Advertisement
ಸ್ಥಳ ಪುರಾಣ ಇಲ್ಲಿನ ಸ್ಥಳ ಪುರಾಣ ಈ ರೀತಿ ಇದೆ. ಹಿಂದೆ ತ್ರೇತ್ರಾಯುಗದ ಸಮಯದಲ್ಲಿ ರಾವಣನು ಶಿವನನ್ನು ಕುರಿತು ಘೋರ ತಪಸ್ಸನ್ನಾಚರಿಸುತ್ತಿದ್ದನು. ಅವನ ಭಕ್ತಿಗೆ ಮೆಚ್ಚಿ ಶಿವ ಪ್ರತ್ಯಕ್ಷನಾದಾಗ ರಾವಣನು ತನ್ನ ತಾಯಿಗೋಸ್ಕರ ಪೂಜಿಸಲು ಆತ್ಮಲಿಂಗವನ್ನು ಕೊಡುವಂತೆ ಶಿವನನ್ನು ಕೇಳಿಕೊಳ್ಳುತ್ತಾನೆ. ಆಗ ಶಿವ “ತಥಾಸ್ತು’ ಅನ್ನುತ್ತಾನೆ. ಇದರಿಂದ ಚಿಂತಿತರಾದ ದೇವತೆಗಳು ಆತ್ಮಲಿಂಗದ ಬಲದಿಂದ ರಾವಣನು ಇನ್ನಷ್ಟು ಪರಾಕ್ರಮಶಾಲಿಯಾಗಿ ತಮ್ಮನ್ನೆಲ್ಲಾ ಸೋಲಿಸಿಬಿಡುತ್ತಾನೆ ಎಂಬ ಭಯದಲ್ಲಿ ಅದನ್ನು ತಪ್ಪಿಸಲು ಗಣೇಶನ ಮೊರೆ ಹೋಗುತ್ತಾರೆ. ಆಗ ಗಣೇಶನು ಒಬ್ಬ ಬ್ರಾಹ್ಮಣ ಬಾಲಕನ ರೂಪ ತಾಳಿ ಈ ಕ್ಷೇತ್ರದಲ್ಲಿ ಬಂದು ನಿಲ್ಲುತ್ತಾನೆ. ರಾವಣನು ಕೈಲಾಸದಿಂದ ಆತ್ಮಲಿಂಗವನ್ನು ಪಡೆದುಕೊಂಡು ಇದೇ ಮಾರ್ಗವಾಗಿ ಲಂಕೆಗೆ ತೆರಳುತ್ತಿದ್ದಾಗ ದೇವತೆಗಳು ತಮ್ಮ ಪ್ರಭಾವದಿಂದ ಸೂರ್ಯನನ್ನು ಮರೆಮಾಚಿ ಸಂಜೆಯ ವಾತಾವರಣ ಸೃಷ್ಟಿ ಮಾಡುತ್ತಾರೆ. ಶಿವನ ಅನನ್ಯ ಭಕ್ತನಾಗಿದ್ದ ರಾವಣ ಸಂಧ್ಯಾವಂದನೆ ಮಾಡುವ ಸಮಯವಾಯಿತು ಎಂದು ಭಾವಿಸುತ್ತಾನೆ. ಸಂಧ್ಯಾವಂದನೆಗೂ ಮೊದಲು ಸ್ನಾನ ಮಾಡಿ ಬರಲು ಹೊರಡುವ ಮುನ್ನ, ಅಲ್ಲಿಯೇ ನಿಂತಿದ್ದ ಬಾಲಕನಿಗೆ ಆತ್ಮಲಿಂಗವನ್ನು ಹಿಡಿದುಕೊಳ್ಳಲು ಹೇಳಿ ಹೋಗುತ್ತಾನೆ. ಬಾಲಕನ ರೂಪದಲ್ಲಿದ್ದ ಗಣೇಶ ಮೂರು ಸಾರಿ ಕೂಗಿದಾಗ ನೀನು ಬರದಿದ್ದರೆ ಈ ಲಿಂಗವನ್ನು ಕೆಳಗಿಡುವುದಾಗಿ ಹೇಳಿಯೇ ಲಿಂಗವನ್ನು ಹಿಡಿದುಕೊಳ್ಳುತ್ತಾನೆ. ಸ್ವಲ್ಪ ಸಮಯದಲ್ಲಿಯೇ ಈ ಲಿಂಗ ತುಂಬಾ ಭಾರವಾಗಿದೆ. ನನಗೆ ಹಿಡಿದುಕೊಳ್ಳಲು ಕಷ್ಟವಾಗುತ್ತಿದೆ. ಬೇಗ ಬಂದು ತೆಗೆದುಕೋ ಎಂದು ಕೂಗಿಕೊಳ್ಳುತ್ತಾನೆ. ಆಗ ತಾನೆ ಎರಡು ಮುಳುಗು ಹಾಕಿದ್ದ ರಾವಣ, ಲಿಂಗವನ್ನು ನೆಲಕ್ಕಿಡಬೇಡ ಎಂದು ಜೋರಾಗಿ ಕೂಗಿ ಹೇಳಿ, ಅವಸರದಲ್ಲೇ ಮೂರನೇ ಬಾರಿ ಮುಳುಗು ಹಾಕಿ ಓಡೋಡಿ ಬರುತ್ತಾನೆ. ಆ ವೇಳೆಗೆ ಬಾಲಕನ ರೂಪದಲ್ಲಿದ್ದ ಗಣಪತಿ, ಶಿವನ ಆತ್ಮಲಿಂಗವನ್ನು ನೆಲಕ್ಕ ಇಟ್ಟು ಬಿಡುತ್ತಾನೆ. ಈ ಅನಿರೀಕ್ಷಿತ ಘಟನೆಯಿಂದ ದಿಗೂ¾ಢನಾದ ರಾವಣ, ಲಿಂಗವನ್ನು ಎತ್ತಲು ಸಾಕಷ್ಟು ಪ್ರಯತ್ನಿಸಿದರೂ ಲಿಂಗ ಮೇಲೇಳಲೇ ಇಲ್ಲ. ಇದರಿಂದ ಕೋಪಗೊಂಡ ರಾವಣ ಬಾಲಕನ ರೂಪದಲ್ಲಿದ್ದ ಗಣೇಶನ ತಲೆಯ ಮೇಲೆ ಜೋರಾಗಿ ಗುದ್ದುತ್ತಾನೆ. ಇನ್ನು ಏನಾದರೂ ಅನಾಹುತ ನಡೆಯುತ್ತದೆಂದು ಎಲ್ಲ ದೇವತೆಗಳೂ ಪ್ರಕಟಗೊಳ್ಳುತ್ತಾರೆ.ಆಗ ರಾವಣ ಇದೆಲ್ಲಾ ದೇವತೆಗಳೇ ಆಡಿದ ನಾಟಕವೆಂದು ತಿಳಿದು ದುಃಖೀತನಾಗುತ್ತಾನೆ.ಅಲ್ಲದೇ ತಾನು ಹೊಡೆದದ್ದು ಶಿವನ ಪುತ್ರನಾದ ಗಣೇಶನಿಗೆ ಎಂದು ತಿಳಿದು ಬೇಸರಗೊಂಡು ಹೊರಟುಹೋಗುತ್ತಾನೆ.ಆಗಿನಿಂದ ಇಲ್ಲಿಯೇ ಇದೇ ರೂಪದಲ್ಲಿ ನೆಲೆಸಿದ ಗಣೇಶನ ಈ ವಿಗ್ರಹ ಅಪರೂಪವಾಗಿದ್ದು ಎರಡು ಕೈಗಳನ್ನುಮಾತ್ರ ಹೊಂದಿದೆ. ಈ ವಿಗ್ರಹದ ತಲೆಯ ಮೇಲೆ ರಾವಣನು ಗುದ್ದಿದ ಕುರುಹೂ ಇದೆ.ಈ ದೇಗುಲ ಪುಟ್ಟದಾದರೂ ಇದರ ಐತಿಹ್ಯ ಬಹಳ ಸ್ವಾರಸ್ಯಕರವಾಗಿದೆ.ಬೇಡಿ ಬಂದ ಭಕ್ತರಿಗೆ ಎಲ್ಲವನ್ನೂ ಕರುಣಿಸುವ ಇತನಿಗೆ ಸಿದ್ಧ ಗಣಪತಿ ಎಂದು ಕರೆಯಲಾಗುತ್ತದೆ.
ದೇಶದ ನಾನಾ ಭಾಗಗಳಿಂದ ಮಹಾಬಲೇಶ್ವರಕ್ಕೆ ತಲುಪಲು ಸಾಕಷ್ಟು ಬಸ್, ರೈಲು ಸಂಪರ್ಕಗಳಿವೆ.ಇದಕ್ಕೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಗೋವಾದ ದಾಬೊಲಿಮ್ ವಿಮಾನ ನಿಲ್ದಾಣ.ಹತ್ತಿರದ ರೈಲು ನಿಲ್ದಾಣವೆಂದರೆ ಗೋಕರ್ಣದಿಂದ 20 ಕಿ.ಮೀ ಅಂತರದಲ್ಲಿರುವ ಅಂಕೋಲಾ. ಆಶಾ ಎಸ್. ಕುಲಕರ್ಣಿ