ದಾವಣಗೆರೆ: ಸರ್ವರನ್ನು ಸಮಾನತೆಯಿಂದ ಕಾಣುವ ಮೂಲಕ ಎಲ್ಲರನ್ನು ಒಂದು ಮಾಡುವ ಶಕ್ತಿ ಶರಣ ಸಂಸ್ಕೃತಿಗಿದೆ ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.
ಜಯದೇವ ಜಗದ್ಗುರುಗಳ 62ನೇ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಮಂಗಳವಾರ ವಿನೋಬನಗರದ ಶಂಭುಲಿಂಗೇಶ್ವರ ದೇವಸ್ಥಾನದಿಂದ ವಿವಿಧೆಡೆ ಹಮ್ಮಿಕೊಂಡಿದ್ದ ಜನಜಾಗೃತಿ ಪಾದಯಾತ್ರೆ ನೇತೃತ್ವ ವಹಿಸಿ ಮಾತನಾಡಿದರು.
ಶರಣ ಸಂಸ್ಕೃತಿ ಬೇರೆ ಅಲ್ಲ. ಅದು ವಿಶ್ವ ಸಂಸ್ಕೃತಿಯಾಗಿದೆ. ಎಲ್ಲರನ್ನು ಒಂದು ಮಾಡುವ ಸಂಸ್ಕೃತಿ ಇದಾಗಿದೆ. ಈ ಸಂಸ್ಕೃತಿಯನ್ನು ನಿತ್ಯದ ಜೀವನದಲ್ಲಿ ಅಳವಡಿಸಿಕೊಂಡರೆ ಎಲ್ಲಾ ರೀತಿಯ ಸುಖ, ಶಾಂತಿ, ನೆಮ್ಮದಿ ದೊರಕುತ್ತದೆ ಎಂದರು.
ಬಸವಾದಿ ಶರಣರು ನೀಡಿರುವ ಕಾಯಕ, ದಾಸೋಹ, ಸಮಾನತೆ, ಶಿವಯೋಗ ತತ್ವಗಳು ಎಲ್ಲರ ಬದುಕಿಗೆ ಜಾಗತಿಕ ತತ್ವಗಳಾಗಿವೆ. ಅವರ ಆದರ್ಶಗಳು ಪ್ರತಿಯೊಬ್ಬರ ಬದುಕಿನ ಪ್ರೀತಿಯ ಸಂಕೇತ. ಮಾನವೀಯತೆಯ ಸಂಸ್ಕೃತಿ, ಸರ್ವರಿಗೂ ಸಮಪಾಲು, ಸಮಬಾಳು ಎನ್ನುವ ಸಂಸ್ಕೃತಿ ಇದಾಗಿದೆ ಎಂದು ಹೇಳಿದರು. ಮನುಷ್ಯ ಇಂದು ಎಷ್ಟೇ ಗಳಿಸಿದ್ದರೂ ಕೂಡ ಇನ್ನೂ ಬಯಕೆಗಳ ಬೆನ್ನೇರಿ ಹೊರಟಿದ್ದಾನೆ. ಹಾಗಾಗಿ ಮನಸಿನಲ್ಲಿ ಶಾಂತಿ, ನೆಮ್ಮದಿ ಎನ್ನುವುದು ಕಣ್ಮರೆಯಾಗಿದೆ. ಮನುಷ್ಯ ತನ್ನ ಬಯಕೆಗಳಿಗೆ ಬ್ರೇಕ್ ಹಾಕಿದಾಗ ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯ ಎಂದರಲ್ಲದೇ, ಮನುಷ್ಯನಿಗೆ ಅತ್ಯವಶ್ಯವಿರುವ ನೆಮ್ಮದಿಯ ಗುಟ್ಟನ್ನು ಚಿತ್ರದುರ್ಗ ಬೃಹನ್ಮಠದ ಶ್ರೀ ಡಾ| ಮುರುಘಾಶರಣರು ಜ.18ರಿಂದ 20ರವರೆಗೆ ಶಿವಯೋಗ್ರಾಮದಲ್ಲಿ ನಡೆಯುವ ಶ್ರೀ ಜಯದೇವ ಜಗದ್ಗುರುಗಳ 62ನೇ ಶರಣ ಸಂಸ್ಕೃತಿ ಉತ್ಸವ ಹಾಗೂ ಸಹಜ ಶಿವಯೋಗದಲ್ಲಿ ತಿಳಿಸಲಿದ್ದಾರೆ ಎಂದರು.
ವಿನೋಬನಗರದ ಎ. ನಾಗರಾಜ್ ಅಭಿಮಾನಿಗಳ ಬಳಗದ ಸೋಮಶೇಖರ್, ಲಕ್ಷ್ಮಣ್, ಶಿವಾಜಿರಾವ್, ಕಾಳಿಂಗರಾಜು, ಯೋಗೀಶ್, ಯುವರಾಜ್, ಚನ್ನಬಸವ ಶೀಲವಂತ್, ಎಂ.ಎಸ್. ಪ್ರೇರಣಾ, ನಿಂಗಪ್ಪ, ಕೊಟ್ರೇಶ್ ಹಿರೇಮs್, ಮಂಜಣ್ಣ, ಶಿವರಾಜ್, ವಾಗೀಶ್, ಬೆಳವಾಗಿ ಚನ್ನಬಸಪ್ಪ, ಶರಣಪ್ಪ ಇತರರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಬಸವಕಲಾಲೋಕದ ಕಲಾವಿದರು ದಾರಿಯುದ್ದಕ್ಕೂ ವಚನ ಗಾಯನ ನಡೆಸಿಕೊಟ್ಟರು.