ಬೆಂಗಳೂರು: ಪಕ್ಷದ ನಾಯಕರ ಮನವಿಗೆ ಸ್ಪಂದಿಸದೇ ಹೊಸಕೋಟೆ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಬಿಜೆಪಿ ಸಂಸದ ಬಿ.ಎನ್. ಬಚ್ಚೇಗೌಡರ ಪುತ್ರ ಶರತ್ ಬಚ್ಚೇಗೌಡ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಭಾನುವಾರ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಶರತ್ ಬಚ್ಚೇಗೌಡರನ್ನು ಪಕ್ಷದಿಂದ ಹೊರ ಹಾಕಿದ್ದೇವೆ. ಅವರ ನಿಗಮ ಮಂಡಳಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ್ದೇವೆ. ಎಂಟಿಬಿ ನಾಗರಾಜ್ ರಾಜೀನಾಮೆ ಕೊಟ್ಟ 17 ಶಾಸಕರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರಂತಹ ಪ್ರಾಮಾಣಿಕ ವ್ಯಕ್ತಿ ಮತ್ತೂಬ್ಬರಿಲ್ಲ. ಅವರ ವಿರುದ್ಧ ಕಾಂಗ್ರೆಸ್‌ನವರು ಏನೇನೋ ಆರೋಪ ಮಾಡುತ್ತಿದ್ದಾರೆ. ಅಲ್ಲಿ ಎಂಟಿಬಿ ನಾಗರಾಜ್ ಗೆಲ್ಲುವುದು ನೂರಕ್ಕೆ ನೂರು ಸತ್ಯ ಎಂದರು.
ಸೋಮವಾರ ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಆ ಕಾರ್ಯಕ್ರಮದಲ್ಲಿ ನಾನೂ ಪಾಲ್ಗೊಳ್ಳುತ್ತೇನೆ. ಉಳಿದ ಎಲ್ಲ ಕ್ಷೇತ್ರಗಳಲ್ಲಿಯೂ ಪ್ರವಾಸ ಮಾಡುತ್ತೇನೆ. ಅನರ್ಹರನ್ನು ಸೋಲಿಸುವ ಬಗ್ಗೆ ಕಾಂಗ್ರೆಸ್‌ನವರು ಮಾತನಾಡುತ್ತಿದ್ದಾರೆ. ಆ ಬಗ್ಗೆ ನಾನು ಟೀಕೆ ಮಾಡುವುದಿಲ್ಲ. ಜನರು ಅದಕ್ಕೆ ಉತ್ತರ ಕೊಡುತ್ತಾರೆ ಎಂದರು.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕೆಂಬ ಆಕಾಂಕ್ಷೆ 15 ಕ್ಷೇತ್ರಗಳ ಜನರಿಗಿದೆ. ರಾಜ್ಯದ ಅಭಿವೃದ್ಧಿ ಆಗುವ ಅಪೇಕ್ಷೆ ಜನರಿಗಿದ್ದರೆ, ಖಂಡಿತವಾಗಿಯೂ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಾರೆ. ನನಗಾಗಿ ತ್ಯಾಗ ಮಾಡಿರುವ ಅನರ್ಹ ಶಾಸಕರನ್ನು ಗೆಲ್ಲಿಸುವಂತೆ ರಾಜ್ಯದ ಜನತೆಯಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದರು.
ಇದೇ ವೇಳೆ, ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡಿರುವುದನ್ನು ಖಂಡಿಸಿದ ಅವರು, ಕಾಂಗ್ರೆಸ್ ದೂರಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಸಿದ್ದರಾಮಯ್ಯ ಕಂಪನಿಗೆ ದೂರು ನೀಡುವುದನ್ನು ಬಿಟ್ಟರೆ ಬೇರೆ ಕೆಲಸ ಇಲ್ಲ. ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳು ಗೆದ್ದರೆ ಮಂತ್ರಿ ಮಾಡುತ್ತೇವೆ ಎನ್ನುವುದರಲ್ಲಿ ಅಪರಾಧ ಏನಿದೆ ? ನೂರಕ್ಕೆ ನೂರು ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ. ನೂರಕ್ಕೆ ನೂರು ಅವರನ್ನು ಮಂತ್ರಿಗಳನ್ನಾಗಿ ಮಾಡುತ್ತೇವೆ. ಇದಕ್ಕೆ ಚುನಾವಣಾ ಆಯೋಗ ಅಡ್ಡಿ ಮಾಡಲು ಆಗುವುದಿಲ್ಲ ಎಂದು ಹೇಳಿದರು.