ಬಸವಕಲ್ಯಾಣ: ಸಾಮಾಜಿ, ಧಾರ್ಮಿಕ ಸಮತೆ ನೆಲೆಗಟ್ಟಿಲ್ಲಿ ರೂಪುಗೊಂಡ ಶರಣ ಸಾಹಿತ್ಯದ ಕುರಿತು ಅಧ್ಯಯನ, ಸಂಶೋಧನೆಗಳು ನಡೆಯಬೇಕಾದ ಅಗತ್ಯವಿದೆ ಎಂದು ಕಲಬುರಗಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಎಸ್.ಆರ್. ನಿರಂಜನ ಹೇಳಿದರು.
ನಗರದ ಕನ್ನಡ (ಶರಣ ಸಾಹಿತ್ಯ) ಅಧ್ಯಯನ ವಿಭಾಗ ಮತ್ತು ಶರಣ ಸಾಹಿತ್ಯ ಗ್ರಂಥಾಲಯ ಹಾಗೂ ಸಂಪನ್ಮೂಲ ಕೇಂದ್ರದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ನಿಜಶರಣ ಅಂಬಿಗರ ಚೌಡಯ್ಯನವರ ಅಧ್ಯಯನ ಪೀಠದಿಂದ ಶುಕ್ರವಾರ ನಡೆದ ನಿಜಶರಣ ಅಂಬಿಗರ ಚೌಡಯ್ಯನವರ ವಾಙ್ಮಯ ಕುರಿತು ನಡೆದ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾಜಿಕ, ಧಾರ್ಮಿಕ ಕ್ರಾಂತಿ ನಡೆಸಿದ ಶರಣರ ಕುರಿತು ಅಧ್ಯಯನ ಮತ್ತು ಸಂಶೋಧನೆಗೆ ಈ ನೆಲ ಸ್ಫೂರ್ತಿದಾಯಕವಾಗಿದೆ. ಇಲ್ಲಿ ಲಭ್ಯವಿರುವ ಅವಕಾಶಗಳನ್ನು ಬಳಸಿಕೊಂಡು ಶರಣ ಸಾಹಿತ್ಯದ ಬಗ್ಗೆ ಅಧ್ಯಯನಕ್ಕೆ ಹೆಚ್ಚು ಒತ್ತು ನೀಡಬೇಕು. ಅಧ್ಯಯನಕ್ಕಾಗಿ ಇಲ್ಲಿಯ ಅಧ್ಯಯನ ಕೇಂದ್ರಕ್ಕೆ ಅಗತ್ಯವಿರುವ ವ್ಯವಸ್ಥೆಯನ್ನು ಕಲಬುರಗಿ ವಿಶ್ವವಿದ್ಯಾಲಯದಿಂದ ಕಲ್ಪಿಸಲಾಗುವುದು ಎಂದರು.
ಶರಣರ ತತ್ವ-ಚಿಂತನೆಗಳು ಸಮಾಜಕ್ಕೆ ಮಾರ್ಗದರ್ಶಿ ಸೂತ್ರಗಳಾಗಿವೆ. ಬಸವಣ್ಣನವರ, ಅಂಬಿಗರ ಚೌಡಯ್ಯನವರ ಹಾಗೂ ಶರಣರ ವಚನಗಳನ್ನು ಓದಿ ತಿಳಿದುಕೊಳ್ಳಬೇಕು ಎಂದ ಅವರು, ಇಲ್ಲಿಯ ಅಧ್ಯಯನ ಕೇಂದ್ರ ಪಿಜಿಯಾಗಿ ಮುಂದುವರೆಯಲಿದೆ. ಇದು ಸದಾ ಕ್ರಿಯಾಶೀಲತೆ, ಕಾರ್ಯ ಚಟುವಟಿಕೆಗಳಿಂದ ಕೂಡಿದ ಕೇಂದ್ರವಾಗಬೇಕು ಎನ್ನುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ. ಜತೆಗೆ ಶರಣ ಸಾಹಿತ್ಯ ಕುರಿತು ಡಿಪ್ಲೋಮಾ ಆರಂಭಿಸುವ ಉದ್ಧೇಶವಿದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಪ್ರೊ| ವಿ.ಜಿ. ಪೂಜಾರ ಮಾತನಾಡಿ,
ಅಂಬಿಗರ ಚೌಡಯ್ಯನವರ ವಚನಗಳನ್ನು ಅಧ್ಯಯನ ಮಾಡಬೇಕು. ಜತೆಗೆ ಅವರ ತತ್ವ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ವಿವಿ ಕುಲಸಚಿವ (ಮೌಲ್ಯಮಾಪನ) ಪ್ರೊ| ಸಿ.ಎಸ್.ಪಾಟೀಲ ಮಾತನಾಡಿದರು. ಕಲಬುರಗಿ ವಿವಿಯ ಸಿಂಡಿಕೇಟ್ ಸದಸ್ಯರಾದ ಚಂದ್ರಶೇಖರ ನಿಟ್ಟೂರೆ, ವಿದ್ಯಾವಿಷಯಕ ಪರಿಷತ್ ಸದಸ್ಯ ಜಾರ್ಜ್ ಫರ್ನಾಂಡಿಸ್, ಇಲ್ಲಿಯ ಅಧ್ಯಯನ ಕೇಂದ್ರದ ಸ್ಥಳೀಯ ಮುಖ್ಯಸ್ಥೆ ಡಾ| ಸುಜಾತಾ ಜಂಗಮಶೆಟ್ಟಿ, ಟೋಕರಿ-ಕೋಲಿ ಸಮಾಜದ ಅಧ್ಯಕ್ಷ ಈಶ್ವರ ಬೊಕ್ಕೆ ಉಪಸ್ಥಿತರಿದ್ದರು.
ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಮತ್ತು ರಾಜ್ಯಮಟ್ಟದ ವಿಚಾರ ಸಂಕಿರಣದ ಸಂಚಾಲಕರಾದ ಪ್ರೊ| ಎಚ್.ಟಿ. ಪೋತೆ ಸ್ವಾಗತಿಸಿದರು. ನಿಜಶರಣ ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ನಿರ್ದೇಶಕ ಪ್ರೊ| ಎಸ್.ಎಂ. ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು. ಶರಣಪ್ಪ ಕೊಡ್ಲಿ ನಿರೂಪಿಸಿದರು.