Advertisement

ಕರಾವಳಿಯ ವಿವಿಧೆಡೆ ಶರನ್ನವರಾತ್ರಿ ಮಹೋತ್ಸವ

11:24 PM Oct 01, 2024 | Team Udayavani |

ಕೊಲ್ಲೂರು ಶ್ರೀ ಮುಕಾಂಬಿಕಾ ದೇಗುಲ
ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ ಅ. 3ರಿಂದ ಅ. 12ರ ವರೆಗೆ ನವರಾತ್ರಿ ಉತ್ಸವ ನಡೆಯಲಿದೆ. ಅ. 11ರಂದು ಮಹಾನವಮಿ ಸಲುವಾಗಿ ಬೆಳಗ್ಗೆ 11.30ಕ್ಕೆ ಚಂಡಿಕಾಯಾಗ ರಾತ್ರಿ 9.30ಕ್ಕೆ ರಥೋತ್ಸವ ನಡೆಯಲಿದೆ.

Advertisement

ಅ. 12ರಂದು ವಿದ್ಯಾರಂಭ, ನವಾನ್ನ ಪ್ರಾಶನ, ವಿಜಯೋತ್ಸವ ನಡೆಯಲಿದೆ ಎಂದು ಆಡಳಿತಾಧಿಕಾರಿ ಉಪ ಕಮಿಷನರ್‌ ಮಹೇಶ್ಚಂದ್ರ ಅವರು ತಿಳಿಸಿದ್ದಾರೆ.

ಪೊಳಲಿ ಶ್ರೀ ರಾಜರಾಜೇಶ್ವರೀ ದೇಗುಲ
ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವವು ಅ. 3ರಿಂದ 11ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಪ್ರತಿನಿತ್ಯ ರಾತ್ರಿ 7ಕ್ಕೆ ನಿತ್ಯ ಪೂಜೆ, 8ಕ್ಕೆ ನವರಾತ್ರಿ ಪೂಜೆ ನಡೆಯುತ್ತದೆ. ಪ್ರತಿದಿನ ಬೆಳಗ್ಗೆ ಭಕ್ತರ ಹರಕೆಯ ಚಂಡಿಕಾ ಹೋಮ, ಅ. 11ರಂದು ದೇಗುಲದ ವತಿಯಿಂದ ಹೋಮ ನಡೆಯುತ್ತದೆ. ಅ. 7ರಂದು ಲಲಿತಾ ಪಂಚಮಿಯಂದು ರಾತ್ರಿ 8ರಿಂದ 10ರ ವರೆಗೆ ದೇವರಿಗೆ ಹರಕೆ ರೂಪದಲ್ಲಿ ಬಂದ ಸೀರೆಗಳನ್ನು 18 ವರ್ಷ ಮೇಲ್ಪಟ್ಟ ಸ್ತ್ರೀಯರಿಗೆ ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತದೆ. ಉತ್ಸವದ ಪ್ರತಿದಿನವೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲ
ಕಟೀಲು: ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಅ. 3ರಿಂದ 13ರ ವರೆಗೆ ನವರಾತ್ರಿ ಉತ್ಸವ ನಡೆಯಲಿದೆ. ಪ್ರತಿದಿನವೂ ಭಜನೆ, ಸಂಜೆ 5ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅ. 8 ರಂದು ಲಲಿತಾಪಂಚಮಿ, ಅ. 9ಕ್ಕೆ ಮೂಲಾನಕ್ಷತ್ರ ಶಾರದಾಪೂಜೆ, ಅ. 12ರಂದು ಮಹಾನವಮಿ, ಅ. 13ರಂದು ವಿಜಯದಶಮಿ, ಮಧ್ವಜಯಂತಿ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟನೆ ತಿಳಿಸಿದೆ.

Advertisement

ಕೋಟ ಅಮೃತೇಶ್ವರೀ ದೇವಸ್ಥಾನ
ಕೋಟ: ಕೋಟ ಶ್ರೀಕ್ಷೇತ್ರ ಅಮೃತೇಶ್ವರೀ ಹಲವು ಮಕ್ಕಳ ತಾಯಿ ಸನ್ನಿಧಿಯಲ್ಲಿ ಅ. 3ರಿಂದ 11ರ ತನಕ ಶರನ್ನವರಾತ್ರಿ ಉತ್ಸವ ನಡೆಯಲಿದೆ. ಈ ಪ್ರಯುಕ್ತ ಪ್ರತಿ ದಿನ ಚಂಡಿಕಾ ಪಾರಾಯಣ, ಶ್ರೀ ದೇವರಿಗೆ ವಿಶೇಷ ಅಲಂಕಾರದಲ್ಲಿ ಪೂಜೆ, ದುರ್ಗಾ ಹೋಮ ಮತ್ತು ಅನ್ನಸಂತರ್ಪಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಲಿದೆ ಎಂದು ಕ್ಷೇತ್ರದ ಮುಖ್ಯಸ್ಥರು ತಿಳಿಸಿದ್ದಾರೆ.

ಪುತ್ತೂರು: ಗೆಜ್ಜೆಗಿರಿ ಕ್ಷೇತ್ರ
ಬಡಗನ್ನೂರು: ದೇಯಿ ಬೈದೇತಿ ಕೋಟಿ ಚೆನ್ನಯ ಮೂಲಸ್ಥಾನ ಗೆಜ್ಜೆಗಿರಿ ಕ್ಷೇತ್ರದಲ್ಲಿ ಅ. 3ರಿಂದ 12ರ ತನಕ ನವರಾತ್ರಿ ನಡೆಯಲಿದೆ.

ಅ. 3ರಂದು ಗಣಪತಿ ಹವನ, ತೆನೆ ಕಟ್ಟುವುದರೊಂದಿಗೆ ನವರಾತ್ರಿ ಮಹೋತ್ಸವ ಆರಂಭಗೊಳ್ಳಲಿದೆ. ಮಹಾಮಾತೆ ದೇಯಿ ಬೈದೇತಿಗೆ 9 ದಿವಸವೂ ವಿಶೇಷ ಅಲಂಕಾರ ಪೂಜೆ ಜರಗಲಿದೆ. ಸುಮಾರು 18 ತಂಡಗಳಿಂದ ಶ್ರೀ ಕ್ಷೇತ್ರದಲ್ಲಿ ನಿರಂತರ ಭಜನ ಸಂಕೀರ್ತನೆ ನಡೆಯಲಿದೆ.

ಮಧ್ಯಾಹ್ನ 12.30ಕ್ಕೆ ಪುಷ್ಪಾಲಂಕಾರ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ನೆರವೇರಲಿದೆ.

ಭಕ್ತರಿಗೆ ವಿಶೇಷ ಸೇವೆಗಳಿಗೆ ಅವಕಾಶ ಕಲ್ಪಿಸಲಾಗಿದ್ದು ಪುಷ್ಪಾಲಂಕಾರ ಮತ್ತು ಅನ್ನದಾನ ಸೇವೆ ಹಾಗೂ ನವರಾತ್ರಿ ಪೂಜೆ ಮಾಡುವ ಅವಕಾಶ ಇದೆ. ಅ. 12ರ ವಿಜಯ ದಶಮಿಯಂದು ಸರಸ್ವತಿ ಪೂಜೆ ಹಾಗೂ ಪೂರ್ವಾಹ್ನ 8ರಿಂದ ಮಧ್ಯಾಹ್ನದ ತನಕ ಅಕ್ಷರಾಭ್ಯಾಸ ನಡೆಯಲಿದೆ ಎಂದು ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಪೀತಾಂಬರ ಹೆರಾಜೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next