಿದೆ.
ಆದರೆ ಕೇಂದ್ರ ಸರ್ಕಾರಕ್ಕೆ ಡಿನೋಟಿಫೈ ಮಾಡುವ ಅಧಿಕಾರ ಇದೆ. ಈ ಹಿನ್ನೆಲೆಯಲ್ಲಿ ನಾವು ಕೇಂದ್ರಕ್ಕೆ ಸಂಬಂಧಪಟ್ಟ ಕಡತವನ್ನು ಸದ್ಯದಲ್ಲೇ ರವಾನೆ ಮಾಡುತ್ತೇವೆ. ಶರಾವತಿ ಸಂತ್ರಸ್ತರು ಬದುಕು ಕಟ್ಟಿಕೊಂಡ ಪ್ರದೇಶವನ್ನು ಖುಲ್ಲಾ ಮಾಡುವ ಪ್ರಶ್ನೆ ಉದ್ಭವಿಸುವುದಿಲ್ಲ. ರಾಜ್ಯ ಸರ್ಕಾರ ನಿರಾಶ್ರಿತರಿಗೆ ಪರಿಹಾರ ಕಲ್ಪಿಸುವುದಕ್ಕೆ ಬದ್ಧವಿದೆ ಎಂದು ಹೇಳಿದರು.
ಇಡಿ ರಾಜ್ಯಕ್ಕೆ ಬೆಳಕು ನೀಡುವುದಕ್ಕಾಗಿ ಶರಾವತಿ ಸಂತ್ರಸ್ತರು ಬದುಕು ಕಳೆದುಕೊಂಡಿದ್ದಾರೆ. ರೈತರನ್ನು ಮತ್ತೆ ರಸ್ತೆ ಮೇಲೆ ಹಾಕುವುದು ಬೇಡ. 60 ವರ್ಷದಿಂದ ಅಲ್ಲಿನವರ ಬದುಕು ಅತಂತ್ರವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಇದಕ್ಕೆ ಶಾಸಕ ಕುಮಾರ್ ಬಂಗಾರಪ್ಪ ಧನಿಗೂಡಿಸಿದರು.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಶಿವಮೊಗ್ಗಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಭರವಸೆ ನೀಡಿದ್ದಾರೆ. ಹೀಗಾಗಿ ತಕ್ಷಣ ಕೇಂದ್ರಕ್ಕೆ ಪ್ರಸ್ತಾಪ ಕಳುಹಿಸಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.