Advertisement

ಹೈಕ ಅಭಿವೃದ್ಧಿಗೆ ಶರಣಬಸವ ವಿವಿ ಪೂರಕ

04:17 AM Feb 23, 2019 | |

ಕಲಬುರಗಿ: ಈ ಭಾಗದ ಹಿಂದುಳಿದ ಹಣೆಪಟ್ಟಿ ತೊಡೆದು ಹಾಕುವಲ್ಲಿ ಅದರಲ್ಲೂ ಶರಣಬಸವ ವಿಶ್ವವಿದ್ಯಾಲಯ ಕೈಗೊಂಡ ಕಾರ್ಯಗಳು ಅಭಿವೃದ್ಧಿ ಪೂರಕವಾಗಿವೆಯಲ್ಲದೇ ಬಹು ಮುಖ್ಯವಾಗಿ ಹಲವು ಯೋಜನೆಗಳು ಕಣ್ಣಾರೆ ಕಂಡಿದ್ದು, ಅನುಭವಕ್ಕೂ ಬಂದಿವೆ ಎಂದು ಜಿಲ್ಲಾಧಿಕಾರಿ ಆರ್‌ ವೆಂಕಟೇಶಕುಮಾರ ಹೇಳಿದರು.

Advertisement

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಪ್ರತಿಷ್ಠಿತ ಶರಣಬಸವ ವಿಶ್ವ ವಿದ್ಯಾಲಯ ಪ್ರಸಕ್ತ ಸಾಲಿನಲ್ಲಿ ದಿ ಹಿಂದೂ ಮತ್ತು ಫ್ಯೂಚರ್‌ ಇಂಡಿಯಾ ಕ್ಲಬ್‌ ಸಹಯೋಗದೊಂದಿಗೆ ಪ್ರಥಮ ಬಾರಿಗೆ ಮೂರು ದಿನಗಳ ಹಮ್ಮಿಕೊಂಡಿರುವ ಯುವಜನೋತ್ಸವ ಹಾಗೂ ಜ್ಞಾನೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
 
ಹೈದರಾಬಾದ್‌ ಕರ್ನಾಟಕ ಪ್ರದೇಶದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಶಿಕ್ಷಣ ಕ್ಷೇತ್ರದಲ್ಲಿ ಮಹೋನ್ನತ ಸಾಧನೆ ಮಾಡಿದೆ. ಇದರ ಶ್ರೇಯಸ್ಸು ಪರಮ ಪೂಜ್ಯ ಡಾ| ಶರಣಬಸವಪ್ಪ ಅಪ್ಪ ಅವರಿಗೆ ಸಲ್ಲುತ್ತದೆ. ಶಿಕ್ಷಣ ಪಸರಿಸುವ ಕಾಯಕವನ್ನು ಅವರು ಒಂದು ವೃತದಂತೆ ಪಾಲಿಸಿಕೊಂಡು ಬಂದಿದ್ದಾರೆ. ಅದರ ಫಲವಾಗಿಯೇ ಶಿಕ್ಷಣ ರಂಗದಲ್ಲಿ ಈಗ ಕಲಬುರಗಿ ಮಹಾನಗರ ಜಾಗತಿಕವಾಗಿ ಎಲ್ಲರ ಗಮನ ಸೆಳೆಯುತ್ತಿದೆ ಎಂದು ಹೇಳಿದರು.

ವಿವಿ ಹಮ್ಮಿಕೊಂಡಿರುವ ಜ್ಞಾನೋತ್ಸವ ಕಾರ್ಯಕ್ರಮ ಕೇವಲ ಸಾಂಸ್ಕೃತಿಕ ಕಾರ್ಯಕ್ರಮವಾಗಿರದೇ ಪ್ರತಿಭೆಗಳ ನೈಜ ಅನಾವರಣ ಕಾರ್ಯಕ್ರಮವಾಗಿದೆ. ವಿದ್ಯಾರ್ಥಿಗಳು ಸಾಫ್ಟ್‌ ಕೌಶಲ್ಯ ಹೊಂದುವುದರ ಮೂಲಕ ವೃತ್ತಿ ಕಲಿಯಬೇಕು ಎಂದು ಸಲಹೆ ನೀಡಿದರು.
 
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ಅಭ್ಯಾಸದ ಜತೆಗೆ ಸಹಪಠ್ಯ ಚಟುವಟಿಕೆ ಹಮ್ಮಿಕೊಳ್ಳುವುದರಿಂದ ಸರ್ವಾಂಗೀಣ ಅಭಿವೃದ್ಧಿಯಾಗುತ್ತದೆ. ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿರುವ ಶರಣಬಸವ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಡಾ| ನಿರಂಜನ ನಿಷ್ಠಿ, ಯುವಜನೋತ್ಸವ ಆಯೋಜನೆಯಿಂದ ವಿದ್ಯಾರ್ಥಿಗಳಲ್ಲಿನ ಸೂಪ್ತ ಪ್ರತಿಭೆ ಹೊರ ಬರಲು ಸಾಧ್ಯವಾಗುತ್ತದೆ. ಅಲ್ಲದೇ ಸಮಗ್ರ ವಿಕಾಸ ಹೊಂದಲು ಸಹಾಯಕ ಹಾಗೂ ಪೂರಕವಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಯುವಜನೋತ್ಸವ- ಜ್ಞಾನೋತ್ಸವ ವಿಶೇಷ ಸಂಚಿಕೆ ಹೊರತರಲಾಯಿತು. 

Advertisement

ವಿದ್ಯಾರ್ಥಿನಿ ಐಶಾ ನಿರ್ಮಾ, ರಿಶೀಲಾ, ಮೇಘನಾ ಬಂಡಿ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ ರೇವತಿ ಗುಡ್ಡಾ ಪ್ರಾರ್ಥಿಸಿದರು. ಡಾ| ಲಕ್ಷ್ಮೀ ಮಾಕಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಶರಣಬಸವ ವಿಶ್ವವಿದ್ಯಾಲಯದ ಡೀನ್‌ ಡಾ| ಲಿಂಗರಾಜ ಶಾಸ್ತ್ರಿ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಶರಣ, ಸ್ಫೂರ್ತಿ ನಿರೂಪಿಸಿದರು. ಪ್ರೊ| ಶರಣ ಶಗೇದಾರ ವಂದಿಸಿದರು.

ಸಮ ಕುಲಪತಿಗಳಾದ ಡಾ| ವಿ.ಡಿ. ಮೈತ್ರಿ, ಎನ್‌. ಎಸ್‌. ದೇವರಕಲ್‌, ಡಾ| ಬಸವರಾಜ ಮಠಪತಿ, ಮೌಲ್ಯಮಾಪನ ಕುಲಸಚಿವ ಡಾ| ಶಿವದತ್ತ ಹೊನ್ನಳ್ಳಿ, ಡಾ| ಶಿವಕುಮಾರ ಜವಳಗಿ, ಪ್ರೊ| ಶರಣು ದೇಗಾಂವ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಟಿ.ವಿ. ಶಿವಾನಂದನ್‌, ಡಾ| ಎಂ.ಎಸ್‌. ಪಾಟೀಲ, ಡಾ| ಪಿ.ಜಿ. ಜವಳಗಿ ಇದ್ದರು. 

ಕಾರ್ಯಕ್ರಮದ ಮೊದಲ ದಿನ ರಂಗೋಲಿ, ಸ್ಕೆಚ್‌, ಚರ್ಚೆ, ವಾಲ್‌ ಪೇಂಟಿಂಗ್‌, ಅಟೋ ಕ್ಯಾಡ್‌, ಆ್ಯಡ್‌ ಮ್ಯಾಡ್‌ ಶೋ, ಕೋಡಿಂಗ್‌, ಮೇಹಂದಿ, ಮೂರ್ತಿ ತಯಾರಿಕೆ, ಏಕವ್ಯಕ್ತಿ ಗಾಯನ, ಗುಂಪು ಗಾಯನ ಸೇರಿದಂತೆ ಇತರೆ ಸ್ಪರ್ಧೆಗಳು ನಡೆದವು. ಆಂಧ್ರಪ್ರದೇಶ, ತೆಲಂಗಾಣ, ಹುಬ್ಬಳ್ಳಿ, ಬೆಂಗಳೂರು ಮತ್ತು ಮಂಗಳೂರಿನಿಂದ ತೀರ್ಪುಗಾರರರು ಆಗಮಿಸಿದ್ದರು.

ಗಮನ ಸೆಳೆದ ಮೆರವಣಿಗೆ ಯುವಜನೋತ್ಸವ ಮೆರವಣಿಗೆ ಕಾರ್ಯಕ್ರಮಕ್ಕೆ ಮೆರಗು ತಂದಿತು. ಪ್ರವಾಸೋದ್ಯಮ ವಿಭಾಗದ ವಿದ್ಯಾರ್ಥಿಗಳು ಡೊಳ್ಳು ಬಾರಿಸುವುದರ ಮೂಲಕ ಕಳೆ ತಂದರು. ತಮ್ಮ ಕಲೆ ಪರಿಚಯಿಸುವುದಕ್ಕಾಗಿ ಬೆಂಗಳೂರು, ಹೈದ್ರಾಬಾದ್‌, ಪುಣೆ, ವಿಜಯಪುರ ವಿವಿಧ ಪ್ರದೇಶಗಳಿಂದ ಆಗಮಿಸಿದ ವಿದ್ಯಾರ್ಥಿಗಳಿಂದ ಕಾರ್ಯಕ್ರಮಕ್ಕೆ ಮತ್ತಷ್ಟು ಶೋಭೆ ಹೆಚ್ಚಿಸಿತ್ತು. ಒಟ್ಟಾರೆ ಪ್ರಥಮ ಯುವಜನೋತ್ಸವ ಕಣ್ಮನ ಸೆಳೆಯಿತು.

Advertisement

Udayavani is now on Telegram. Click here to join our channel and stay updated with the latest news.

Next