Advertisement

ಲಿಂಗಾಯತ ಹೋರಾಟಕ್ಕೆ ಕುತಂತ್ರಿಗಳ ಅಡ್ಡಿ 

04:28 PM May 20, 2018 | |

ಧಾರವಾಡ: ಲಿಂಗಾಯತ ಸ್ವತಂತ್ರ ಧರ್ಮ ಹೋರಾಟಕ್ಕೆ ಕೆಲವು ಕುತಂತ್ರಿಗಳು ಅಡ್ಡಿ ಮಾಡುತ್ತಿದ್ದಾರೆ ಎಂದು ಸಾಹಿತಿ ರಂಜಾನ್‌ ದರ್ಗಾ ಹೇಳಿದರು. ನಗರದ ಕವಿಸಂನಲ್ಲಿ ಜಗನ್ಮಾತಾ ಅಕ್ಕಮಹಾದೇವಿ ಅನುಭಾವ ಪೀಠದ ವತಿಯಿಂದ ಜರುಗಿದ ಶರಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ಎಲ್ಲಾ ಲಿಂಗಾಯತರು, ಬಸವಾಭಿಮಾನಿಗಳು ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮವೆಂದು ಒಪ್ಪಿದ್ದು, ಕೆಲವು ಕುತಂತ್ರಿಗಳಿಂದ ಹೋರಾಟಕ್ಕೆ ಅಡೆತಡೆಯಾಗುತ್ತಿದೆ ಅಷ್ಟೆ. ಕೆಲ ವೀರಶೈವವಾದಿಗಳು ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಅನಗತ್ಯ ಅಡಚಣೆ ಉಂಟು ಮಾಡುತ್ತಿರುವುದು ಖಂಡನೀಯ ಎಂದರು. 

ಕಾಯಕ ದಾಸೋಹ ಸಿದ್ಧಾಂತವನ್ನು ಜಗತ್ತಿಗೆ ನೀಡಿದ ಶ್ರೇಷ್ಠ ಧರ್ಮ ಲಿಂಗಾಯತ ಧರ್ಮವಾಗಿದೆ. 1831ರಿಂದ 1941ರ ವರೆಗಿನ ಎಲ್ಲ ರಾಷ್ಟ್ರೀಯ ಜನಗಣತಿಯಲ್ಲಿ ಲಿಂಗಾಯತ ಒಂದು ಸ್ವತಂತ್ರ ಧರ್ಮ ಎಂದು ದಾಖಲಾಗಿದೆ. ಸುಪ್ರೀಂ ಕೋರ್ಟ್‌ ಆದೇಶ, ಗೆಜೆಟ್‌ಗಳು, ಶಾಸನ ಹಾಗೂ ಸಮಕಾಲೀನ ವಚನಕಾರರ ಸಾಹಿತ್ಯದಿಂದ ಪಾಶ್ಚಿಮಾತ್ಯ ಹಾಗೂ ದೇಶದ ಶ್ರೇಷ್ಠ ಸಂಶೋಧಕರ ಅಭಿಮತಗಳಿಂದ ಲಿಂಗಾಯತವು ಸ್ವತಂತ್ರ ಧರ್ಮವೆಂದು ಸಿದ್ಧವಾಗಿದೆ. ಲಿಂಗಾಯತ ಧರ್ಮಕ್ಕೆ ಶಾಸನ ಬದ್ಧ, ಕಾನೂನಾತ್ಮಕ ಸಾಕ್ಷಿಗಳು, ಆಕರಗಳು, ದಾಖಲೆಗಳಿದ್ದು, ಅದು ಒಂದು ಪರಿಪೂರ್ಣ ಧರ್ಮವಾಗಿದೆ. ಶಿವಶರಣರು ಸ್ಥಾಪಿಸಿದ ಲಿಂಗಾಯತ ಧರ್ಮವು ಹಿಂದುಯೇತರ ಅವೈದಿಕ, ಪ್ರಗತಿಪರ, ವೈಚಾರಿಕ ಆಂದೋಲನದ ಧರ್ಮವಾಗಿದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ| ವಿಠ್ಠಲ  ಬೆಣಗಿ ಮಾತನಾಡಿ, ಸಮಾನತೆ ಸಾರಿದ ಹಾಗೂ ವೈದಿಕ ಸಂಪ್ರದಾಯ, ಮೂಢನಂಬಿಕೆ, ಕಂದಾಚಾರವನ್ನು ಕಿತ್ತೆಸೆದ ಬಸವಣ್ಣ ಒಬ್ಬ ಶ್ರೇಷ್ಠ ಸಾಹಿತ್ಯಿಕ ಕೃಷಿ ತಜ್ಞರಾಗಿದ್ದರು. ಸಾಹಿತ್ಯ ಕೃಷಿ ಕೂಡ ಅತ್ಯಂತ ಶ್ರೇಷ್ಠ ಸ್ಥಾನವನ್ನು ಹೊಂದಿದ್ದು, ಬಸವಾದಿ ಶರಣರು ಮಾಡಿದ ಅಕ್ಷರ ಕೃಷಿಯು ವಚನ ಸಾಹಿತ್ಯ ಬೆಳೆಯ ಮೂಲಕ ನಾಡಿಗೆ ಪರಿಚಯವಾಗಿದೆ. ಇಂತಹ ಶ್ರೇಷ್ಠ ಧರ್ಮವು ಎಲ್ಲಾ ಒಳಪಂಗಡಗಳನ್ನು ಒಟ್ಟಿಗೆ ಸೇರಿಸಿಕೊಂಡು ಮುನ್ನುಗ್ಗಿದೆ. ಕಾಯಕದ ಆಧಾರದ ಮೇರೆಗೆ ಬಂದ ಶರಣ ಸಂಕುಲವು ಉಪಜಾತಿಗಳಾದವೇ ಹೊರತು ಭಿನ್ನವಾಗಿಲ್ಲ. ಅವೆಲ್ಲವೂ ಲಿಂಗಾಯತ ಧರ್ಮದಡಿ ಇವೆ ಎಂದರು.

ಬಸವಧರ್ಮ ಪೀಠಾಧ್ಯಕ್ಷೆ ಡಾ| ಮಾತೆ ಮಹಾದೇವಿ ಸಾನ್ನಿಧ್ಯ ವಹಿಸಿದ್ದರು. ನೇಗಿನಹಾಳದ ಶ್ರೀಬಸವ ಸಿದ್ಧಲಿಂಗ ಸ್ವಾಮೀಜಿ ಧ್ವಜಾರೋಹಣ ಮಾಡಿದರು. ಶ್ರೀ ಚನ್ನಬಸವಾನಂದ ಸ್ವಾಮೀಜಿ ಪ್ರಾಸ್ತಾವಿಕ ಮಾತನಾಡಿದರು. ಮಾತೆ ಗಂಗಾದೇವಿ, ಮಾತೆ ಜ್ಞಾನೇಶ್ವರಿ ಮಾತೆ, ಸತ್ಯಾದೇವಿ ಮಾತೆ ಬಸವರತ್ನಾದೇವಿ, ಎಸ್‌.ಬಿ. ಜೋಡಳ್ಳಿ, ಆರ್‌.ಜಿ. ಶೆಟಗಾರ ಇದ್ದರು.

Advertisement

ಸಂಗಪ್ಪ ಎಮ್ಮಿ, ಸಿದ್ದಣ್ಣ ನಟೆಗಲ್‌, ಮಲ್ಲಮ್ಮ ಕಮ್ಮಾರ, ನೀಲಾಂಬಿಕಾ ಇಂಗಳಹಳ್ಳಿ ಅವರನ್ನು ಸನ್ಮಾನಿಸಲಾಯಿತು. ಕೆ.ಎಸ್‌. ಕೋರಿಶೆಟ್ಟರ ಆಶಯ ನುಡಿಯನ್ನಾಡಿದರು. ಚಂದ್ರಮ್ಮಾ ನಿರೂಪಿಸಿದರು. ಚಂದ್ರಕಲಾ ಬಿರಾದಾರ ಸ್ವಾಗತಿಸಿದರು. ದೇವೇಂದ್ರಪ್ಪ ಇಂಗಳಹಳ್ಳಿ ವಂದಿಸಿದರು. ಇಳಕಲ್ಲನ ಡಾ| ಮಹಾಂತ ಶಿವಯೋಗಿ ಸ್ವಾಮೀಜಿಯವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next