Advertisement

ಶರಣರಿಂದ ಸಮ ಸಮಾಜ ನಿರ್ಮಾಣ:  ಸಾಣೇಹಳ್ಳಿ ಶ್ರೀ

11:36 AM Jul 27, 2017 | Team Udayavani |

ಹೊಳಲ್ಕೆರೆ: ಹಿಂದೂ ಧರ್ಮ ಅನೇಕ ಅವಾಂತರಗಳ ಆಗರವಾಗಿದೆ. ಹಾಗಾಗಿ ಲಿಂಗಾಯತ ಮತ್ತು ಹಿಂದೂ ಧರ್ಮಗಳ ನಡುವೆ ಸಾಕಷ್ಟು ಭಿನ್ನತೆ ಇದೆ ಎಂದು ಸಾಣೇಹಳ್ಳಿಯ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಚೀನ ಐತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ, ಪತ್ರಾಗಾರ ಇಲಾಖೆ ಹಾಗೂ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಇತಿಹಾಸ ವಿಭಾಗ ಇವುಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹಂಪಿ ಕನ್ನಡ ವಿವಿಯ ಡಾ| ಎಸ್‌.ವೈ. ಸೋಮಶೇಖರ್‌ ಬರೆದ “ಸ್ಥಳೀಯ ಚರಿತ್ರೆ, ಪುರಾತತ್ವ ಮಾಲೆ, ದೇವಾಲಯಗಳ ಕೋಶ’ ಪುಸ್ತಕ ಬಿಡುಗಡೆ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. 

ಹಿಂದೂ ಧರ್ಮದಲ್ಲಿ ವೈದಿಕ ಪರಂಪರೆ, ಯಜ್ಞ ಯಾಗಾ ದಿಗಳು, ಅನೇಕ ದೇವರ ಅರಾಧನೆ ಮತ್ತು ಗೊಂದಲಗಳಿದ್ದವು. ಬಸವಾದಿ ಶರಣರು ಅಸಮಾನತೆಯನ್ನು ಹೋಗಲಾಡಿಸಿ ಜಾತ್ಯತೀತ ನೆಲೆಗಟ್ಟಿನಲ್ಲಿ ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದರು. ಜನರಿಗೆ ಶೋಷಣೆ ಮುಕ್ತ ಬದುಕು ಕಲ್ಪಿಸುವ ನಿಟ್ಟಿನಲ್ಲಿ ಹೊಸ ಚಿಂತನೆ ಮಾಡಿದರು. ಇಂದು ಲಿಂಗಾಯತ ಎನ್ನುವ ವಿಷಯವನ್ನು ಕೆಲವರು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಇದು ಸರಿಯಲ್ಲ ಎಂದರು. 

ಬೌಗೋಳಿಕ ಹಿನ್ನೆಲೆಯಲ್ಲಿ ಸಿಂಧೂ ನದಿಯ ಕೆಳಭಾಗದಲ್ಲಿರುವ ಎಲ್ಲರನ್ನೂ ಹಿಂದೂಗಳೆಂದು ಕರೆಯಲಾಗಿದೆ. ಹಾಗಾಗಿ ಅಲ್ಲಿರುವ ಎಲ್ಲರೂ ಹಿಂದೂಗಳು ಎನ್ನುವುದಾದರೆ ಇಲ್ಲಿನ ಮುಸ್ಲಿಮರು, ಕ್ರೈಸ್ತರು, ಲಿಂಗವಂತರು ಕೂಡ ಹಿಂದೂಗಳೇ ಅಗುತ್ತಾರೆ ಎಂದು ಪ್ರತಿಪಾದಿಸಿದರು.

ಇಂದು ಪುಸ್ತಕ ಓದುವ ಹವ್ಯಾಸ ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಕಡಿಮೆಯಾಗುತ್ತಿದೆ. ಆದ್ದರಿಂದ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಇತಿಹಾಸವನ್ನು ಅರ್ಥ ಮಾಡಿಕೊಳ್ಳಬೇಕು. ಚರಿತ್ರೆಯಲ್ಲಿರುವ ಅಂಶಗಳನ್ನು ಮರೆತರೆ ಚಾರಿತ್ರ ನಶಿಸುತ್ತದೆ ಎಂದು ಎಚ್ಚರಿಸಿದರು.
ಪ್ರೊ| ಲಕ್ಷ್ಮಣ ತೆಲಗಾವಿ ಮಾತನಾಡಿ, ಎಲ್ಲ ವಿಶ್ವವಿದ್ಯಾಲಯಗಳ ಸಂಶೋಧಕರು ಸ್ಥಳೀಯ ಜನರ ಬದುಕಿನ ಸಾಹಿತ್ಯ, ಸಂಸ್ಕೃತಿ, ಅಚಾರ ವಿಚಾರ, ವಾಸ್ತುಶಿಲ್ಪ ಸೇರಿದಂತೆ ವಿವಿಧ ಆಯಾಮಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ. ಸ್ಥಳೀಯವಾಗಿರುವ ಸಾಮಾಜಿಕ ಬದುಕಿನ ಅಧ್ಯಯನಕ್ಕೂ ಗಮನ ನೀಡಬೇಕು ಎಂದು ಕರೆ ನೀಡಿದರು.

Advertisement

ಕಾಲೇಜು ಸಮಿತಿ ಉಪಾಧ್ಯಕ್ಷ ಎಸ್‌.ಮಾರುತೇಶ್‌, ಪ್ರಾಚಾರ್ಯ ಡಾ.ರಾಜಕುಮಾರ್‌, ಪತ್ರಾಗಾರ ಇಲಾಖೆಯ ಸದಾನಂದಪ್ಪ ಉಪಸ್ಥಿತರಿದ್ದರು.

ದೇವರ ಹೆಸರಿನಲ್ಲಿ ಜಗಳ ಬೇಡ
“ದೇವನೊಬ್ಬ ನಾಮ ಹಲವು’ ಎನ್ನುವ ಮಾತಿದೆ. ಆದರೂ ಜನರು ದೇವರ ಹೆಸರಿನಲ್ಲಿ ಜಗಳವಾಡುತ್ತಿದ್ದಾರೆ. ಯಾವ ದೇವರೂ ಜನರನ್ನು ಜಗಳವಾಡುವಂತೆ ಪ್ರೇರೇಪಿಸುವುದಿಲ್ಲ. ಸ್ವಾರ್ಥ ಸಾಧನೆಗೆ ಸಮಾಜ ಒಡೆಯುವ ಕೆಲಸ ಆಗಬಾರದು. ಮನುಷ್ಯನಲ್ಲಿ ಹೆಚ್ಚುತ್ತಿರುವ ಸ್ವಾರ್ಥದಿಂದ ಯಾವುದೇ ಸಮಾಜವಾಗಲೀ, ರಾಜ್ಯವಾಗಲೀ, ದೇಶವಾಗಲೀ ಉದ್ಧಾರವಾಗಲು ಸಾಧ್ಯವಿಲ್ಲ. ಸ್ವಾರ್ಥ ಎನ್ನುವುದು ಅವನತಿಯ ಲಕ್ಷಣ ಎಂದು ಪಂಡಿತಾರಾಧ್ಯ ಶ್ರೀಗಳು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next