ಬೆಂಗಳೂರು: ಗದಗ ಜಿಲ್ಲೆಯ ಕಪ್ಪತಗುಡ್ಡ ವನ್ಯಜೀವಿಧಾಮ ಮಾತ್ರವಲ್ಲ ” ಶರಾವತಿ ಸಿಂಗಳೀಕ ವನ್ಯಜೀವಿಧಾಮ”ದ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯನ್ನೂ ಇಳಿಕೆ ಮಾಡಲು ರಾಜ್ಯ ಸರಕಾರ ತೀರ್ಮಾನಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಇದನ್ನೂ ಓದಿ:ಮಂಡ್ಯದಲ್ಲಿ ಭಾರಿ ಮಳೆ: ಶಾಲೆಗಳಿಗೆ ರಜೆ ಘೋಷಣೆ; ಬೆಂಗಳೂರು-ಮೈಸೂರು ಹೆದ್ದಾರಿ ಬಂದ್
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲೇ ಈ ನಿರ್ಣಯ ತೆಗೆದುಕೊಳ್ಳಲಾಗಿದ್ದು, ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದ ವನ್ಯಜೀವಿ ಮಂಡಳಿ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಗಲಿದೆ ಎಂದು ತಿಳಿದು ಬಂದಿದೆ.
ಪರಿಸರ ಸೂಕ್ಷ್ಮ ವಲಯದ ಮಿತಿಯನ್ನು 10 ಕಿಮೀ ನಿಂದ 1 ಕಿಲೋ ಮೀಟರ್ ಗೆ ಇಳಿಕೆ ಮಾಡಲು ರಾಜ್ಯ ಸರಕಾರ ನಿರ್ಧರಿಸಿದೆ. ಹತ್ತು ಕಿಮೀ ವರೆಗಿನ ಪ್ರದೇಶವನ್ನು ಡೀಮ್ಡ್ ಅರಣ್ಯ ಎಂದೇ ಪರಿಗಣಿಸಬೇಕೆಂದು ಸುಪ್ರೀಂಕೋರ್ಟ್ ನಿರ್ದೇಶನವಿದ್ದರೂ ಸರಕಾರ ಈ ತೀರ್ಮಾನಕ್ಕೆ ಬಂದಿರುವುದು ಕುತೂಹಲ ಮೂಡಿಸಿದೆ.
ಲಿಂಗನಮಕ್ಕಿ ಜಲಾಶಯವೂ ಸೇರಿದಂತೆ ಸುಮಾರು 431.23 ಚದರ ಕಿಮೀ ವ್ಯಾಪ್ತಿ ಪ್ರದೇಶದ ಈ ವನ್ಯಜೀವಿಧಾಮದ ವ್ಯಾಪ್ತಿಯಲ್ಲಿ ಬರುತ್ತದೆ. ಸಿಂಗಳೀಕ ಹಾಗೂ ಅಪರೂಪಕ್ಕೆ ಕಾಣಸಿಗುವ ಬ್ಲ್ಯಾಕ್ ಪ್ಯಾಂಥರ್ಸ್ ಇದರ ಮುಖ್ಯ ಆಕರ್ಷಣೆಯಾಗಿದ್ದು, ಔಷಧೀಯ ಗಿಡಮೂಲಿಕೆಗಳು, ಹುಲಿ ,ಚಿರತೆ, ನರಿ, ಕಾಡುನಾಯಿ, ಕಾಳಿಂಗ ಸರ್ಪ, ಭಾರಿ ಗಾತ್ರದ ಉಡ, ಮುಳ್ಳುಹಂದಿ, ಮುಂಗುಸಿ ಹಾಗೂ ನಾನಾ ಜಾತಿಯ ಕೋತಿಗಳು ಇಲ್ಲಿವೆ.
ಮಲೆನಾಡಿನಲ್ಲಿ ಈಗಾಗಲೇ ಕೋತಿಗಳು ಹಳ್ಳಿಗಳಿಗೆ ಬಂದು ಉಪದ್ರವ ನೀಡುತ್ತಿವೆ. ಈ ಹಂತದಲ್ಲಿ ಶರಾವತಿ ವನ್ಯಜೀವಿಧಾಮದ ಪರಿಸರ ಸೂಕ್ಷ್ಮವಲಯವನ್ನು ಕುಗ್ಗಿಸಿ, ಅಲ್ಲಿ ಗಣಿಗಾರಿಕೆ ಹಾಗೂ ಇನ್ನಿತರ ಅಭಿವೃದ್ಧಿ ಚಟುವಟಿಕೆಗೆ ಅವಕಾಶ ನೀಡಿದರೆ ಪರಿಸರ ಸಮತೋಲನ ತಪ್ಪಬಹುದು ಎಂಬ ಆತಂಕ ವ್ಯಕ್ತವಾಗಿದೆ.