Advertisement
ಸಾಧನೆಯ ಮೆಟ್ಟಿಲು..ವಿವೇಕಾನಂದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಥಮಿಕ, ಪ್ರೌಢ, ಪದವಿಪೂರ್ವ ಶಿಕ್ಷಣ ಬಳಿಕ ಮೈಸೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್‌ನಲ್ಲಿ ಶರತ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಸೇನೆಗೆ ಸೇರುವ ಉದ್ದೇಶದಿಂದ ಪಿಯುಸಿ ಯಲ್ಲಿದ್ದಾಗಲೇ ಪರೀಕ್ಷೆ ಎದುರಿಸಿದ್ದರು, ಅದು ಫಲಕಾರಿಯಾಗಲಿಲ್ಲ. ಆದರೆ ಛಲ ಬಿಡಲಿಲ್ಲ!
ಸುಳ್ಯ ತಾ| ಕೂತ್ಕುಂಜ ಗ್ರಾಮದ ಬೇರ್ಯ ಪಟೇಲ ಮನೆತನದ ಶರತ್ ಅವರ ತಂದೆ ಮಾಧವ ಬಿ.ಕೆ. ನಿವೃತ್ತ ಸೈನಿಕರು, ನಿವೃತ್ತ ಯುವಜನ ಸೇವೆ ಹಾಗೂ ಕ್ರೀಡಾಧಿಕಾರಿ. ಸೇನೆಯ ರಾಷ್ಟ್ರೀಯ ಮಟ್ಟದ ಕಬಡ್ಡಿ ತರಬೇತುದಾರರು. ತಾಯಿ ಲೀಲಾವತಿ. ಅಕ್ಕ ಬಿ.ಎಂ. ಶ್ರುತಿ, ಬಿಇ, ಎಂಬಿಎ ಪದವೀಧರೆ. ಕ್ಯಾಪ್‌ಜೆಮಿನಿ ಕಂಪೆನಿಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿದ್ದಾರೆ. ಚಿಕ್ಕಂದಿನಲ್ಲೇ ಕ್ರೀಡೆ ಬಗ್ಗೆ ಒಲವು ಹೊಂದಿದ್ದ ಶರತ್‌ಗೆ ಸೇನೆಯಲ್ಲಿ ಅಗತ್ಯವಾದ ಫಿಟ್ನೆಸ್, ಸಂದರ್ಶನ ಎದುರಿಸುವ ಮಾನಸಿಕತೆ, ದೇಶಭಕ್ತಿಯ ಪರಿಸರ ಮನೆಯಿಂದಲೇ ದೊರಕಿತು.
Related Articles
ರಾತ್ರಿ ಹಗಲಿನ ಪರಿವೆ ಇಲ್ಲದೇ, ದೇಶಕ್ಕಾಗಿ ಸಮರ್ಪಣಾ ಭಾವದಿಂದ ಕೆಲಸ ಮಾಡುತ್ತಿದ್ದೇವೆ. ಯಾರ ಕಣ್ಣಿಗೂ ಕಾಣದಂತೆ ನಮ್ಮ ಕೆಲಸ ಇದ್ದರೂ, ಕೆಲಸದ ಬಗ್ಗೆ ಸಾರ್ಥಕಭಾವ ನಮಗಿದೆ. ಇಲ್ಲಿನ ಶಿಸ್ತು, ಅಚ್ಚುಕಟ್ಟುತನ ನಮ್ಮನ್ನು ಎಚ್ಚರಿಕೆಯಿಂದ ಇರಿಸುತ್ತವೆ. ತಂದೆಯವರ ಕೆಲಸದಲ್ಲಿದ್ದ ಅಚ್ಚುಕಟ್ಟುತನ ನನಗೆ ಸ್ಫೂರ್ತಿ ನೀಡಿದ್ದು, ಸೇನೆ ಸೇರಲು ಕಾರಣವಾಯಿತು. ವಾಯುಪಡೆಯ ಆಧುನಿಕ ತಂತ್ರಜ್ಞಾನ ಗಳು ನನ್ನನ್ನು ಬಹುವಾಗಿ ಆಕರ್ಷಿಸಿದ್ದರಿಂದ ಅದನ್ನೇ ಆಯ್ದುಕೊಂಡೆ. ಇಲ್ಲಿ ವೃತ್ತಿಪರರಂತೆ ಇಷ್ಟೇ ಹೊತ್ತು ಕೆಲಸ ಮಾಡುತ್ತೇನೆ ಎನ್ನುವಂತಿಲ್ಲ. ನಮ್ಮಲ್ಲಿ ಅಂತರ್ಗತವಾಗಿ ಬೆಳವಣಿಗೆಯ ದೃಷ್ಟಿಕೋನವಿದ್ದು, ಅದನ್ನು ದೇಶಕ್ಕೆ ಸಮರ್ಪಿಸಬೇಕು ಎನ್ನುತ್ತಾರೆ ಶರತ್.
Advertisement
ಪ್ರಶಸ್ತಿಯ ಗರಿಉತ್ತಮ ಕರ್ತವ್ಯ ನಿರ್ವಹಣೆಗಾಗಿ ಪ್ಲೈಟ್ ಲೆಫ್ಟಿನೆಂಟ್ ಶರತ್ ಬಿ.ಎಂ. ಅವರು ಈ ವರ್ಷದ ಏರ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಗಣರಾಜ್ಯೋತ್ಸವ ದಿನದಂದು ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪಠಾಣ್‌ಕೋಟ್ ಉಗ್ರರ ಉಡೀಸ್‌ಗೆ ನೆರವು ನೀಡಿತ್ತು ಶರತ್ ತಂಡ !
2016 ಜ.2ರಂದು ಪಂಜಾಬ್‌ನ ಪಠಾಣ್‌ಕೋಟ್ ವಾಯುನೆಲೆಗೆ ಉಗ್ರರು ದಾಳಿ ಮಾಡಿದ್ದು, 17 ಗಂಟೆ ಸತತ ಹೋರಾಟ ಬಳಿಕ ಅವರನ್ನು ಸದೆಬಡಿದಿದ್ದು ಗೊತ್ತೇ ಇದೆ. ಈ ಯಶಸ್ವಿ ಕಾರ್ಯಾಚರಣೆ ಹಿಂದೆ ಶರತ್ ಅವರ ತಂಡ ಕೆಲಸ ಮಾಡಿದೆ. ಜೈಸಲ್ಮೇರ್‌ನಲ್ಲಿದ್ದ ಶರತ್ ಅವರ ತಂಡವನ್ನು ದಾಳಿಕೋರರ ಚಲನವಲನ ವೀಕ್ಷಣೆಗೆ ಕರೆಸಲಾಗಿತ್ತು. ಡ್ರೋನ್‌ಗಳ ಮೂಲಕ ತಂಡ ಕಣ್ಣಿಟ್ಟಿದ್ದು, ಕ್ಷಣಕ್ಷಣದ ಮಾಹಿತಿಯನ್ನು ಕಾರ್ಯಾಚರಣೆ ವಿಭಾಗಕ್ಕೆ ಕಳಿಸುತ್ತಿದ್ದರು. ಅತಿ ದೂರದಿಂದಲೇ ವಿಮಾನವನ್ನು ನಿಯಂತ್ರಿಸುತ್ತ, ಕಮಾಂಡೋಗಳಿಗೆ ಮಾಹಿತಿ ನೀಡುತ್ತ ಸಹಾಯ ಮಾಡಿದ್ದು ನಿಜಕ್ಕೂ ರೋಚಕ. ಡ್ರೋನ್ ವಿಮಾನ ಮೂಲಕ ಪ್ರತಿಯೊಬ್ಬ ಉಗ್ರರನ್ನೂ ಪತ್ತೆಹಚ್ಚಲಾಗಿದ್ದು, ಪೂರಕ ಕಾರ್ಯಾಚರಣೆ ನಡೆಸಿ ಕಮಾಂಡೋಗಳು ಉಗ್ರರನ್ನು ಉಡೀಸ್ ಮಾಡಿದ್ದರು! ಶರತ್ ಪ್ರಾಮಾಣಿಕ, ಶ್ರಮಜೀವಿ. ಆದ್ದರಿಂದಲೇ ವಾಯುಸೇನೆಗೆ ಸೇರಲು ಸಾಧ್ಯವಾಯಿತು.ಛಲದಿಂದ ಕೆಲಸ ಮಾಡಿದ ಪರಿಣಾಮ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾನೆ.
-ಮಾಧವ ಬಿ.ಕೆ. (ಶರತ್ ತಂದೆ) ಸದೃಢತೆ ಅಗತ್ಯ
ನನ್ನ ಈಗಿನ ಕೆಲಸ ಮಾನವರಹಿತ ವೈಮಾನಿಕ ವಿಭಾಗದಲ್ಲಿದೆ. ಹಾಗೆಂದು ಕಚೇರಿಯೊಳಗಿನ ಕೆಲಸವಲ್ಲ. ದೈಹಿಕ ಕ್ಷಮತೆ, ಮಾನಸಿಕ ದೃಢತೆ ಅಗತ್ಯ. ಚಳಿಗಾಲದಲ್ಲಿ -20 ಡಿಗ್ರಿ, ಬೇಸಿಗೆಯಲ್ಲಿ 50 ಡಿಗ್ರಿ ಉಷ್ಣತೆಯಲ್ಲಿ ಕೆಲಸ ಮಾಡುವ ಸದೃಢತೆ ಹೊಂದಿರಬೇಕು. ವಿರೋಧಿಗಳನ್ನು ಅಚ್ಚರಿಗೊಳಿಸುವಂತೆ ಮಾಡಿ ಜಯಶಾಲಿಯಾಗುವುದೇ ವಾಯುಸೇನೆ ಕೆಲಸ
-ಫ್ಲೈ|ಲೆ| ಶರತ್ – ಗಣೇಶ್ ಎನ್. ಕಲ್ಲರ್ಪೆ ►ಯೋಧ ನಮನ 1►ಕ್ಯಾಪ್ಟನ್ ರಾಧೇಶ್‌ಗೆ ಅಣ್ಣನೇ ಸ್ಫೂರ್ತಿ: //bit.ly/2noe3R ಈ ಸರಣಿಯ ಮೂಲ ಉದ್ದೇಶ ಯುವಜನರಲ್ಲಿ ಮತ್ತು ನಾಗರಿಕರಲ್ಲಿ ಸೇನೆ ಕುರಿತು ಅರಿವು ಹಾಗೂ ಸದಭಿಪ್ರಾಯ ಮೂಡಿಸುವುದು. ಅದರಲ್ಲೂ ಯುವಜನರಿಗೆ ಸ್ಫೂರ್ತಿ ತುಂಬುವುದು. ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರ ಒಲವೂ ಸೇನೆಯ ಕಡೆಗೆ ಹೆಚ್ಚುತ್ತಿದೆ. ಯುವಜನರೂ ಹೆಚ್ಚಿನ ಒಲವು ತೋರುತ್ತಿದ್ದಾರೆ. ಆದ ಕಾರಣ, ನಮ್ಮ ಊರಿನ ಸೈನಿಕರನ್ನು ಎಲ್ಲರಿಗೂ ಪರಿಚಯಿಸುವುದು ಈ ಸರಣಿಯ ಧ್ಯೇಯ. ನಿಮ್ಮ ಊರಿನಲ್ಲೂ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವವರ ಬಗ್ಗೆ ಮಾಹಿತಿ ಇದ್ದರೆ ನಮ್ಮ ವಾಟ್ಸಪ್‌ಗೆ ತಿಳಿಸಬಹುದು. ಹೆಸರು, ಊರು ಹಾಗೂ ಸಂಪರ್ಕ ಸಂಖ್ಯೆ ಕಡ್ಡಾಯವಾಗಿ ನಮ್ಮೊಂದಿಗೆ ಹಂಚಿಕೊಳ್ಳಿ. ನಮ್ಮ ವಾಟ್ಸಪ್ ಸಂಖ್ಯೆ 7618774529