ಸಾಗರ: ಏಪ್ರಿಲ್ 11ರಂದು ಸಂಜೆ 6-40ರಿಂದ 20 ನಿಮಿಷಗಳ ಕಾಲ ದೇಶದ 1008 ಕ್ಕೂ ಹೆಚ್ಚು ಸ್ಥಳಗಳಲ್ಲಿ 10 ಲಕ್ಷಕ್ಕೂ ಅಧಿಕ ಜನರು ಶರಾವತಿ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಆ ದಿನ ಶರಾವತಿ ನದಿ ನೀರು ಬಳಸುವ ಎಲ್ಲರೂ ತಮ್ಮ ಮನೆಗಳಲ್ಲಿ ಜಲಪೂಜೆ ಮಾಡುವ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಬೇಕು ಎಂದು ವನಶ್ರೀ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಎಚ್.ಪಿ.ಮಂಜಪ್ಪ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶರಾವತಿ ಉಗಮ ಸ್ಥಳವಾದ ಅಂಬುತೀರ್ಥದಿಂದ ಹೊನ್ನಾವರದವರೆಗೂ ಶರಾವತಿ ನದಿಯ ಎರಡೂ ದಡದಲ್ಲಿ ಶರಾವತಿ ನದಿಗೆ ಆರತಿ ಬೆಳಗಿ, ಶರಾವತಿ ನದಿ ಸೇರಿದಂತೆ ಜೀವಜಲ, ಪರಿಸರವನ್ನು ಉಳಿಸಿಕೊಳ್ಳುವ ಪ್ರತಿಜ್ಞಾವಿಧಿ ಕೈಗೊಳ್ಳುವ ವಿಶೇಷ ಕಾರ್ಯಕ್ರಮವನ್ನು ವನಶ್ರೀ ಟ್ರಸ್ಟ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ ಎಂದರು.
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಶರಾವತಿ ನದಿ ನೀರಿನ ಕಲಶವನ್ನು ಸ್ವೀಕರಿಸಲಿದ್ದಾರೆ. ಇದರ ಜೊತೆಗೆ ಬಿಹಾರದ ಸೀತಾಮುಡಿ, ನೇಪಾಳದ ಜಾನಕಪುರಿ, ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶರಾವತಿ ನೀರಿನ ಕಲಶ ಸ್ವೀಕರಿಸಲಿದ್ದಾರೆ. ಪೂಜಿಸಿದ ಶರಾವತಿ ನದಿ ನೀರನ್ನು ಅಯೋಧ್ಯೆಯಲ್ಲಿ ನಿರ್ಮಿಸುತ್ತಿರುವ ರಾಮಮಂದಿರಕ್ಕೆ ಕಳಿಸಿಕೊಡಲಾಗುತ್ತದೆ. ಈ ನಿಟ್ಟಿನಲ್ಲಿ ಅಂಬುತೀರ್ಥದಿಂದ ಜಲವನ್ನು ಸಂಗ್ರಹಿಸಿ ಅಲ್ಲಲ್ಲಿ ವಿತರಣೆ ಮಾಡುವ ಕೆಲಸ ನಮ್ಮ ತಂಡ ಯಶಸ್ವಿಯಾಗಿ ಮಾಡಿದೆ ಎಂದರು.
ಸಾಗರ ಕ್ಷೇತ್ರದ ರಾಮಚಂದ್ರಪುರ ಮಠದಲ್ಲಿ ರಾಘವೇಶ್ವರ ಭಾರತಿ ಸ್ವಾಮಿಗಳು, ಪಟಗುಪ್ಪೆ ಸೇತುವೆ ಮೇಲೆ ಶಾಸಕ ಹಾಲಪ್ಪ ಹರತಾಳು, ಸಿಗಂದೂರಿನ ಒಂದು ದಡದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಇನ್ನೊಂದು ದಡದಲ್ಲಿ ಸಚಿವ ಅಂಗಾರ, ಹೊಳೆಬಾಗಿಲಿನಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಗೆಣಸಿನಕುಣಿಯಲ್ಲಿ ಮುರುಘಾಶ್ರೀಗಳು, ಕೆಳದಿ ಶ್ರೀಗಳು ಮತ್ತು ಕೂಡ್ಲಿಮಠ ಶ್ರೀಗಳು ಶರಾವತಿ ನೀರಿನ ಕಲಶವನ್ನು ಸ್ವೀಕರಿಸಿ ಪೂಜೆ ಸಲ್ಲಿಸಲಿದ್ದಾರೆ ಎಂದರು.
ಸಾಗರ ತಾಲೂಕಿನ ತುಂಬೆಯಲ್ಲಿ ಸೂರಗುಪ್ಪೆ ಶ್ರೀಗಳು, ಬಚ್ಚಗಾರಿನಲ್ಲಿ ವಿಧಾನ ಪರಿಷತ್ ಶಾಸಕ ಆಯನೂರು ಮಂಜುನಾಥ್, ಕಾರ್ಗಲ್ ಚೈನಾಗೇಟ್ ಬಳಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಕಾಂತೇಶ್ ಕೆ.ಈ., ಜೋಗದಲ್ಲಿ ಇಂಧನ ಸಚಿವ ಸುನೀಲ್ ಕುಮಾರ್, ಸೀತಾಕಟ್ಟೆ ಬ್ರಿಡ್ಜ್ ಮೇಲೆ ಮಾಜಿ ವಿಧಾನ ಪರಿಷತ್ ಸಭಾಧ್ಯಕ್ಷ ಡಿ.ಎಸ್.ಶಂಕರಮೂರ್ತಿ, ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಬಂಗಾರಮಕ್ಕಿಯಲ್ಲಿ ಮಾರುತಿ ಗುರೂಜಿ, ಕೇಶವ್ ಹೆಗಡೆ, ಹೊನ್ನಾವರ ಸೇತುವೆ ಬಳಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಶರಾವತಿ ನದಿ ನೀರಿನ ಕಲಶ ಪಡೆದು ಶರಾವತಿ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.