Advertisement

ಟೆನಿಸ್‌ಗೆ ಮತ್ತೆ ಮರಳಿದ್ದಾರೆ ಶರಪೋವಾ

11:40 AM Apr 29, 2017 | |

ಟೆನಿಸ್‌ ಲೋಕದ ಸುಂದರಿ ರಷ್ಯಾದ ಮರಿಯಾ ಶರಪೋವಾ ಮತ್ತೆ ಟೆನಿಸ್‌ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಅದು ಬರೋಬ್ಬರಿ 15 ತಿಂಗಳ ನಂತರ. ಕಳೆದ ವರ್ಷ ಶರಪೋವಾ ಉದ್ದೀಪನ ಸೇವನೆ ಪ್ರಕರಣದಲ್ಲಿ ಸಿಕ್ಕಿಬಿದ್ದು 15 ತಿಂಗಳು ಟೆನಿಸ್‌ನಿಂದ ದೂರವಾಗಿದ್ದರು. ಸದ್ಯ ಅವರ ಮೇಲಿನ ನಿಷೇಧದ ಅವಧಿ ಏ.25ಕ್ಕೆ ಮುಕ್ತಾಯವಾಗಿದೆ. ಈಗ ಶರಪೋವಾ ಮತ್ತೆ ಸ್ಪರ್ಧಾ ಕಣಕ್ಕೆ ಪ್ರವೇಶಿಸಿದ್ದಾರೆ. ಸ್ಟಟ್‌ಗರ್ಟ್‌ ಟೆನಿಸ್‌ನಲ್ಲಿ ಅವರು ಮೊದಲ ಅಗ್ನಿಪರೀಕ್ಷೆ ಎದುರಿಸಿದ್ದಾರೆ. ಈ ನಡುವೆ ಶರಪೋವಾ ಟೆನಿಸ್‌ಗೆ ಮತ್ತೆ ಮರಳುವ ಕುರಿತು ಟೆನಿಸ್‌ ಲೋಕದಲ್ಲೇ ಪರ ಮತ್ತು ವಿರೋಧದ ಅಲೆ ಎದ್ದಿದೆ. ಕೆಲವರು ಶರಪೋವಾ ಮರಳುವುದಕ್ಕೆ ಬೆಂಬಲ ಸೂಚಿಸಿದರೆ ಮತ್ತೆ ಕೆಲವರು ಅಪಸ್ವರ ಎತ್ತಿದ್ದಾರೆ. 

Advertisement

ಯಾರಿವರು ಶರಪೋವಾ?
ಶರಪೋವಾ ರಷ್ಯಾದವರು. ಸದ್ಯ ಅವರಿಗೆ 30 ವರ್ಷ. ಅವರು ಇದುವರೆಗೆ 5 ಸಿಂಗಲ್ಸ್‌ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿ ಗೆದ್ದಿದ್ದಾರೆ. 2008ರಲ್ಲಿ ಆಸ್ಟ್ರೇಲಿಯನ್‌ ಓಪನ್‌, 2012, 2014ರಲ್ಲಿ ಫ್ರೆಂಚ್‌ ಓಪನ್‌, 2014ರಲ್ಲಿ ವಿಂಬಲ್ಡನ್‌ ಓಪನ್‌ ಹಾಗೂ 2006ರಲ್ಲಿ ಯುಎಸ್‌ ಓಪನ್‌ ಪ್ರಶಸ್ತಿ ಗೆದ್ದಿದ್ದರು. 2012ರಲ್ಲಿ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.  

ಉದ್ದೀಪನ ಬಲೆಗೆ ಬಿದ್ದ ರಷ್ಯಾ ತಾರೆ
ಶರಪೋವಾ 2016ರಲ್ಲಿ ಉದ್ದೀಪನ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡರು.ಆಸ್ಟ್ರೇಲಿಯನ್‌ ಓಪನ್‌ ಕೂಟದ ವೇಳೆ ಇವರ ಪ್ರಕರಣ ಬಯಲಿಗೆ ಬಂದು ದೊಡ್ಡ ಸುದ್ದಿಯಾಗಿತ್ತು. ಮೆಲ್ಡೋನಿಯಂ ಎನ್ನುವ ಮಾದಕ ವಸ್ತುವನ್ನು ಸೇವಿಸಿದ್ದರು. ಇದು ದೃಢಪಟ್ಟಿದ್ದರಿಂದ  ಅವರನ್ನು ಅಂತಾರಾಷ್ಟ್ರೀಯ ಟೆನಿಸ್‌ ಸಂಸ್ಥೆ 2  ವರ್ಷ ನಿಷೇಧ ಮಾಡಿ ಆದೇಶ ಹೊರಡಿಸಿತ್ತು. ಮಾ.16ರಿಂದ ಅವರ ಮೇಲೆ ಈ ಕ್ರಮ ಅನ್ವಯಗೊಂಡಿತು. ಇದರ ವಿರುದ್ಧ ಶರಪೋವಾ ಮೇಲ್ಮನವಿ ಸಲ್ಲಿಸಿದ್ದರು. ಈ ವೇಳೆ ಅವರು ತಮ್ಮ ತಪ್ಪಿಲ್ಲ. ಉದ್ದೇಶಪೂರ್ವಕವಾಗಿ ಉದ್ದೀಪನ ಮದ್ದು ಸೇವಿಸಿಲ್ಲ ಎಂದು ನೋವು ತೋಡಿ ಕೊಂಡಿದ್ದರು. ಬಳಿಕ ಇವರ ಮೇಲಿನ ನಿಷೇಧವನ್ನು 15 ತಿಂಗಳಿಗೆ ಸೀಮಿತಗೊಳಿಸಿ ಅಂತಾರಾಷ್ಟ್ರೀಯ ಟೆನಿಸ್‌ ಸಂಸ್ಥೆ ಮರು ಆದೇಶ ಹೊರಡಿಸಿತು. 

ದಿಗ್ಗಜರ ವಿರೋಧ
ಟೆನಿಸ್‌ ಲೋಕದ ಖ್ಯಾತ ಆಟಗಾರರಾದ ಕ್ಯಾರೋಲಿನಾ ವೋಸ್ನಿಯಾಕಿ, ಡೊಮಿನಿಕಾ ಸಿಬುಲ್ಕೋವಾ, ಸಿಮೋನಾ ಹಾಲೆಪ್‌ ಸೇರಿದಂತೆ ಅನೇಕ ಟೆನಿಸ್‌ ಆಟಗಾರ್ತಿಯರು ಶರಪೋವಾ ಮತ್ತೆ ಟೆನಿಸ್‌ಗೆ ಆಗಮಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಕ್ಯಾರೋಲಿನಾ ಪ್ಲಿಸ್ಕೋವಾ, ಅಲಿಝ್ ಕಾರ್ನೆಟ್‌, ಕಿಮ್‌ ಕ್ಲಿಸ್ಟರ್ ಸೇರಿದಂತೆ ಹಲವರು ಮರಿಯಾ ಶರಪೋವಾ ಆಗಮನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next