Advertisement

ವಿಜೃಂಭಣೆಯಿಂದ ನಡೆದ ಶಾರದಾಂಬಾ ರಥೋತ್ಸವ

11:16 PM Feb 11, 2020 | Lakshmi GovindaRaj |

ಶೃಂಗೇರಿ: ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದ ಶ್ರೀ ಶಾರದಾಂಬಾ ಮಹಾರಥೋತ್ಸವ ಮಾಘ ಕೃಷ್ಣ ತದಿಗೆ ದಿನವಾದ ಮಂಗಳವಾರ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಶ್ರೀಮಠದಲ್ಲಿ ನಡೆಯುವ ಉತ್ಸವದಲ್ಲಿ ಮಹಾ ರಥೋ ತ್ಸವ ಅತ್ಯಂತ ಮಹತ್ವದ್ದಾಗಿದ್ದು, ಇದರ ಅಂಗವಾಗಿ ವಿವಿಧ ಧಾರ್ಮಿಕ ವಿಧಿ  ವಿಧಾನಗಳು ಮಾಘ ಶುಕ್ಲ ಪೂರ್ಣಿ ಮೆಯಿಂದ ಮಾಘ ಕೃಷ್ಣ ಚೌತಿಯವರೆಗೆ ನಡೆಯಲಿದೆ.

Advertisement

ಸೋಮವಾರ ಬೆಟ್ಟದ ಶ್ರೀ ಮಲಹಾನಿಕರೇಶ್ವರ ಸ್ವಾಮಿ ದೇವಸ್ಥಾನದಿಂದ ಶ್ರೀ ಭವಾನಿ ಅಮ್ಮನವರ ಉತ್ಸವ ಮೂರ್ತಿಯನ್ನು ಶ್ರೀ ಶಾರದಾಂಬಾ ಸನ್ನಿ ಧಿಗೆ ಉತ್ಸವದಲ್ಲಿ ತರಲಾಯಿತು. ನಂತರ ಸುಹಾಸಿನಿ ಪೂಜೆ ಸಂಜೆ ಬೀದಿ ಉತ್ಸವ ನಡೆಯಿತು. ರಥೋತ್ಸವ ಅಂಗವಾಗಿ ಮಂಗಳವಾರ ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಉಭಯ ಜಗದ್ಗುರುಗಳಾದ ಶ್ರೀ ಭಾರತೀತೀರ್ಥ ಸ್ವಾಮೀಜಿಗಳು ಬೆಳಗ್ಗೆ ಶ್ರೀಮಠಕ್ಕೆ ಆಗಮಿಸಿ ಶ್ರೀಮಠದ ಹೊರ ಮತ್ತು ಒಳ ಪ್ರಾಂಗಣದ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಶ್ರೀ ಶಾರ ದಾಂಬೆಯ ಉತ್ಸವ ಮೂರ್ತಿಯನ್ನು ವಾದ್ಯಮೇಳದೊಂದಿಗೆ ಅಲಂಕೃತ ರಥದ ಬಳಿ ತಂದು ರಥಕ್ಕೆ ಮೂರು ಪ್ರದಕ್ಷಿಣೆ ಹಾಕಲಾಯಿತು. ನಂತರ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು.

ಬಳಿಕ ರಥಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ರಥದ ಎದುರು ಆನೆ, ಅಶ್ವ, ತಟ್ಟಿರಾಯ, ಸ್ತಬ್ಧ ಚಿತ್ರ, ಭಜನಾ ತಂಡಗಳು ಉತ್ಸವದ ಮೆರುಗು ಹೆಚ್ಚಿಸಿದವು. ರಥ ಸಾಗುವ ದಾರಿಯಲ್ಲಿ ತಳಿರು ತೋರಣ ಕಟ್ಟಿ ರಂಗೋಲಿ ಯಿಂದ ಅಲಂಕರಿಸಲಾಗಿತ್ತು. ಶ್ರೀಮಠದ ಶ್ರೀ ಸದ್ವಿದ್ಯಾ ಸಂಜೀವಿನಿ ಸಂಸ್ಕೃತ ಪಾಠಶಾಲೆಯ ವಿದ್ಯಾರ್ಥಿಗಳ ವೇದ ಘೋಷ, ಭಕ್ತರ ಜಯಘೋಷದೊಂದಿಗೆ ರಥ ಎಳೆಯ ಲಾಯಿತು. ನಂತರ ಭಾರತಿ ಚೌಕದಲ್ಲಿರುವ ಕಟ್ಟೆಬಾಗಿಲಿನ ಶ್ರೀ ಗಣಪತಿಗೆ ಪೂಜೆ ಸಲ್ಲಿಸಲಾಯಿತು.

ಶತಚಂಡಿಯಾಗದ ಪೂರ್ಣಾಹುತಿ: ರಥೋತ್ಸವ ಅಂಗವಾಗಿ ಫೆ.8ರಂದು ಶ್ರೀಮಠದ ಶಕ್ತಿ ಗಣಪತಿ ಸನ್ನಿಧಿಯಲ್ಲಿ ಗಣಪತಿ ಪೂಜೆಯೊಂದಿಗೆ ಲಕ್ಷಮೋದಕ ಗಣಹೋಮ ನಡೆಯಿತು. ನಂತರ ಧ್ವಜಾರೋಹಣ, ಜಪ ಮತ್ತು ಪಾರಾಯಣ, ಶ್ರೀ ಬ್ರಹ್ಮ ದೇವರಲ್ಲಿ ವಿಶೇಷ ಪೂಜೆ, ಮಂಗಳಾರತಿ, ಬ್ರಹ್ಮಸಂತರ್ಪಣೆ ನಡೆಯಿತು. ಮಹಾರಥೋತ್ಸವ ಅಂಗವಾಗಿ ಲೋಕ ಕಲ್ಯಾಣಕ್ಕಾಗಿ ಶ್ರೀ ಮಠದಲ್ಲಿ ಶತಚಂಡಿ ಮಹಾಯಾಗ ಏರ್ಪಡಿಸಲಾಗಿದ್ದು, ಫೆ.12ರಂದು ಜಗದ್ಗುರುಗಳ ಉಪಸ್ಥಿತಿಯಲ್ಲಿ ಪೂರ್ಣಾಹುತಿಯೊಂದಿಗೆ ಯಾಗ ಸಂಪನ್ನಗೊಳ್ಳಲಿದೆ. ರಥೋತ್ಸವ ಅಂಗವಾಗಿ ಶನಿವಾರ ಸಂಜೆ ತುಂಗಾ ನದಿಯಲ್ಲಿ ತೆಪ್ಪೋತ್ಸವ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next